ಹಾಸನ: ನಗರ ಪಾಲಿಕೆಯ ಯಾವುದೇ ಟೆಂಡರ್‌ಗೂ ಎಲ್ಲ ಸದಸ್ಯರ ಒಪ್ಪಿಗೆ ಸಹಿ ಪಡೆಯಬೇಕು. ಕಾಮಗಾರಿ ಲೋಪವಿದ್ದರೆ ಲಿಖಿತ ರೂಪದಲ್ಲಿ ದೂರು ಸಲ್ಲಿಸುವಂತೆ ಮೇಯರ್ ಗಿರೀಶ್ ಚನ್ನವೀರಪ್ಪ ತಿಳಿಸಿದರು.
ಇಲ್ಲಿನ ಮಹಾನಗರ ಪಾಲಿಕೆ ರಾಷ್ಟ್ರಕವಿ ಕುವೆಂಪು ಸಭಾಂಗಣದಲ್ಲಿ ಗುರುವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿದರು.
‘ಬಹುತೇಕ ಸದಸ್ಯರು ಸಭೆಗಳಲ್ಲಿ ಮಾತ್ರ ದೂರು ತಿಳಿಸುತ್ತೀರಿ. ಆದರೆ ಲಿಖಿತ ರೂಪದಲ್ಲಿ ದೂರು ನೀಡಿದರೆ ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ’ ಎಂದರು.
ನಗರ ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಿಗೂ ಸಮನಾಗಿ ಅನುದಾನ ಹಂಚಿಕೆ ಮಾಡಬೇಕು. ಕಾಮಗಾರಿ ಆಗದೇ ಬಿಲ್ ಪಾವತಿ ಮಾಡಿರುವ ಬಗ್ಗೆ ಕ್ರಮ ಕೈಗೊಳ್ಳುವುದು ಸೇರಿದಂತೆ ಹಿಂದಿನ ಸಭೆಯ ಹಲವು ವಿಷಯಗಳನ್ನು ಪಾಲಿಕೆಯ ಬಹುತೇಕ ಸದಸ್ಯರು ಪ್ರಸ್ತಾಪಿಸಿದರು.
ಈ ಹಿಂದೆ ಕರೆಯಲಾಗಿರುವ ಟೆಂಡರ್ ತೆರೆಯಲು, ಹಿಂದಿನ ಆಯುಕ್ತ ರಮೇಶ್ ನಿರ್ವಹಿಸಿದ್ದ ಪಾಲಿಕೆಯ ಟೆಂಡರ್ ಮ್ಯಾಪಿಂಗ್ ಕೆಲಸ ಮಾಡುತ್ತಿಲ್ಲ. ಪರ್ಯಾಯ ಕ್ರಮ ಕೈಗೊಳ್ಳುವ ಕುರಿತು ಆಯುಕ್ತ ಕೃಷ್ಣಮೂರ್ತಿ ಭರವಸೆ ನೀಡಿದರು.
ಕೆಲಸ ಆಗದೇ ಬಿಲ್ ಪಾವತಿ:
ಕೆಲಸ ಆಗದೇ ಬಹುತೇಕ ಬಿಲ್ ಮಾಡಲಾಗಿದೆ ಎಂದು ಹಲವು ಸದಸ್ಯರು ಸಭೆಯ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆಯ ಅಧಿಕಾರಿ ಚೆನ್ನೇಗೌಡ, ಆ ರೀತಿಯ ಯಾವುದೇ ಬಿಲ್ ಮಾಡಿಲ್ಲ ಎಂದರು.
ಮಲ್ಲಿಗೆ ಹೋಟೆಲ್ ಬಳಿಯ ಮಣ್ಣಿನ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ. ಈ ರೀತಿ ಕಳಪೆ ಕಾಮಗಾರಿಯಾದರೆ ಸಾರ್ವಜನಿಕರ ಹಣ ಪೋಲಾಗುವುದಿಲ್ಲವೇ ಎಂದು ಸದಸ್ಯರು ತರಾಟೆಗೆ ತೆಗೆದುಕೊಂಡರು. ಲಿಖಿತ ರೂಪದಲ್ಲಿ ದೂರು ನೀಡುವಂತೆ ಸದಸ್ಯರಿಗೆ ತಿಳಿಸಿದ ಮೇಯರ್ ಗಿರೀಶ್, ಕಾಮಗಾರಿ ಕೈಗೊಂಡ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದರು.
ಇತ್ತೀಚೆಗೆ ಕರೆಯಲಾದ ₹ 50 ಲಕ್ಷ ಪ್ಯಾಕೇಜ್ ಟೆಂಡರ್‌ನಲ್ಲಿ ಎರಡು ಮತ್ತು ಐದನೇ ವಾರ್ಡ್‌ನಲ್ಲಿ ಗುಂಡಿ ಮುಚ್ಚುವ ಕೆಲಸ ಸಮರ್ಪಕವಾಗಿ ಆಗಿಲ್ಲ. ಗುತ್ತಿಗೆ ಪಡೆದ ಪ್ರಕಾಶ್ ಎಂಬುವವರು ಬೇಕಾಬಿಟ್ಟಿ ಕೆಲಸ ಮಾಡಿರುವ ಬಗ್ಗೆ ದೂರು ನೀಡಲಾಯಿತು. ಈ ವೇಳೆ ಬಿಲ್ ಪಾವತಿ ಸ್ಥಗಿತಗೊಳಿಸಿ ಪರಿಶೀಲಿನೆ ನಂತರ ಹಣ ಬಿಡುಗಡೆಗೆ ಮೆಯರ್ ಸೂಚಿಸಿದರು.
ಒತ್ತುವರಿ ತೆರವಿಗೆ ಉದಾಸೀನ ಏಕೆ?:
ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ, ನಗರಸಭೆ ಜಾಗ ಒತ್ತುವರಿ ಮಾಡಿರುವ ಕುರಿತು ಹಲವಾರು ವರ್ಷದಿಂದಲೂ ಸಾಮಾನ್ಯ ಸಭೆಯಲ್ಲಿ ಗಮನಕ್ಕೆ ತರಲಾಗುತ್ತಿದ್ದು, ಗಂಭೀರ ಕ್ರಮಗಳು ಆಗಿಲ್ಲ ಎಂದು ಸದಸ್ಯ ಯೋಗೇಂದ್ರ ಬಾಬು ದೂರಿದರು.
ಸಾಮಾನ್ಯ ಜನರು ಈ ರೀತಿ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿದರೆ, ಏಕಾಏಕಿ ತೆರವು ಮಾಡುತ್ತೀರಿ. ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸುಮಾರು ₹ 100 ಕೋಟಿ ಮೌಲ್ಯದ ಪಾಲಿಕೆ ಆಸ್ತಿ ಒತ್ತುವರಿ ಮಾಡಿಕೊಂಡು ಅಕ್ರಮ ಎಸಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಗರಸಭೆಯಿಂದ ಅನುಮತಿ ಪಡೆಯದೇ ಸಾಲಗಾಮೆ ರಸ್ತೆಯಲ್ಲಿ ಹತ್ತಾರು ಮಳಿಗೆಗಳನ್ನು ನಿರ್ಮಿಸಲಾಗಿದೆ. ಈ ಕುರಿತು ಮಹಾನಗರ ಪಾಲಿಕೆ ಕಾಲೇಜಿನ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಮೇಯರ್ ಗಿರೀಶ್ ಮಾತನಾಡಿ, ‘1.37 ಎಕರೆ ಜಾಗವನ್ನು 1960 ರಲ್ಲಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಗೆ ಮಂಜೂರು ಮಾಡಲಾಗಿದೆ ಎಂದು ಸಂಸ್ಥೆಯವರು ತಿಳಿಸಿದ್ದಾರೆ. ಮುಂದಿನ ಕ್ರಮವಾಗಿ ಇಂಡಿಕರಣವಾದಲ್ಲಿ ಸಮಸ್ಯೆ ಬಗೆಹರಿಯಲಿದೆ. ಈ ಕುರಿತು ಡಿಡಿಎಲ್‌ಆರ್ ಮೂಲಕ ಸರ್ವೆ ಮಾಡಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಆಯುಕ್ತ ಕೃಷ್ಣಮೂರ್ತಿ ಮಾತನಾಡಿ, ‘ಸೆ.9ರಂದು ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಗೆ ಪತ್ರದ ಮೂಲಕ ತಿಳಿಸಲಾಗಿದೆ. ಸರ್ವೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ಸರ್ವೆ ಕಾರ್ಯ ಮಾಡಿದಾಗ ಅಕ್ಕಪಕ್ಕದವರು ಸಹಿ ಹಾಕದ್ದರಿಂದ ಪ್ರಕರಣ ಇತ್ಯರ್ಥವಾಗಿಲ್ಲ’ ಎಂದರು.
ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಗೆ ಒಳಪಟ್ಟ 50 ಎಕರೆ ಕಂದಾಯ ಭೂಮಿಯನ್ನು ಸಂಪೂರ್ಣವಾಗಿ ಸರ್ವೆ ಮಾಡಿ. ಈ ವ್ಯಾಪ್ತಿಯಲ್ಲಿರುವ ಕಟ್ಟಡಗಳಿಂದ ಎಷ್ಟು ಕಂದಾಯ ಬರುತ್ತಿದೆ? ಪಾಲಿಕೆಗೆ ಪಾವತಿ ಆಗುತ್ತಿರುವ ಕಂದಾಯ ಎಷ್ಟು ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಮೇಯರ್, ಆಯುಕ್ತರಿಗೆ ಸೂಚನೆ ನೀಡಿದರು.
ಈ ಸಂಸ್ಥೆಯಿಂದ ಇತ್ತೀಚೆಗೆ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಈ ಕಟ್ಟಡ ಸುತ್ತ 20 ಮೀಟರ್ ಜಾಗ ಬಿಡಬೇಕು ಎಂಬ ನಿಯಮವಿದೆ. ಕಾನೂನುಬಾಹಿರವಾಗಿ ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ಪಾಲಿಕೆ ಗಮನಹರಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಇತ್ತೀಚಿಗೆ ನಿಧನರಾದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ, ಸಾಹಿತಿ ಎಸ್.ಎಲ್. ಭೈರಪ್ಪ ಸೇರಿದಂತೆ ಇತರೆ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಉಪ ಮೇಯರ್ ಹೇಮಲತಾ ಕಮಲ್ ಕುಮಾರ್, ಆಯುಕ್ತ ಕೃಷ್ಣಮೂರ್ತಿ, ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.
ಸ್ಥಾಯಿ ಸಮಿತಿ ರಚಿಸಿ
ಪಾಲಿಕೆಯಲ್ಲಿ ಸ್ಥಾಯಿ ಸಮಿತಿ ರಚಿಸುವಂತೆ ಪಾಲಿಕೆ ಸದಸ್ಯರಾದ ಸಂತೋಷ್ ರಕ್ಷಿತ್ ಮಂಜುನಾಥ್ ಸೇರಿದಂತೆ ಬಹುತೇಕ ಸದಸ್ಯರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮೆಯರ್ ಗಿರೀಶ್ ಸಮಿತಿ ರಚಿಸಲು ಅಭ್ಯಂತರವಿಲ್ಲ. ಈ ಕುರಿತು ಮುಂದಿನ ಸಭೆಯಲ್ಲಿ ನಡವಳಿ ಸೇರಿಸಿ ಪ್ರಾದೇಶಿಕ ಆಯುಕ್ತರ ಮೂಲಕ ಚುನಾವಣೆ ದಿನಾಂಕ ನಿಗದಿಯೊಂದಿಗೆ ಸಮಿತಿ ರಚಿಸಬಹುದಾಗಿದೆ ಎಂದರು. ಇರುವ ಕಡಿಮೆ ಅವಧಿಗೆ ಸಮಿತಿ ರಚನೆ ಏಕೆ ಎಂದು ಸದಸ್ಯರಾದ ಕ್ರಾಂತಿ ಪ್ರಸಾದ್ ತ್ಯಾಗಿ ಪ್ರಶ್ನಿಸಿದರು. ಕಡಿಮೆ ಸಮಯವಾದರೂ ಸಮಿತಿ ರಚನೆಯಿಂದ ಸದಸ್ಯರಿಗೆ ಅಧಿಕಾರ ಹಂಚಿಕೆಯೊಂದಿಗೆ ಪಾಲಿಕೆಯಲ್ಲಿನ ಕೆಲಸಕ್ಕೆ ವೇಗ ಹೆಚ್ಚಲಿದೆ. ಪಾಲಿಕೆ ಸದಸ್ಯರ ಆಡಳಿತ ಅವಧಿ ವಿಸ್ತರಣೆಗೆ ನ್ಯಾಯಾಲಯದ ಮೊರೆ ಹೋಗಿದ್ದು ಆರು ಅಥವಾ ಒಂದು ವರ್ಷದವರೆಗೂ ಸದಸ್ಯರ ಅವಧಿ ವಿಸ್ತರಣೆ ಆಗುವ ಸಾಧ್ಯತೆ ಇದೆ. ಆದ್ದರಿಂದ ಸಮಿತಿ ರಚನೆಯಿಂದ ಅನುಕೂಲವಾಗಲಿದೆ ಎಂದು ಬಹುತೇಕ ಸದಸ್ಯರು ಸಭೆಯ ಗಮನಕ್ಕೆ ತಂದರು. ‘ಶೀಘ್ರದಲ್ಲಿ ಸಭೆ ಕರೆದು ಸ್ಥಾಯಿ ಸಮಿತಿ ರಚನೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಮೇಯರ್ ಭರವಸೆ ನೀಡಿದರು.
ಸಮನಾಗಿ ಅನುದಾನ ಹಂಚಿಕೆ ಆಗಲಿ
ಪಾಲಿಕೆ ವ್ಯಾಪ್ತಿಗೆ ಬರುವ ಎಲ್ಲಾ ವಾರ್ಡ್‌ಗಳಿಗೂ ಸಮನಾಗಿ ಅನುದಾನ ಹಂಚಿಕೆ ಮಾಡುವಂತೆ ಸದಸ್ಯರು ಆಗ್ರಹಿಸಿದರು. ಎಲ್ಲ ವಾರ್ಡ್‌ಗಳು ನನ್ನ ಅಧಿಕಾರ ವ್ಯಾಪ್ತಿಗೆ ಬರುತ್ತವೆ. ಸಮನಾಗಿಯೇ ಅನುದಾನ ಹಂಚಿಕೆ ಮಾಡಲಾಗುವುದು. ತಾರತಮ್ಯ ಮಾಡುವುದಿಲ್ಲ. ಈ ಬಗ್ಗೆ ನಾನು ಭರವಸೆ ನೀಡುತ್ತೇನೆ ಎಂದು ಮೇಯರ್ ಗಿರೀಶ್ ಹೇಳಿದರು. ಟೆಂಡರ್ ಪ್ರಕ್ರಿಯೆ ನಡೆದ ಬಳಿಕ ಎಲ್ಲ ಸದಸ್ಯರಿಗೂ ತಿಳಿಸಲಾಗುವುದು. ಪ್ರತಿಯೊಬ್ಬರ ಸಹಿ ಪಡೆದೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಈ ಸಂಬಂಧ ಸ್ಥಳೀಯ ಶಾಸಕರು ಸಂಸದರು ಸ್ಥಾಯಿ ಸಮಿತಿ ಸದಸ್ಯರು ಸೇರಿದಂತೆ ಎಲ್ಲರಿಗೂ ಮಾಹಿತಿ ನೀಡುವಂತೆ ಹಾಗೂ ಸಹಿ ಪಡೆಯುವಂತೆ ಆಯುಕ್ತರಿಗೆ ಗಿರೀಶ್ ಚನ್ನವೀರಪ್ಪ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.