
ಹಾಸನ: ‘ಒಂದು ಕಾಲದಲ್ಲಿ ದೇಶದ ಗಮನ ಸೆಳೆದಿದ್ದ, ಆಲೂಗಡ್ಡೆ ಬೆಳೆಯುವ ಜಿಲ್ಲೆಯಾಗಿದ್ದ ಹಾಸನದಲ್ಲಿ, ಬೆಳೆಯನ್ನು ಸಂರಕ್ಷಿಸಿ, ಉತ್ತೇಜಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ನಗರದ ಚನ್ನಪಟ್ಟಣ ಬಸ್ ನಿಲ್ದಾಣದ ಸಮೀಪ ಸೋಮವಾರ ಆರಂಭವಾದ ಆಲೂಗಡ್ಡೆ ಹಾಗೂ ಸಿರಿಧಾನ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿ, ‘ಕೃಷಿ ಮತ್ತು ತೋಟಗಾರಿಕೆ ಇಲಾಖೆ ಒಂದೇ ಸೂರಿನಡಿ ಮೇಳ ಆಯೋಜಿಸಿರುವುದರಿಂದ ರೈತರಿಗೆ ನೆರವಾಗಲಿದೆ. ಒಂದೇ ವೇದಿಕೆಯಲ್ಲಿ ಅಗತ್ಯ ಮಾಹಿತಿ ಒದಗಿಸಿ ಜಾಗೃತಿ ಮೂಡಿಸಿದಂತಾಗುತ್ತದೆ’ ಎಂದರು.
‘ಜಿಲ್ಲೆಯಲ್ಲಿ ಹತ್ತು ವರ್ಷಗಳಿಂದ ಆಲೂಗಡ್ಡೆ ಬಿತ್ತನೆ ಪ್ರಮಾಣ ಕಡಿಮೆಯಾಗಿದ್ದು, ರೈತರು ಮತ್ತೆ ಬೆಳೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಲು ಮೇಳದ ಮೂಲಕ ಕೃಷಿ ವಿಧಾನಗಳು, ಆಲೂಗಡ್ಡೆಯ ವಿವಿಧ ತಳಿಗಳು, ಸಸಿಗಳ ಪರಿಚಯ ನೀಡಲಾಗುತ್ತಿದೆ. ಆಲೂಗಡ್ಡೆ ಕೃಷಿಗೆ ಅಗತ್ಯವಿರುವ ಗೊಬ್ಬರ, ಪೌಷ್ಟಿಕಾಂಶಗಳು ಹಾಗೂ ಔಷಧಿಗಳ ಕುರಿತು ಸಮಗ್ರ ಮಾಹಿತಿ ಒದಗಿಸಲಾಗುತ್ತಿದೆ’ ಎಂದು ತಿಳಿಸಿದರು.
ಸಿರಿಧಾನ್ಯಗಳಿಗೆ ಮಹತ್ವ ನೀಡಿ: ‘ಇದೇ ವೇದಿಕೆಯಲ್ಲಿ ಕೃಷಿ ಇಲಾಖೆಯಿಂದ ಸಿರಿಧಾನ್ಯ ಮೇಳವನ್ನೂ ಆಯೋಜಿಸಲಾಗಿದೆ. ದಶಕಗಳ ಇತಿಹಾಸ ಹೊಂದಿರುವ ಸಿರಿಧಾನ್ಯಗಳನ್ನು ಇತ್ತೀಚಿನ ದಿನಗಳಲ್ಲಿ ಮರೆತಿರುವುದು ಆತಂಕಕಾರಿ’ ಎಂದು ಹೇಳಿದರು.
‘ಸಿರಿಧಾನ್ಯಗಳು ಪೌಷ್ಟಿಕ ಆಹಾರವಾಗಿದ್ದು, ಕಡಿಮೆ ನೀರು ಹಾಗೂ ಕಡಿಮೆ ಭೂಮಿ ಬಳಸಿ ಬೆಳೆಯಬಹುದಾದ ಬೆಳೆ. ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸುವುದರ ಜೊತೆಗೆ, ಗೊಬ್ಬರ ಮತ್ತು ಔಷಧಿಗಳ ಬಳಕೆ ಕಡಿಮೆ ಆಗುವುದರಿಂದ ಪ್ರಕೃತಿಗೆ ಹಾನಿ ಉಂಟಾಗುವುದಿಲ್ಲ’ ಎಂದು ವಿವರಿಸಿದರು.
‘ರೈತರು ಈ ಬೆಳೆಗಳಿಗೆ ಹೆಚ್ಚಿನ ಗಮನ ಹರಿಸಬೇಕು. ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ಪುನಃ ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಮೇಳದ ಅಂಗವಾಗಿ ಸಿರಿಧಾನ್ಯಗಳಿಂದ ವಿವಿಧ ಅಡುಗೆ ತಯಾರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಕೃಷಿ ಯಂತ್ರೋಪಕರಣ ಮತ್ತು ಇತರೆ ಸಲಕರಣೆಗಳ ಬಗ್ಗೆ ಮಾಹಿತಿ ನೀಡಲಾಗಿದ್ದು, ಕಾರ್ಮಿಕರ ಕೊರತೆ ಇರುವ ಇಂದಿನ ಪರಿಸ್ಥಿತಿಯಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಕೃಷಿಯಲ್ಲಿ ಹೆಚ್ಚಿನ ಲಾಭ ಪಡೆಯಲು ಮೇಳ ಸಹಕಾರಿಯಾಗಲಿದೆ ಎಂದು ಹೇಳಿದರು.
ಸಂಸದ ಶ್ರೇಯಸ್ ಪಟೇಲ್, ಶಾಸಕ ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್‌ಕುಮಾರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೇಶ್ ಉಪಸ್ಥಿತರಿದ್ದರು.
ಆಲೂಗಡ್ಡೆ ಕೃಷಿಯಲ್ಲಿ ಗಣನೀಯ ಸಾಧನೆ ಮಾಡಿದ ರೈತರಿಗೆ ಸನ್ಮಾನ ಆಲೂಗಡ್ಡೆ ಕೃಷಿಯ ಕುರಿತು ರೈತರಿಗೆ ಮಾಹಿತಿ ನೀಡುವ ಮಳಿಗೆಗಳು ಕೃಷಿಗೆ ಯಂತ್ರೋಪಕರಣ, ಪರಿಕರ, ಔಷಧಿಗಳ ಪ್ರದರ್ಶನ
ಇದೇ ಮೊದಲ ಬಾರಿಗೆ ಹಾಸನದಲ್ಲಿ ಆಲೂಗೆಡ್ಡೆ ಮೇಳ ಆಯೋಜಿಸಲಾಗಿದ್ದು ಜಿಲ್ಲೆಯಲ್ಲಿ ಕನಿಷ್ಠ 20 ಸಾವಿರದಿಂದ 25 ಸಾವಿರ ಹೆಕ್ಟೇರ್‌ನಲ್ಲಿ ಆಲೂಗೆಡ್ಡೆಯನ್ನು ಬೆಳೆಯುವಂತೆ ಮಾಡುವುದೇ ಮೇಳದ ಉದ್ದೇಶ.
-ಯೋಗೇಶ್ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ
ಆರೋಗ್ಯದ ಕಣಜ ಸಿರಿಧಾನ್ಯ
‘ಐದಾರು ದಶಕಗಳಿಂದ ಸಿರಿಧಾನ್ಯಗಳನ್ನು ಬೆಳೆಯುತ್ತ ಆಹಾರ ಪದ್ಧತಿಯಲ್ಲಿ ಬಳಸಿಕೊಂಡು ಆರೋಗ್ಯ ಕಾಪಾಡಿಕೊಂಡಿದ್ದೇವೆ. ಈಗ ಮತ್ತೆ ನಮ್ಮ ಆಹಾರ ತಟ್ಟೆಗೆ ಸಿರಿಧಾನ್ಯಗಳನ್ನು ತರಬೇಕು’ ಎಂದು ಹೋಮಿಯೋಪತಿ ವೈದ್ಯೆ ಸಿರಿಧಾನ್ಯ ತಜ್ಞೆ ಸರಳಾ ಖಾದರ್ ಹೇಳಿದರು. ತಾಂತ್ರಿಕ ಅಧಿವೇಶನದಲ್ಲಿ ಮಾತನಾಡಿ ‘ವರ್ಷದಲ್ಲಿ 4–5 ಮಳೆಯಾದರೆ 2–3 ಬೆಳೆಗಳನ್ನು ತೆಗೆಯಬಹುದು. ನವಣೆ ಆರ್ಕ ಸಾಮೆ ಊದಲು ಕೊರಲೆ ಬರಗು ಮೊದಲಾದ ಸಿರಿಧಾನ್ಯಗಳನ್ನು ಕಡಿಮೆ ನೀರಿನಲ್ಲಿ ಬೆಳೆಯಬಹುದು’ ಎಂದರು. ‘ನವಣೆಯಲ್ಲಿ ಶೇ 8 ರಷ್ಟು ನಾರಿನಾಂಶವಿದ್ದು ನರದೌರ್ಬಲ್ಯ ಪಾರ್ಕಿನ್ಸನ್ ಸಮಸ್ಯೆ ನಿವಾರಿಸಲು ಸಹಕಾರಿ. ನವಣೆ ಹಾಗೂ ಆರ್ಕ ರಕ್ತ ಶುದ್ಧೀಕರಣಕ್ಕೆ ರಕ್ತದೊತ್ತದ ಬೊಜ್ಜು ನಿಯಂತ್ರಣ ಹಾಗೂ ಕಿಡ್ನಿ ಸಮಸ್ಯೆ ದೂರ ಮಾಡಲು ಸಹಕಾರಿ’ ಎಂದು ತಿಳಿಸಿದರು. ‘ಸಾಮೆಯಲ್ಲಿ ಶೇ. 9 ನಾರಿನಾಂಶವಿದ್ದು ಮುಟ್ಟಿನ ಸಮಸ್ಯೆ ನಿವಾರಣೆಗೆ ಅಗತ್ಯ. ಊದಲಿನಲ್ಲಿ ಶೇ 10 ನಾರಿನಾಂಶವಿದ್ದು ಲಿವರ್ ಶುದ್ಧೀಕರಣಕ್ಕೆ ಸಹಕಾರಿ. ಹಸಿರು ಬಣ್ಣದ ಕೊರಲೆ ನರ ಹಾಗೂ ಮೂಳೆ ಸಂಬಂಧಿ ಕಾಯಿಲೆಗಳಿಗೆ ರಾಮಬಾಣ’ ಎಂದು ವಿವರಿಸಿದರು. ‘ಮೇಳದಲ್ಲಿ ಒತ್ತು ಶಾವಿಗೆ ಸೇರಿ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಖಾದ್ಯಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು ಉಪಯೋಗ ಹಾಗೂ ಲಾಭಗಳ ಕುರಿತು ಜನರಲ್ಲಿ ಇನ್ನಷ್ಟು ಜಾಗೃತಿ ಅಗತ್ಯ’ ಎಂದರು.
‘ಭಾವನಾತ್ಮಕ ಬೆಳೆ ಆಲೂಗಡ್ಡೆ’
‘ಆಲೂಗಡ್ಡೆಯು ಜಿಲ್ಲೆಯ ಭಾವನಾತ್ಮಕ ಬೆಳೆ. ಅಂಗಾಂಶ ಕೃಷಿ ಕಾಂಡ ಕಸಿ ಸೇರಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡರೆ ಬೆಳೆಯ ಪುನರುತ್ಥಾನ ಸಾಧ್ಯ’ ಎಂದು ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಚ್. ಅಮರ ನಂಜುಂಡೇಶ್ವರ ಹೇಳಿದರು. ‘ಮಳೆಗಾಲದಲ್ಲಿ ಅತಿಹೆಚ್ಚು ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯುವ ಜಿಲ್ಲೆ ಹಾಸನ. 30 ವರ್ಷಗಳ ಹಿಂದೆ 50 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿತ್ತು. ಸುಮಾರು 7 ಸಾವಿರ ಹೆಕ್ಟೇರ್‌ಗೆ ಇಳಿದಿದೆ. ರೈತರು ಅವಿನಾಭಾವ ಸಂಬಂಧದಂತೆ ಬೆಳೆಯುತ್ತಿದ್ದರು. ಆದರೆ ಯಾವುದೇ ಬೆಳೆ ಹವ್ಯಾಸಕ್ಕಾಗಿ ಅಲ್ಲ ಲಾಭದ ದೃಷ್ಟಿಯಿಂದಲೇ ಬೆಳೆಯಬೇಕು’ ಎಂದು ಸಲಹೆ ನೀಡಿದರು. ‘ಆಲೂಗಡ್ಡೆಯನ್ನು ಉತ್ತೇಜಿಸಲು ಅನೇಕ ಸಂಶೋಧನೆ ಕೈಗೊಳ್ಳಲಾಗಿದೆ. ಬಿತ್ತನೆ ಬೀಜಕ್ಕಾಗಿ ಜಲಂಧರ್ ಮೇಲೆಯೇ ಅವಲಂಬಿತರಾಗಿದ್ದೆವು. ಈಗ ಅಂಗಾಂಶ ಕುಡಿ ಸಸಿ ಸಂಶೋಧನೆ ಮೂಲಕ ಬೆಳೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಇದಕ್ಕೆ ಹೆಚ್ಚಿನ ಆರ್ಥಿಕ ಸಹಾಯ ಅಗತ್ಯ’ ಎಂದು ಹೇಳಿದರು. ‘ಮಣ್ಣಿನ ಪರಿಸರ ಸುಧಾರಿಸುವ ಅಗತ್ಯವಿದ್ದು ಮಣ್ಣು ನಿರ್ಜೀವವಾಗುತ್ತಿದೆ. ಜೋಳ ಶುಂಠಿ ಮುಂತಾದ ಬೆಳೆಗಳತ್ತ ರೈತರು ಹೆಚ್ಚು ವಾಲುತ್ತಿದ್ದಾರೆ. ಇವು ಅಲ್ಪಕಾಲಿಕ ಆಯ್ಕೆಯಾಗಿದ್ದು ಮುಂದಿನ ದಿನಗಳಲ್ಲಿ ಮತ್ತೆ ಆಲೂಗಡ್ಡೆಗೆ ಒತ್ತು ನೀಡಬೇಕು’ ಎಂದು ಮನವಿ ಮಾಡಿದರು. ಹಾಸನದ ಆಲೂಗಡ್ಡೆ ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕ ಮುಖ್ಯಸ್ಥ ನಟರಾಜ್ ಜಂಟಿ ನಿರ್ದೇಶಕ ರಮೇಶ್‌ಕುಮಾರ್ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.