ADVERTISEMENT

ಹಾಸನ | ನೈಸರ್ಗಿಕ ಕೃಷಿ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ

ಭೂಮಿ ಫಲವತ್ತತೆ ಉಳಿಸಲು ಕೇಂದ್ರ ಸರ್ಕಾರದ ಯೋಜನೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 6:21 IST
Last Updated 20 ಜೂನ್ 2025, 6:21 IST
   

ಹಾಸನ: ರಾಸಾಯನಿಕ ಗೊಬ್ಬರಗಳಿಂದ ಭೂಮಿಯ ಫಲವತ್ತತೆ ಕುಸಿಯುವುದನ್ನು ತಪ್ಪಿಸಲು ಕೇಂದ್ರ ಸರ್ಕಾರದ ರಾಷ್ಟ್ರೀಯ ನೈಸರ್ಗಿಕ ಕೃಷಿ ಯೋಜನೆಯು (ನ್ಯಾಷನಲ್ ಮಿಷನ್ ಆನ್ ನ್ಯಾಚುರಲ್ ಫಾರ್ಮಿಂಗ್–ಎನ್ಎಂಎನ್ಎಫ್) ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಅಗತ್ಯ ‍ಪರಿಕರಗಳನ್ನು ಸಕಾಲದಲ್ಲಿ ಒದಗಿಸುವ ಪ್ರಯತ್ನ ಶುರುವಾಗಿದೆ.

ಜಿಲ್ಲೆಯ ಆಲೂರು, ಅರಕಲಗೂಡು, ಅರಸೀಕೆರೆ, ಹಾಸನ, ಹೊಳೆನರಸೀಪುರ ತಾಲ್ಲೂಕುಗಳ ತಲಾ 3 ಹಾಗೂ ಬೇಲೂರು, ಚನ್ನರಾಯಪಟ್ಟಣ, ಸಕಲೇಶಪುರ ತಾಲ್ಲೂಕುಗಳಲ್ಲಿ 4 ಸೇರಿದಂತೆ ಕ್ಲಸ್ಟರ್‌ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.

ರೈತರಿಗೆ ಅರಿವು ಮೂಡಿಸುವ ವಿಧಾನಗಳ ಮೂಲಕ ಯೋಜನೆ ರೂಪಿಸಲಾಗಿದೆ. ಯೋಜನಾ ಪ್ರದೇಶದ ರೈತರನ್ನು ನೈಸರ್ಗಿಕ ಕೃಷಿ ವ್ಯಾಪ್ತಿಗೆ ತರುವುದೇ ಮುಖ್ಯ ಉದ್ದೇಶ.

ADVERTISEMENT

‘ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವವರಿಗೆ ಪ್ರತಿ ಎಕರೆಗೆ ಪ್ರತಿ ವರ್ಷಕ್ಕೆ ₹4ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ 50 ಹೆಕ್ಟೇರ್‌ ಪ್ರದೇಶದ ಗುಚ್ಛ ಮಾದರಿಯಲ್ಲಿ ಅನುಷ್ಠಾನ ಮಾಡಬೇಕಾಗಿದ್ದು, ಪ್ರತಿ ಗುಚ್ಛಕ್ಕೆ ಕೃಷಿ ಸಖಿಯರನ್ನು ಆಯ್ಕೆ ಮಾಡಬಹುದಾಗಿದೆ. ಪ್ರತಿ 50 ಹೆಕ್ಟೇರ್‌ ಅಥವಾ ಸುಮಾರು 125 ರೈತರನ್ನು ಒಳಗೊಳ್ಳಲಾಗುವುದು’ ಎಂದು  ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್‌ಕುಮಾರ್‌ ತಿಳಿಸಿದರು.

‘ಬಾಹ್ಯವಾಗಿ ಖರೀದಿಸುವ ಪರಿಕರಗಳ ಅವಲಂಬನೆಯನ್ನು ಕಡಿಮೆ ಮಾಡಲು, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳ ಬಳಕೆಯ ಮೂಲಕ ಪ್ರಕೃತಿ ಆಧಾರಿತ ಸುಸ್ಥಿರ ಕೃಷಿ ಪದ್ಧತಿಗಳ ಉತ್ತೇಜನಕ್ಕೆ ಯೋಜನೆ ಜಾರಿ ಮಾಡಲಾಗುತ್ತಿದೆ. ಜಾನವಾರು ಆಧಾರಿತ ಸಮಗ್ರ ಕೃಷಿ ಪದ್ಧತಿಗಳನ್ನು ಪ್ರಚಾರ ಮಾಡಲಾಗುತ್ತಿದ್ದು, ನೈಸರ್ಗಿಕ ಕೃಷಿಯ ಅಳವಡಿಕೆ ಮತ್ತು ಪ್ರಚಾರಕ್ಕಾಗಿ ಆಯಾ ಸ್ಥಳೀಯ ಪ್ರದೇಶಕ್ಕೆ ಸೂಕ್ತವಾದ ನೈಸರ್ಗಿಕ ಕೃಷಿ ಪದ್ಧತಿ ಅಭಿವೃದ್ಧಿಪಡಿಸಲು ಮತ್ತು ಸುಧಾರಿಸಲು ರೈತರ ಅನುಭವ ಮತ್ತು ವೈಜ್ಞಾನಿಕ ಪರಿಣತಿಯನ್ನು ಒಟ್ಟುಗೂಡಿಸುವುದು ಪ್ರಮುಖ ಉದ್ದೇಶ’ ಎಂದು ಅವರು ವಿವರಿಸಿದರು.

ಎರಡು ಕಂತು;

‘ಪ್ರೋತ್ಸಾಹ ಧನದ ಮೊದಲ ಕಂತು ಆಗಸ್ಟ್‌ನಲ್ಲಿ ಪಾವತಿಯಾಗಲಿದೆ. ಆಯ್ಕೆಯಾದವರು ತರಬೇತಿಗಳಲ್ಲಿ ಭಾಗವಹಿಸಬೇಕಾಗಿದ್ದು, ಡ್ರಮ್‌ಗಳ ಖರೀದಿ, ಮಿಶ್ರಣ ಮತ್ತು ಸಂಗ್ರಹಣ ಕಂಟೇನರ್‌ಗಳು, ಇತರೆ ಪರಿಕರ, ಜಾನುವಾರುಗಳ ಪಾಲನೆ, ಎನ್‌ಎಫ್ ಕೃಷಿ ಪರಿಕರಗಳನ್ನು ತಯಾರಿಸಬೇಕು. 2026ರ ಫೆಬ್ರುವರಿಯಲ್ಲಿ ಎರಡನೇ ಕಂತು ಬಿಡುಗಡೆಯಾಗಲಿದ್ದು, ಬೀಜಾಮೃತ, ಜೀವಾಮೃತ ಮುಂತಾದ ಕೃಷಿ ಪರಿಕರಗಳನ್ನು ತಯಾರಿಸಬೇಕು. ಬಹುಬೆಳೆ ಪದ್ಧತಿ ಮತ್ತು ಉತ್ತಮ ಎಂಎಫ್ ಪದ್ಧತಿಗಳ ಅಳವಡಿಕೆ, ಬಿಆರ್‌ಸಿಯಿಂದ ಪರಿಕರ ಖರೀದಿಸಬೇಕು’ ಎಂದರು.

ಈ ಯೋಜನೆಯು 15ನೇ ಹಣಕಾಸು ಯೋಜನೆಯಡಿ ಅಡಿಯಲ್ಲಿ ಜಾರಿಗೆ ಬರಲಿದ್ದು, ದೇಶದ 1 ಕೋಟಿ ರೈತರನ್ನು ತಲುಪುವ ಗುರಿ ಹೊಂದಿದೆ.

ಕೇಂದ್ರ ಸರ್ಕಾರ ಈ ಯೋಜನೆಗೆ ₹ 2,481 ಕೋಟಿ ನಿಗದಿಪಡಿಸಿದ್ದು, ₹ 1,584 ಕೋಟಿ ನೀಡಲಿದೆ. ಉಳಿದ ₹ 897 ಕೋಟಿ ಅನ್ನು ರಾಜ್ಯ ಸರ್ಕಾರಗಳು ನೀಡಲಿವೆ. ಮುಂದಿನ ಎರಡು ವರ್ಷಗಳಲ್ಲಿ, ಈ ಯೋಜನೆಯಡಿ 7.5 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ನೈಸರ್ಗಿಕ ಕೃಷಿ ಉತ್ತೇಜಿಸುವ ಗುರಿ ಇದೆ.

ತರಬೇತಿ ಪಡೆದ ಇಚ್ಛೆಯುಳ್ಳ ರೈತರ ಆಧಾರ್ ಜೋಡಣೆಯಾಗಿರುವ ಖಾತೆಗಳಿಗೆ ಕಂತುಗಳಲ್ಲಿ ಪ್ರತಿ ಎಕರೆಗೆ ಪ್ರತಿ ರೈತರಿಗೆ ₹4ಸಾವಿರ ಪ್ರೋತ್ಸಾಹ ಧನ ಜಮೆ ಮಾಡಲಾಗುತ್ತದೆ
ರಮೇಶ್‌ಕುಮಾರ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.