ADVERTISEMENT

ಹಾಸನದಲ್ಲಿ ಧಾರಾಕಾರ ಮಳೆ: ರಿಂಗ್‌ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 6:37 IST
Last Updated 22 ಅಕ್ಟೋಬರ್ 2024, 6:37 IST
   

ಹಾಸನ: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕೆರೆಗಳು ತುಂಬಿದ್ದು, ಕೋಡಿ ಬಿದ್ದಿವೆ. ಇದರಿಂದಾಗಿ ನಗರದ ಹೊರವಲಯದ ತಮ್ಲಾಪುರ–ಉದ್ದೂರು ನಡುವಿನ ರಿಂಗ್‌ ರಸ್ತೆಯಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದೆ. ರಸ್ತೆಯಲ್ಲಿ ಸಂಪೂರ್ಣ ನೀರು ನಿಂತಿದ್ದರಿಂದ ಗುಂಡಿಗಳು ಬಿದ್ದಿದ್ದು, ವಾಹನ ಸಂಚಾರ ಸ್ಥಗಿತವಾಗಿದೆ.

ಹರಿಯುತ್ತಿರುವ ನೀರಿನಲ್ಲಿಯೇ ವಾಹನ ಸವಾರರು ಬೈಕ್‌ಗಳನ್ನು ಓಡಿಸುತ್ತಿದ್ದು, ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್‌ ಸವಾರನೊಬ್ಬನನ್ನು ಸ್ಥಳೀಯರು ರಕ್ಷಿಸಿದ್ದಾರೆ.

ನಾಲ್ಕೈದು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ತೇಜೂರು ಕೆರೆ, ಸೀಗೆ ಕೆರೆ, ಚಿಕ್ಕಕೊಂಡಗೊಳ ಕೆರೆ ಸೇರಿದಂತೆ ಹಲವಾರು ಕೆರೆಗಳು ಭರ್ತಿಯಾಗಿದ್ದು, ಕೋಡಿ ಬಿದ್ದಿವೆ. ಈ ನೀರು ತಮ್ಲಾಪುರದ ಬಳಿ 80 ಅಡಿ ರಸ್ತೆಯ ಮೇಲೆ ನದಿಯಂತೆ ಹರಿಯುತ್ತಿದೆ. ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದಿರುವ ಪೊಲೀಸರು ವಾಹನ ಸಂಚಾರ ಸ್ಥಗಿತಗೊಳಿಸಿದ್ದಾರೆ.

ADVERTISEMENT

ಈ ಮಧ್ಯೆ ರಿಂಗ್‌ ರಸ್ತೆಯ ಸುತ್ತಲಿನ ಹೊಸ ಬಡಾವಣೆಗಳು ಸಂಪೂರ್ಣ ಜಲಾವೃತಗೊಂಡಿವೆ. ಅಂಗಡಿ, ಮನೆಗಳಿಗೆ ನೀರು ನುಗ್ಗಿದೆ. ಶುಂಠಿ, ಜೋಳ, ರಾಗಿ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಬೆಳೆ ಸಂಪೂರ್ಣ ನಾಶವಾಗಿವೆ.

ರಿಂಗ್‌ ರಸ್ತೆಗೆ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಹಲವು ದಿನಗಳಿಂದ ಒತ್ತಾಯಿಸುತ್ತಿದ್ದು, ಕೂಡಲೇ ಮೇಲ್ಸೇತುವೆ ನಿರ್ಮಾಣ ಆಗಬೇಕು. ಬೆಳೆ ನಷ್ಟ ಅನುಭವಿಸುವ ರೈತರಿಗೆ ಸರ್ಕಾರ ಪರಿಹಾರ ಕೊಡಬೇಕು ಎಂದು ತಮ್ಲಾಪುರ ಗ್ರಾಮದ ಗಣೇಶ್‌ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.