
ಸಕಲೇಶಪುರ: ಪಟ್ಟಣದ ಹಳೆ ಬಸ್ ನಿಲ್ದಾಣ ಸೇರಿದಂತೆ ಮುಖ್ಯ ರಸ್ತೆಯಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ತೆರವು ಮಾಡಲಾಗಿರುವ ಬೀದಿ ಬದಿ ವ್ಯಾಪಾರಿಗಳಿಗೆ ಶೀಘ್ರದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಹಳೆ ಬಸ್ ನಿಲ್ದಾಣಕ್ಕೆ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿ ಬಸ್‌ಗಳ ನಿಲುಗಡೆ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಬೀದಿ ಬದಿಯ ವ್ಯಾಪಾರಿಗಳ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಸಾರ್ವಜನಿಕರು ನಡೆದಾಡುವ ಫುಟ್‌ಪಾತ್ ಮೇಲೆ ಅಂಗಡಿ ಇಟ್ಟುಕೊಂಡಿದ್ದ ಪರಿಣಾಮ, ಹಲವು ವರ್ಷಗಳಿಂದ ನಿತ್ಯ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿತ್ತು. ಪಾದಚಾರಿಗಳು ರಸ್ತೆ ಮೇಲೆ ನಡೆಯುವುದರಿಂದ ಆಗಾಗ ರಸ್ತೆ ಅಪಘಾತಗಳು ಸಹ ಉಂಟಾಗುತ್ತಿವೆ ಎಂದರು.
ಇದನ್ನು ಮನಗಂಡು ಜಿಲ್ಲಾಧಿಕಾರಿಗಳೇ ಖದ್ದು ಭೇಟಿ ನೀಡಿ ಫುಟ್‌ಪಾತ್ ತೆರವುಗೊಳಿಸುವಂತೆ ಆದೇಶ ಮಾಡಿದ್ದಾರೆ. ಸಕಲೇಶಪುರ ಮಾತ್ರವಲ್ಲ, ಇಡೀ ಜಿಲ್ಲೆಯಲ್ಲಿ ಫುಟ್‌ಪಾತ್ ತೆರವುಗೊಳಿಸಲು ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ತೆಗೆದುಕೊಳ್ಳುವ ಇಂತಹ ನಿರ್ಧಾರಗಳಿಗೆ ಎಲ್ಲರೂ ಸಹಕರಿಸಬೇಕು. ನಿಮಗೆ ಆಗಿರುವ ಸಮಸ್ಯೆ ತಾತ್ಕಾಲಿಕ. ತಿಂಗಳ ಒಳಗೆ ಅರ್ಹ ಬೀದಿ ಬದಿಯ ವ್ಯಾಪಾರಿಗಳಿಗೆ ಶಾಶ್ವತ ಪರಿಹಾರ ಮಾಡಲಾಗುವುದು ಎಂದರು.
ಸದಾ ಬೀದಿಯಲ್ಲಿಯೇ ಕುಳಿತು ವ್ಯಾಪಾರ ಮಾಡುವುದು ಬೇಡ. ನಿಮಗೂ ಒಂದು ವ್ಯವಸ್ಥಿತ ಸೂರಿನ ಅಡಿ ವ್ಯಾಪಾರ ಮಾಡಲು ವ್ಯವಸ್ಥೆ ಮಾಡಿಕೊಡುತ್ತೇವೆ ಎಂದರು.
ಹಳೆ ಉಪ ನೋಂದಣಾಧಿಕಾರಿ ಕಚೇರಿ ಜಾಗದಲ್ಲಿ ಸಕಲೇಶಪುರ-ಹಾಸನ ಕಡೆಗೆ ಹೋಗುವ ಬಸ್‌ಗಳು ಒಳಗೆ ಬಂದು ಹೋಗುವ ವ್ಯವಸ್ಥೆ ಮಾಡಲಾಗುವುದು ಎಂದರು.
ಪುರಸಭೆ ಮುಖ್ಯಾಧಿಕಾರಿ ಟಿ.ಸಿ. ಮಹೇಶ್ವರಪ್ಪ, ಪೊಲೀಸ್ ಇನ್‌ಸ್ಪೆಕ್ಟರ್ ವನರಾಜು, ರಾಷ್ಟೀಯ ಹೆದ್ದಾರಿ ಎಇಇ ಅಸ್ಮಾ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.