ADVERTISEMENT

ಹುದ್ದೆಗಳ ಸೃಜನೆ ಪ್ರಸ್ತಾವ ಪರಿಶೀಲನೆಯಲ್ಲಿ

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಮಾರ್ಚ್‌ಗೆ ಪೂರ್ಣ: ಸಚಿವ ಡಾ.ಶರಣಪ್ರಕಾಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 4:48 IST
Last Updated 1 ಫೆಬ್ರುವರಿ 2026, 4:48 IST
ಹಿಮ್ಸ್‌ ಆಸ್ಪತ್ರೆ. (ಸಂಗ್ರಹ ಚಿತ್ರ)
ಹಿಮ್ಸ್‌ ಆಸ್ಪತ್ರೆ. (ಸಂಗ್ರಹ ಚಿತ್ರ)   

ಹಾಸನ: ನಗರದಲ್ಲಿ ಅರ್ಧಕ್ಕೆ ನಿಂತು ಈಗ ಮತ್ತೆ ಆರಂಭವಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಿವಿಲ್ ಕಾಮಗಾರಿಯನ್ನು ಇದೇ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದ್ದಾರೆ.

ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಅವರು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ 2018–19 ನೇ ಸಾಲಿನಲ್ಲಿ ₹50 ಕೋಟಿ ವೆಚ್ಚದಲ್ಲಿ ಆರಂಭ ಆಯಿತು. 2025 ರ ಸೆ.22 ರಲ್ಲಿ ಕಾಮಗಾರಿಯ ಮೊತ್ತ ₹63.34 ಕೋಟಿಗೆ ಪರಿಷ್ಕೃತಗೊಂಡಿದೆ. ಸಿವಿಲ್ ಕಾಮಗಾರಿ ಪ್ರಗತಿಯಲ್ಲಿದೆ. 2026 ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

2025 ರ ಡಿ.9 ರಂದು ಈ ಆಸ್ಪತ್ರೆ ಕಟ್ಟಡಕ್ಕೆ ಅಗತ್ಯವಿರುವ ಯಂತ್ರೋಪಕರಣ ಅಳವಡಿಕೆಗೆ ₹20 ಕೋಟಿ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

250 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದಲ್ಲಿ, ಮೊದಲ ಹಂತದಲ್ಲಿ 150 ಹಾಸಿಗೆ ಸಾಮರ್ಥ್ಯಕ್ಕೆ ಅನುಗುಣವಾಗಿ ಕಾರ್ಡಿಯೋಲಜಿ, ನ್ಯೂರಾಲಜಿ, ನ್ಯೂರೋ ಸರ್ಜರಿ, ಯುರಾಲಜಿ, ಕಾರ್ಡಿಯೊಥೋರಾಸಿಕ್ ಸರ್ಜರಿ ವಿಭಾಗ ಮತ್ತು ಕ್ಯಾಥಲ್ಯಾಬ್ ಆರಂಭಿಸಲು ಅಗತ್ಯವಿರುವ ಉಪಕರಣ ಸೇರಿ ಒಟ್ಟು ₹23.92 ಕೋಟಿ ಅಂದಾಜು ಮೊತ್ತಕ್ಕೆ 2025 ರ ಡಿ.9 ರಂದು ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಕ್ಯಾಥಲ್ಯಾಬ್ ಕಾರ್ಡಿಯಾಕ್ ಯೂನಿಟ್ ಆರಂಭಿಸಲು ₹9.42 ಕೋಟಿ ಅನುಮೋದನೆಯಾಗಿದೆ. ಆಸ್ಪತ್ರೆಗೆ ಅಗತ್ಯವಿರುವ ಹುದ್ದೆಗಳ ಸೃಜನೆ ಮಾಡುವ ಪ್ರಸ್ತಾವ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ವಿವರಿಸಿದ್ದಾರೆ.

ಜನಸಾಮಾನ್ಯರ ಚಿಕಿತ್ಸೆಗಾಗಿ ಆಸ್ಪತ್ರೆಯನ್ನು ಯಾವಾಗಿನಿಂದ ಕಾರ್ಯಾರಂಭ ಮಾಡಲಾಗುವುದು ಎಂಬ ಸ್ವರೂಪ್‌ ಪ್ರಕಾಶ್‌ ಅವರ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಅಗತ್ಯವಿರುವ ಸೇವೆಗಳು, ವೈದ್ಯಕೀಯ ಉಪಕರಣ ಅಳವಡಿಸುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಆಸ್ಪತ್ರೆಗೆ ಅಗತ್ಯವಿರುವ ವಿವಿಧ ಹುದ್ದೆಗಳನ್ನು ಸೃಜನೆ ಮಾಡಿದ ನಂತರ ಆದಷ್ಟು ಶೀಘ್ರವೇ ಕಾರ್ಯಾರಂಭ ಮಾಡಲು ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮೊರಾರ್ಜಿ ವಸತಿ ಶಾಲೆ ಸದ್ಯಕ್ಕಿಲ್ಲ

ತಾಲ್ಲೂಕಿನ ಸಾಲಗಾಮೆ ಹೋಬಳಿಯ ನಿಟ್ಟೂರಿನಲ್ಲಿ ನೂತನವಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣ ಮಾಡುವ ಪ್ರಸ್ತಾವ ಸರ್ಕಾರದ ಮುಂದೆ ಇದೆಯೇ ಎಂಬ ಶಾಸಕ ಸ್ವರೂಪ್‌ ಪ್ರಶ್ನೆಗೆ ಉತ್ತರ ನೀಡಿರುವ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸದ್ಯಕ್ಕೆ ಯಾವುದೇ ಪ್ರಸ್ತಾವ ಇಲ್ಲ ಎಂದು ತಿಳಿಸಿದ್ದಾರೆ. ಈಗಾಗಲೇ ಕಸಬಾ ಹೋಬಳಿಯಲ್ಲೇ ಗುಡ್ಡೇನಹಳ್ಳಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಪದವಿಪೂರ್ವ ಕಾಲೇಜು ಹಾಗೂ ಯಗಚಿಯಲ್ಲಿ ಮೊರಾರ್ಜಿ ವಸತಿ ಶಾಲೆ ಇದೆ. ಪ್ರತಿ ಹೋಬಳಿಗೆ ಒಂದೊಂದು ವಸತಿ ಶಾಲೆ ನಿರ್ಮಾಣ ಮಾಡಬೇಕೆಂಬ ಧ್ಯೇಯೋದ್ದೇಶ ಸರ್ಕಾರದ ಮುಂದಿದೆ. ಅದರಂತೆ ವಸತಿ ಶಾಲೆ ಇಲ್ಲದ ಹೋಬಳಿಗಳಲ್ಲಿ ಆರಂಭಿಸಲು ಆದ್ಯತೆ ಮೇರೆಗೆ ಹಂತ ಹಂತವಾಗಿ ಗಮನ ಹರಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.