ಹಾಸನ: ‘ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿ ಸಕಲೇಶಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೇ ₹ 3 ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿದ್ದು, ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ ಸೂಕ್ತ ತನಿಖೆ ನಡೆಸಬೇಕು’ ಎಂದು ಶಾಸಕರಾದ ಸಿಮೆಂಟ್ ಮಂಜು ಹಾಗೂ ಎಚ್.ಕೆ. ಸುರೇಶ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸ್ವಂತ ಮನೆ ನಿರ್ಮಾಣಕ್ಕಾಗಿ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇತ್ತೀಚೆಗೆ ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ಇಲ್ಲಿನ ಜಿಲ್ಲಾ ವಸತಿ ನೋಡಲ್ ಅಧಿಕಾರಿ ಕೆ.ಎಂ.ರಾಜೇಶ್ ಎಂಬುವವರು ಅಕ್ರಮ ಎಸಗಿದ್ದು, ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವುದು ಬಯಲಿಗೆ ಬಂದಿದೆ ಎಂದು ದೂರಿದರು.
ಈ ಪ್ರಕರಣ ಸಂಬಂಧ ಈಗಾಗಲೇ ರಾಜೇಶ್ ಅವರ ವಿರುದ್ಧ ಸಕಲೇಶಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅವರು ತಲೆಮರೆಸಿಕೊಂಡಿದ್ದಾರೆ. ಆದರೆ ಈ ಅವ್ಯವಹಾರ ನಡೆಯಲು ಜಿಲ್ಲಾ ಪಂಚಾಯಿತಿ ಸಿಇಒಯಿಂದ ಹಿಡಿದು ಕೆಳಹಂತದ ಎಲ್ಲ ಅಧಿಕಾರಿಗಳು ಕಾರಣರಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಕೂಡಲೇ ಸರ್ಕಾರ ಇವರನ್ನು ಅಮಾನತು ಮಾಡುವ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
‘ಸಕಲೇಶಪುರ ತಾಲೂಕು ವ್ಯಾಪ್ತಿಯಲ್ಲಿಯೇ ಸುಮಾರು 200 ಪಲಾನುಭವಿಗಳಿಗೆ ವಸತಿ ಮಂಜೂರಾಗಿದ್ದು ಇದರಲ್ಲಿ ಅರ್ಹ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡದೆ ಇದೇ ಯೋಜನೆ ಅಡಿ ಅರ್ಜಿ ಸಲ್ಲಿಸಿದ್ದ ಇತರರಿಗೆ ಹಣ ಮಂಜೂರು ಮಾಡಿ ಅವರಿಂದ ಹಣ ಲಪಟಾಯಿಸಲಾಗಿದೆ’ ಎಂದು ದೂರಿದರು.
‘ಇತ್ತೀಚೆಗೆ ನಡೆದಿರುವ ಬೆಳವಣಿಗೆಯಲ್ಲಿ, ಹಣ ಫಲಾನುಭವಿಗಳಿಗೆ ಹಿಂದಿರುಗಿಸುವ ಮೂಲಕ ಬಗೆಹರಿಸುವ ಕುರಿತು ಕೆಲ ಮೇಲಧಿಕಾರಿಗಳು ಮಾತನಾಡಿದ್ದಾರೆ. ಆದರೆ ಇದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಈಗಾಗಲೇ ನೋಡಲ್ ಅಧಿಕಾರಿ ಸಂಚಿನಿಂದ ಹಣ ಬಿಡುಗಡೆ ಮಾಡಿರುವ ಬ್ಯಾಂಕ್ ಖಾತೆಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಇದರಿಂದ ಅವರೆಲ್ಲ ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳು ಮಾಡಿದ ತಪ್ಪಿಗೆ ಅವರಿಗೆ ತೊಂದರೆ ಆಗುತ್ತಿದ್ದು, ಕೂಡಲೇ ನೋಟಿಸ್ ಹಿಂಡೆಯುವಂತೆ’ ಆಗ್ರಹಿಸಿದರು.
ಈ ಅವ್ಯವಹಾರದಲ್ಲಿ ಜಿಲ್ಲಾ ಪಂಚಾಯಿತಿ ಸೇರಿದಂತೆ ವಸತಿ ಯೋಜನೆ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದು, ಕೇವಲ ಪಿಡಿಒಗಳ ಮೇಲೆ ಆರೋಪ ಮಾಡಲಾಗಿದೆ. ಆದರೆ ಇದರಲ್ಲಿ ಎಲ್ಲ ಅಧಿಕಾರಿಗಳು ಶಾಮೀಲಾಗಿದ್ದು, ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಸಕಲೇಶಪುರದ ನೋಡಲ್ ಅಧಿಕಾರಿ ರಾಜೇಶ್ ಅವರ ಕಾರ್ಯವೈಖರಿ ಅನುಮಾನಿಸಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ತಿಂಗಳ ಮುಂಚೆಯೇ ತಿಳಿಸಲಾಗಿತ್ತು. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದ್ದು ಬಯಲಿಗೆ ಬಂದಿದೆ ಎಂದರು.
ಅರಸೀಕೆರೆ ತಾಲ್ಲೂಕಿನಲ್ಲಿ 93 ವಸತಿ ಹಂಚಿಕೆಯಲ್ಲೂ ಇದೇ ರೀತಿ ಅವ್ಯವಹಾರ ಆಗಿದ್ದು, ಜಿಲ್ಲೆಯಲ್ಲಿ ಸುಮಾರು 340 ಹೆಚ್ಚು ವಸತಿ ಹಂಚಿಕೆ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ನಾಗೇಶ್, ಗಿರೀಶ್, ಮಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.