
ಹಾಸನ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಾಡಾನೆ ಹಾವಳಿಯಿಂದ ಮಲೆನಾಡು ಭಾಗದ ಜನರು ತತ್ತರಿಸುತ್ತಲೇ ಇದ್ದಾರೆ. ಕೇಂದ್ರ–ರಾಜ್ಯ ಸರ್ಕಾರಗಳಿಗೆ ಮನವಿಗಳ ಮಹಾಪೂರವೇ ಹರಿದು ಬರುತ್ತಿದ್ದರೂ, ಶಾಶ್ವತ ಪರಿಹಾರ ಮತ್ರ ಇನ್ನೂ ಮರೀಚಿಕೆಯಾಗಿದೆ. ಸಾವು–ನೋವುಗಳ ಸಂದರ್ಭದಲ್ಲಿ ಪರಿಹಾರ ನೀಡಿ ಕೈತೊಳೆದುಕೊಳ್ಳುವ ಸರ್ಕಾರ, ಜನಪ್ರತಿನಿಧಿಗಳಿಂದ ಯಾವುದೇ ಶಾಶ್ವತ ಪರಿಹಾರ ಸಿಗುತ್ತಿಲ್ಲ ಎನ್ನುವ ಅಳಲು ತೋಡಿಕೊಳ್ಳುತ್ತಿದ್ದಾರೆ.
ಕಾಂಗ್ರೆಸ್ಸಿಗರು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿದರೆ, ಪ್ರತಿಪಕ್ಷಗಳ ನಾಯಕರು ರಾಜ್ಯ ಸರ್ಕಾರವನ್ನೇ ಹೊಣೆ ಮಾಡುತ್ತಿದ್ದಾರೆ. ಸಮನ್ವಯದಿಂದ ಒಟ್ಟಾಗಿ ಕೇಂದ್ರ–ರಾಜ್ಯ ಸರ್ಕಾರಗಳ ಮನವೊಲಿಸಿ, ಸಮಸ್ಯೆ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಆಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ಜನರು.
ನಾಲ್ಕು ದಶಕಗಳಿಂದ ಆರಂಭವಾಗಿರುವ ಕಾಡಾನೆ ಸಮಸ್ಯೆ, ಬೆಳೆಯುತ್ತಲೇ ಇದೆಯೇ ಹೊರತು, ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಒಂದೆಡೆ ಪಶ್ಚಿಮ ಘಟ್ಟದ ತಮಿಳುನಾಡಿನಿಂದ ಮೈಸೂರಿನ ಮೂಲಕ ಆನೆಗಳು ಜಿಲ್ಲೆಯನ್ನು ಪ್ರವೇಶಿಸುತ್ತಿವೆ. ಇನ್ನೊಂದೆಡೆ ಕೇರಳ ಭಾಗದ ಆನೆಗಳು, ಕೊಡಗಿನ ಮೂಲಕ ಜಿಲ್ಲೆಗೆ ಬರುತ್ತಿವೆ. ಇತ್ತ ಭದ್ರಾ ಅಭಯಾರಣ್ಯದಲ್ಲಿರುವ ಆನೆಗಳೂ ಜಿಲ್ಲೆಯತ್ತ ಮುಖ ಮಾಡುತ್ತಿವೆ. ಇದರಿಂದಾಗಿ ಕಾಡನಿಂದ ಹೊರಬಂದಿರುವ ಸುಮಾರು 200 ಕ್ಕೂ ಹೆಚ್ಚು ಆನೆಗಳು ಜಿಲ್ಲೆಯಲ್ಲಿ ಸುತ್ತಾಡುತ್ತಿವೆ ಎನ್ನುವ ಮಾಹಿತಿ ಸ್ಥಳೀಯರು ನೀಡುತ್ತಿದ್ದಾರೆ.
ಜಿಲ್ಲೆಯ ಬೇಲೂರು ಭಾಗದಲ್ಲಿ 60–70 ಕಾಡಾನೆಗಳಿವೆ. ಆಲೂರು ಭಾಗದಲ್ಲಿ 10, ಪಶ್ಚಿಮ ಘಟ್ಟದ ಯಸಳೂರು, ಬಿಸ್ಲೆ ಘಾಟ್ ಪ್ರದೇಶಗಳಲ್ಲಿ 100ಕ್ಕೂ ಅಧಿಕ ಆನೆಗಳಿವೆ. ಬೇಲೂರು ಭಾಗದ ಆನೆಗಳು ಕೆಲವೊಮ್ಮೆ ಚಿಕ್ಕಮಗಳೂರು ಜಿಲ್ಲೆಗೆ ಹೋಗುತ್ತಿದ್ದು, ಮತ್ತೆ ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಗೆ ಮರಳುತ್ತವೆ. ಇನ್ನು ಯಸಳೂರು, ಬಿಸ್ಲೆ ಘಾಟ್ ಪ್ರದೇಶದ ಆನೆಗಳು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಚಾರ್ಮಾಡಿ, ಕೊಡಗು ಜಿಲ್ಲೆಗಳಲ್ಲಿ ಓಡಾಡುತ್ತಿವೆ.
ಆದರೆ, ಈ ಆನೆಗಳಿಗೆ ಎಲ್ಲಿಯೂ ಸಮರ್ಪಕವಾದ ಆಹಾರ ಸಿಗುತ್ತಿಲ್ಲ. ಹಾಗಾಗಿ ಗದ್ದೆ, ತೋಟಗಳಲ್ಲಿಯೇ ಬೀಡು ಬಿಟ್ಟಿವೆ. ಬೇಲೂರು ಭಾಗದ ಬಿಕ್ಕೋಡು, ಜಗಬೋರನಹಳ್ಳಿಯ ಸುತ್ತ ಮೆಕ್ಕೆಜೋಳ, ಭತ್ತ ಬೆಳೆದಿದ್ದು, ಬಹುತೇಕ ಆನೆಗಳು ಇದೇ ಭಾಗದಲ್ಲಿ ನೆಲೆ ನಿಂತಿವೆ. ರಾತ್ರಿ ಆಗುತ್ತಿದ್ದಂತೆಯೇ ತೋಟದಿಂದ ಹೊರಬರುವ ಆನೆಗಳು, ಬೆಳೆಗಳನ್ನು ತಿಂದು ಮತ್ತೆ ಕಾಫಿ ತೋಟಗಳಿಗೆ ಮರಳುತ್ತಿವೆ.
ಜಿಲ್ಲೆಯ ಬೇಲೂರ–ಸಕಲೇಶಪುರ ಭಾಗದಲ್ಲಿ 15–16 ವಯಸ್ಸಿನ 8 ಆನೆಗಳ ಹಿಂಡೊಂದು ಕಾಣಿಸಿಕೊಂಡಿದ್ದು, ಆಟೋಗಳು, ಮಾನವರ ಮೇಲೆ ದಾಳಿ ಮಾಡುತ್ತಿವೆ. ಈ ಆನೆಗಳು ಪಟಾಕಿ ಸೇರಿದಂತೆ ಯಾವುದೇ ಸದ್ದಿಗೆ ಹೆದರುತ್ತಿಲ್ಲ ಎನ್ನುವುದು ಅರಣ್ಯ ಇಲಾಖೆ ಸಿಬ್ಬಂದಿ ನೀಡುವ ಮಾಹಿತಿ.
ಆನೆಗಳು ಯಾವ ಪ್ರದೇಶದಲ್ಲಿವೆ ಎನ್ನುವ ಮಾಹಿತಿಯನ್ನು ಮಾತ್ರ ಆನೆ ಕಾರ್ಯಪಡೆ ಸಿಬ್ಬಂದಿ ಒದಗಿಸುತ್ತಿದ್ದಾರೆ. ಆದರೆ, ತೋಟಗಳಿಗೆ ಹೋಗುವಾಗ ಆನೆ ಎದುರಾದರೆ, ಕಾರ್ಯಪಡೆ ಸಿಬ್ಬಂದಿ ಕೂಡ ಏನೂ ಮಾಡಲಾಗದ ಪರಿಸ್ಥಿತಿ ಇದೆ. ಒಮ್ಮೆಲೆ ಎದುರಾಗುವ ಆನೆಗಳು, ಮನುಷ್ಯರ ಮೇಲೆ ಏಕಾಏಕಿ ದಾಳಿ ಮಾಡುತ್ತಿವೆ.
ಕೆಲವೊಮ್ಮೆ ಕೂದಲೆಳೆ ಅಂತರದಿಂದ ಪಾರಾದರೆ, ಆನೆಗಳ ದಾಳಿಗೆ ಸಿಲುಕಿ ಮೃತಪಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ ಕಾಡಾನೆಗಳ ದಾಳಿಯಿಂದ 85 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ ಬೆಳೆ ಹಾನಿಯೂ ವಿಪರೀತವಾಗುತ್ತಿದೆ ಎನ್ನುವುದು ಮಲೆನಾಡಿನ ಜನರ ಅಳಲು.
ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತ್ವರಿತವಾಗಿ ಪರಿಹಾರದ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಅರಣ್ಯ ಸಚಿವ
ಸಮಸ್ಯೆಗೆ ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುವ ಅಗತ್ಯ ಇದೆ. ಆನೆಧಾಮ ನಿರ್ಮಿಸಲು ಸ್ಥಳ ಆಹಾರ ಮತ್ತು ನೀರಿನ ಕೊರತೆ ಇಲ್ಲ. ನಮಗೆ ಇಚ್ಛಾಶಕ್ತಿಯ ಕೊರತೆ ಇದೆ.ಸಿಮೆಂಟ್ ಮಂಜು ಸಕಲೇಶಪುರ ಶಾಸಕ
ಬಿಕ್ಕೋಡು ಅರಳಿ ಭಾಗದಲ್ಲಿ ಸಂಜೆ ನಂತರ ಮನೆಯಿಂದ ಆಚೆ ಬರಲು ಜನರು ಭಯಪಡುತ್ತಿದ್ದಾರೆ. ವಿಧಾನಸಭೆಯಲ್ಲಿ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡಿದ್ದು ಈಗಲಾದರೂ ಪರಿಹಾರ ಕಂಡುಕೊಳ್ಳಲೇಬೇಕು.ಎಚ್.ಕೆ. ಸುರೇಶ್ ಬೇಲೂರು ಶಾಸಕ
ಆನೆಗಳ ಪುನರ್ವಸತಿಗೆ ಪ್ರತ್ಯೇಕ ಮಂಡಳಿ ಅಗತ್ಯವಿದೆ. ಮಂಡಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನ ನೀಡಬೇಕು. ಸಾಮಾಜಿಕ ಹೊಣೆಗಾರಿಕೆ ನಿಧಿ ಪಡೆಯುವ ಅಧಿಕಾರವೂ ಇರಬೇಕು.ಆರ್.ಪಿ. ವೆಂಕಟೇಶಮೂರ್ತಿ ಸಮನ್ವಯ ಸಮಿತಿ ಪ್ರಧಾನ ಸಂಚಾಲಕ
ಪರಿಹಾರ ಏನು?
ಜಿಲ್ಲೆಯ ಬಿಸಿಲೆ ಘಾಟ್ ಪ್ರದೇಶದಲ್ಲಿ 15 ಸಾವಿರ ಎಕರೆ ಸರ್ಕಾರಿ ಜಮೀನು 3500 ಎಕರೆ ಖಾಸಗಿ ಜಮೀನು ಸೇರಿದಂತೆ 20 ಸಾವಿರ ಎಕರೆ ಪ್ರದೇಶದಲ್ಲಿ ಆನೆ ಕಾರಿಡಾರ್ ನಿರ್ಮಾಣ ಮಾಡಬೇಕು ಎನ್ನುವ ಬೇಡಿಕೆ ಬಹುದಿನಗಳಿಂದ ಕೇಳಿ ಬರುತ್ತಲೇ ಇದೆ. ಈ ಹಿಂದೆಯೂ ಇದಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಪಶ್ಚಿಮ ಘಟ್ಟದ ಅರಣ್ಯದ ಅಂಚಿನಲ್ಲಿರುವ ಸುಮಾರು 7 ಗ್ರಾಮಗಳ ಜನರು 2200 ಎಕರೆ ಜಮೀನು ನೀಡಲು ಮುಂದೆ ಬಂದಿದ್ದಾರೆ. ಆದರೆ ಎತ್ತಿನಹೊಳೆ ಯೋಜನೆಯ ಮಾದರಿಯಲ್ಲಿಯೇ ಎಕರೆಗೆ ₹15 ಲಕ್ಷ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ. ಕೇವಲ ಪರಿಹಾರ ವಿತರಣೆಗಾಗಿಯೇ ಜಮೀನಿನ ಭೂಸ್ವಾಧೀನಕ್ಕೆ ₹252 ಕೋಟಿ ಬೇಕು. ಜೊತೆಗೆ ಕಾಡಾನೆಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಲು ₹20 ಕೋಟಿ ಸೇರಿದಂತೆ ₹275 ಕೋಟಿ ಅನುದಾನದ ಅಗತ್ಯವಿದೆ ಎನ್ನುತ್ತಾರೆ ಸಂಸದ ಶ್ರೇಯಸ್ ಪಟೇಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.