ಚಿನ್ನದ ಸರ
ಹಾಸನ: ಅರಸೀಕೆರೆ ತಾಲ್ಲೂಕಿನ ಕಾಮೇನಹಳ್ಳಿ ತಾಂಡ್ಯದ ಕಟ್ಟೆ ಬಳಿ ಹೋಗುತ್ತಿದ್ದ ಮಹಿಳೆಯನ್ನು ವಂಚಿಸಿದ ಅಪರಿಚಿತ ವ್ಯಕ್ತಿಯೊಬ್ಬ 25 ಗ್ರಾಂ ಚಿನ್ನದ ಸರ ಕಳವು ಮಾಡಿದ್ದಾನೆ.
ಕಾಮೇನಹಳ್ಳಿಯ ನಿರ್ಮಲಾ ಎಚ್.ಎಸ್. ಅವರು ದಾಳಿಂಬೆ ಜಮೀನಿಗೆ ಹೋಗಲು ಕಾಮೇನಹಳ್ಳಿ ತಾಂಡ್ಯದ ಕಟ್ಟೆ ಬಳಿ ನಡೆದುಕೊಂಡು ಹೋಗುತ್ತಿದ್ದರು. ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿ, ಸಖರಾಯಪಟ್ಟಣದ ದಾರಿ ಕೇಳಿದ್ದಾನೆ. ಆಗ, ‘ನಿಮ್ಮ ಕೊರಳ ಬಳಿ ಹುಳು ಇದೆ ತೆಗೆಯಿರಿ’ ಎಂದ ಅಪರಿಚಿತ ವ್ಯಕ್ತಿ, ತಾನೆ ಕೊರಳಿಗೆ ಕೈ ಹಾಕಿದ್ದಾನೆ.
ಜಮೀನಿನ ಬಳಿ ತೆರಳಿದ ನಿರ್ಮಲಾ ಅವರು ಕೊರಳನ್ನು ನೋಡಿದಾಗ, 25 ಗ್ರಾಂ ಚಿನ್ನದ ಸರ ಇರಲಿಲ್ಲ. ಜಾವಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಗನವಾಡಿ, ಸರ್ಕಾರಿ ಶಾಲೆಯಲ್ಲಿ ಕಳವು
ಹಾಸನ: ಬೇಲೂರು ತಾಲ್ಲೂಕಿನ ಲಿಂಗಾಪುರ ಗ್ರಾಮದ ಅಂಗನವಾಡಿ ಹಾಗೂ ಸರ್ಕಾರಿ ಶಾಲೆಯಲ್ಲಿ ಕಳವು ಮಾಡಲಾಗಿದೆ.
ಅಂಗನವಾಡಿ ಕೇಂದ್ರದ ಹಿಂಬಾಗಿಲನ್ನು ಮೀಟಿ ಒಳಗೆ ನುಗ್ಗಿರುವ ಕಳ್ಳರು, 42 ಇಂಚಿನ ಟಿವಿ, 2 ಸಿಲಿಂಡರ್, 35 ಸ್ಟೀಲ್ ತಟ್ಟೆ, 65 ಸ್ಟೀಲ್ ಲೋಟ, 1 ಗೋಡೆ ಗಡಿಯಾರ, 10 ಕೆ.ಜಿ. ಹಾಲಿನ ಪುಡಿ, 2 ಲೀ ಎಣ್ಣೆ, 10 ಕೆ.ಜಿ. ಬೆಲ್ಲ, 10 ಕೆ.ಜಿ. ಅಕ್ಕಿ, 5 ಕೆ.ಜಿ. ಸಕ್ಕರೆ, 10 ಮೊಟ್ಟೆ ಸೇರಿದಂತೆ ₹ 25 ಸಾವಿರ ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ.
ಪಕ್ಕದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಗ್ಯಾಸ್ ಸ್ಟೌ ಕಳವು ಮಾಡಲಾಗಿದೆ. ಅರೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
₹ 1 ಲಕ್ಷ ನಗದು, ಮೊಬೈಲ್ ಕಳವು
ಹಾಸನ: ಅರಸೀಕೆರೆ ತಾಲ್ಲೂಕಿನ ಗೀಜಿಹಳ್ಳಿ ಗ್ರಾಮದ ಮನೆಯ ಹೆಂಚು ತೆಗೆದು ಒಳನುಗ್ಗಿರುವ ಕಳ್ಳರು, ₹ 1 ಲಕ್ಷ ನಗದು ಹಾಗೂ ಮೊಬೈಲ್ ಕಳವು ಮಾಡಿದ್ದಾರೆ.
ಗ್ರಾಮದ ಜಯಕುಮಾರ ಅವರು ಮನೆಗೆ ಬೀಗ ಕಣಕಟ್ಟೆಗೆ ಹೋಗಿದ್ದರು ರಾತ್ರಿ ಮನೆಗೆ ಹಿಂದಿರುಗಿದಾಗ, ಮನೆಯ ಅಟ್ಟದ ಮೇಲೆ ಮಳೆ ನೀರು ಸೋರುತಿತ್ತು. ಮೇಲೆ ಹೋಗಿ ನೋಡಿದಾಗ, ಹೆಂಚು ತೆಗೆಯಲಾಗಿತ್ತು. ಮನೆಯ ಹಾಸಿಗೆ ಅಡಿಯಲ್ಲಿ ಇಟ್ಟಿದ್ದ ₹ 1 ಲಕ್ಷ ನಗದು, ಮೊಬೈಲ್ ಕಳ್ಳತನ ಆಗಿವೆ. ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.