ADVERTISEMENT

ಹಾಸನ | ಭೂಸ್ವಾಧೀನ ಪರಿಹಾರದಲ್ಲಿ ಅಕ್ರಮ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 7:41 IST
Last Updated 27 ಫೆಬ್ರುವರಿ 2026, 7:41 IST
ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಸದಸ್ಯರು ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು 
ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಸದಸ್ಯರು ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು    

ಹಾಸನ: ಯಗಚಿ ಜಲಾಶಯ ಯೋಜನೆ ಭೂ ಸ್ವಾಧೀನ ಪರಿಹಾರವನ್ನು ಅಕ್ರಮವಾಗಿ ಅನ್ಯರು ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪಿಸಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ಮಾತನಾಡಿ, ‘ತಾಲ್ಲೂಕಿನ ಕಟ್ಟಾಯ ಹೋಬಳಿಯ ಕಟ್ಟಾಯ ಗ್ರಾಮದ ಸರ್ವೆ ನಂ.128/1ಎ ದಲ್ಲಿ ಯಗಚಿ ಜಲಾಶಯ ಯೋಜನೆಗಾಗಿ 2009–10ರಲ್ಲಿ 1 ಎಕರೆ 25 ಗುಂಟೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮ ನಡೆದಿದೆ’ ಎಂದು ಆರೋಪಿಸಿದರು.

‘ಸರ್ವೆ ನಂ.128/1ಎ ಪೈಕಿ 2 ಎಕರೆ 09.04 ಗುಂಟೆ ವಿಸ್ತೀರ್ಣದ ಜಮೀನಿನ ಹಕ್ಕುದಾರರು ಪ್ರೇಮ ಅವರಾಗಿದ್ದು, ಅದು ಪಿತ್ರಾರ್ಜಿತ ಸ್ವತ್ತಾಗಿದೆ. ಆದರೂ ಅಧಿಸೂಚನೆಯಲ್ಲಿ ಅವರ ಹೆಸರನ್ನು ಕೈಬಿಟ್ಟು ಇತರರ ಹೆಸರನ್ನು ಸೇರಿಸಲಾಗಿದೆ’ ಎಂದು ದೂರಿದರು.

ADVERTISEMENT

‘ಭೂಸ್ವಾಧೀನಕ್ಕೆ ಒಳಪಟ್ಟ 1 ಎಕರೆ 25 ಗುಂಟೆ ಜಮೀನಿನಲ್ಲಿ 37 ಗುಂಟೆ ಕೆ. ಶ್ಯಾಮಣ್ಣ ಪಾಲಾಗಿದ್ದು, 28 ಗುಂಟೆ ಜವರೇಗೌಡರ ಸ್ವಾಧೀನದಲ್ಲಿತ್ತು. ಆದರೆ 28 ಗುಂಟೆ ವಿವಾದಿತ ಜಮೀನಿಗೆ ಸಂಬಂಧಿಸಿದ ಪರಿಹಾರ ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿ ಇಡುವ ಬದಲು, ಸ್ವತ್ತಿನ ಮಾಲೀಕರೂ ಅಲ್ಲದ ಮಂಜುನಾಥ ಅವರ ಹೆಸರಿಗೆ 2014 ಆಗಸ್ಟ್ 16 ರಂದು ವೈಯಕ್ತಿಕ ಅವಾರ್ಡ್ ಮಾಡಿ ಪರಿಹಾರ ಪಾವತಿಸಲಾಗಿದೆ. ಭೂಸ್ವಾಧೀನಾಧಿಕಾರಿ ಕಚೇರಿ ಸಿಬ್ಬಂದಿಯೊಂದಿಗೆ ಶಾಮೀಲಾಗಿ ಅಕ್ರಮವಾಗಿ ಪರಿಹಾರ ಪಡೆದುಕೊಳ್ಳಲಾಗಿದೆ’ ಎಂದು ದೂರಿದರು.

ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ವಿವಾದಿತ ಜಮೀನಿನ ಹಕ್ಕು ಮತ್ತು ಸ್ವಾಧೀನ ಅನುಭವವನ್ನು ಪರಿಶೀಲಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಮಂಜುನಾಥ ಹೆಸರಿಗೆ ನೀಡಿರುವ ವೈಯಕ್ತಿಕ ಅವಾರ್ಡ್ ರದ್ದುಪಡಿಸಿ, ಅಕ್ರಮವಾಗಿ ಪಡೆದ ಪರಿಹಾರ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಬೇಕು. ಬಳಿಕ ಮೂಲ ಹಕ್ಕುದಾರರ ಪರವಾಗಿ ಪ್ರತ್ಯೇಕ ಅವಾರ್ಡ್ ಆದೇಶ ಹೊರಡಿಸಿ ನ್ಯಾಯಸಮ್ಮತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ನವೀನ್, ರವಿ, ಹರ್ಷ, ತೌಫಿಕ್ ಪಾಷ, ಕೃಷ್ಣಯ್ಯ, ಪ್ರೇಮಾ, ಪ್ರತಾಪ್, ರವಿಕುಮಾರ್, ಮಂಜೇಗೌಡ, ನಂಜೇಗೌಡ, ದೇವೇಗೌಡ, ಲಕ್ಷ್ಮಮ್ಮ, ಮಲ್ಲೇಶ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.