ಹಾಸನ: ಜಿಲ್ಲೆಯ ಅಧಿದೇವತೆ ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ದೇವಿಯ ಆಭರಣಗಳನ್ನು ನಗರದ ಸಾಲಗಾಮೆ ರಸ್ತೆಯ ಜಿಲ್ಲಾ ಖಜಾನೆಯಿಂದ ಪಲ್ಲಕ್ಕಿಯಲ್ಲಿ ಇರಿಸಿ, ಬೆಳ್ಳಿ ರಥದಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು.
ಜಿಲ್ಲಾ ಖಜಾನೆಯಿಂದ ಒಡವೆ ಪೆಟ್ಟಿಗೆಗಳನ್ನು ಹೊರ ತಂದ ದೇವಾಲಯದ ಪ್ರಧಾನ ಅರ್ಚಕ ನಾಗರಾಜ್ ಪೂಜೆ ಸಲ್ಲಿಸಿದರು. ಸಂಪ್ರದಾಯದಂತೆ ಮಡಿವಾಳರು, ಪಂಜು ಮತ್ತು ಮಹಿಳೆಯರು ಆರತಿ ಬೆಳಗಿದ ಬಳಿಕ ಹಾಸನಾಂಬ ದೇವಿಯ ಜೈಕಾರದೊಂದಿಗೆ ಬೆಳ್ಳಿಯ ರಥದಲ್ಲಿ ದೇವಿಯ ಆಭರಣಗಳ ಪೆಟ್ಟಿಗೆ ಇರಿಸಲಾಯಿತು.
ನಂತರ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮಂಗಳವಾದ್ಯಗಳ ಜೊತೆಗೆ ಮೆರವಣಿಗೆ ಮೂಲಕ ಆಭರಣಗಳನ್ನು ದೇಗುಲಕ್ಕೆ ತರಲಾಯಿತು.
‘ಧಾರ್ಮಿಕ ನಂಬಿಕೆಯಂತೆ ಆಶ್ವಯುಜ ಮಾಸದ ಹುಣ್ಣಿಮೆಯ ನಂತರ ಬರುವ ಮೊದಲ ಗುರುವಾರ ಅಂದರೆ ಅ.9ರಂದು ಮಧ್ಯಾಹ್ನ 12ಕ್ಕೆ ಸರಿಯಾಗಿ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಾಗುತ್ತದೆ. ಅಕ್ಟೋಬರ್ 23ರಂದು ಗರ್ಭಗುಡಿ ಬಾಗಿಲು ಮುಚ್ಚಲಾಗುವುದು’ ಎಂದು ಪ್ರಧಾನ ಅರ್ಚಕ ನಾಗರಾಜ್ ತಿಳಿಸಿದರು.
ಈ ಬಾರಿ 15 ದಿನಗಳ ಕಾಲ ದೇವಾಲಯದ ಬಾಗಿಲು ತೆರೆಯಲಿದ್ದು, 13 ದಿನ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಡಿಮೆ ಎಂದರೆ 9 ದಿನ, ಹೆಚ್ಚು ಎಂದರೆ 15 ದಿನ ಮಾತ್ರ ದೇವಾಲಯದ ಬಾಗಿಲು ತೆರೆಯುವುದು ವಾಡಿಕೆ ಎಂದು ಹೇಳಿದರು.
ಗರ್ಭಗುಡಿಯ ಬಾಗಿಲು ಅಕ್ಟೋಬರ್ 9ರಂದು 12 ಗಂಟೆಗೆ ವಿಧ್ಯುಕ್ತವಾಗಿ ತೆರೆಯಲಾಗುತ್ತಿದ್ದು, ಬಳಿಕ ದೇವಸ್ಥಾನದ ಆಡಳಿತಾಧಿಕಾರಿ, ಅಂದು ಬರುವ ಗಣ್ಯರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು. ನಂತರ ಪೂರ್ಣ ದಿನ ಗರ್ಭಗುಡಿಯಲ್ಲಿ ಸ್ವಚ್ಛತೆ ಹಾಗೂ ದೇವಿಗೆ ಆಭರಣಗಳ ಅಲಂಕಾರ ಮಾಡಲಾಗುವುದು. ಮರುದಿನ ಬೆಳಿಗ್ಗೆ 6 ಗಂಟೆಯಿಂದ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಬಾಗಿಲು ತೆರೆಯುವ ದಿನ ಹಾಗೂ ಮುಚ್ಚುವ ದಿನ ಗಂಡು ಮಕ್ಕಳಿಗೆ ದೇವಿಯ ದರ್ಶನ ಮಾಡಕೂಡದು ಎಂದು ನಾಗರಾಜ್ ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಗೀತಾ, ಕಂದಾಯ ನಿರೀಕ್ಷಕ ಚಂದ್ರಶೇಖರ್, ಹನುಮಂತೇಗೌಡ, ದೇವಾಲಯದ ಅರ್ಚಕರಾದ ರವಿ, ಪ್ರಭಾಕರ್, ಶಶಿಶಾಸ್ತ್ರಿ, ಸಿದ್ದೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಪ್ರಕಾಶ್ ಇದ್ದರು.
ಜಾತ್ರೆ ನೆಪದಲ್ಲಿ ತೊಂದರೆ: ಕ್ರಮಕ್ಕೆ ಮನವಿ
‘ಹಾಸನಾಂಬ ಜಾತ್ರಾ ಮಹೋತ್ಸವ ನೆಪದಲ್ಲಿ ಎಲ್ಲೆಂದರಲ್ಲಿ ರಸ್ತೆ ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಲಾಗುತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ರಾಷ್ಟ್ರ ರಕ್ಷಣಾ ಸೇನೆ ರಾಜ್ಯ ಘಟಕದ ಸಂಚಾಲಕ ಸುರೇಶ್ ಗೌಡ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಆಯುಧ ಪೂಜೆ ಮುನ್ನಾ ದಿನವೇ ಪ್ರಮುಖ ವ್ಯಾಪಾರ ವಹಿವಾಟು ನಡೆಯುವ ಪ್ರದೇಶಗಳಿಗೆ ಸಂಚಾರ ನಿರ್ಬಂಧಿಸಿ ಬ್ಯಾರಿಕೇಡ್ ಹಾಕಲಾಗಿದೆ. ಇದರಿಂದ ದೇವಸ್ಥಾನದ ಸುತ್ತಲಿನ ವ್ಯಾಪಾರಸ್ಥರಿಗೆ ತೊಂದರೆ ಉಂಟಾಯಿತು’ ಎಂದು ಆರೋಪಿಸಿದರು. ಹಾಸನಾಂಬ ಜಾತ್ರಾ ಸಮಿತಿ ವತಿಯಿಂದ ಭಕ್ತಾದಿಗಳಿಗೆ ವಸ್ತ್ರ ಸಂಹಿತೆ ಜಾರಿ ಮಾಡಿದರೆ ಉತ್ತಮ. ದೇವಾಲಯಕ್ಕೆ ಬರುವಾಗ ಚಡ್ಡಿ ಟಿ-ಶರ್ಟ್‌ನಂತಹ ತುಂಡು ಉಡುಗೆ ಹಾಕಿಕೊಂಡು ಬರುವ ಬದಲು ಸಾಂಪ್ರದಾಯಿಕವಾಗಿ ಪಂಚೆ ಸೀರೆ ಚೂಡಿದಾರ್ ರೀತಿಯ ಉಡುಗೆಗಳನ್ನು ಹಾಕಿಕೊಂಡು ಬರುವಂತೆ ಜಾಗೃತಿ ಮೂಡಿಸಲು ಮನವಿ ಮಾಡಿದರು. ಭಕ್ತಾದಿಗಳು ಸಮಿತಿಯಿಂದ ಉಚಿತವಾಗಿ ಲಡ್ಡು ನೀಡಬೇಕು. ಲಘು ಉಪಾಹಾರದ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ಮುನೇಗೌಡ ಧರ್ಮನಾಯಕ್ ಮಹೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.