ADVERTISEMENT

ಹಾಸನಾಂಬೆಯ ಕಣ್ತುಂಬಿಕೊಂಡ ಭಕ್ತರು

ವಿಧಿ ವಿಧಾನಗಳೊಂದಿಗೆ ತೆರೆದ ಗರ್ಭಗುಡಿಯ ಬಾಗಿಲು: ದರ್ಶನಕ್ಕೆ ಜನರ ನೂಕುನುಗ್ಗಲು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 2:53 IST
Last Updated 10 ಅಕ್ಟೋಬರ್ 2025, 2:53 IST
ಹಾಸನಾಂಬ ದೇಗುಲದ ಗರ್ಭಗುಡಿ
ಹಾಸನಾಂಬ ದೇಗುಲದ ಗರ್ಭಗುಡಿ   

ಹಾಸನ: ಎಲ್ಲೆಡೆಯೂ ಭಕ್ತರ ಹರ್ಷೋದ್ಗಾರ, ದೇವಿಯ ದರ್ಶನಕ್ಕೆ ಭಕ್ತರ ನೂಕು ನುಗ್ಗಲು, ಬ್ಯಾರಿಕೇಡ್‌ ಅಳವಡಿಸಿದ್ದರೂ, ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ, ಮೊದಲ ದಿನವೇ ಹಾಸನಾಂಬೆ ವಿರಾಟ ರೂಪ ದರ್ಶನ ಪಡೆದು ಪುನೀತರಾದ ಭಕ್ತ ಜನ.

ಗುರುವಾರ ಆರಂಭವಾದ ಜಿಲ್ಲೆಯ ಶಕ್ತಿದೇವತೆ ಹಾಸನಾಂಬೆ ದರ್ಶನೋತ್ಸವದಲ್ಲಿ ಕಂಡು ಬಂದ ದೃಶ್ಯಗಳಿವು. ಮೊದಲ ದಿನವೇ ಜನರ ದಂಡು ಹರಿದು ಬಂದಿದ್ದು, ದೇಗುಲದ ಆವರಣದಲ್ಲಿ ನೂಕುನುಗ್ಗಲು ಉಂಟಾಗಿತ್ತು.

ಅಶ್ವೀಜ ಮಾಸ ಹುಣ್ಣಿಮೆ ನಂತರ ಬರುವ ಮೊದಲ ಗುರುವಾರ ವಿಧಿ ವಿಧಾನದಂತೆ ಅರ್ಚಕರು ಪೂಜೆ ಸಲ್ಲಿಸಿದ ಬಳಿಕ ಮಧ್ಯಾಹ್ನ ಸುಮಾರು 12.22 ಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ, ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಕಿರೆಕೊಡ್ಲಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಕೆ.ಎನ್. ರಾಜಣ್ಣ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಟಿ.ಎನ್‌. ಇನವಳ್ಳಿ, ಹಿರಿಯ ಸಿವಿಲ್‌ ನ್ಯಾಯಾಧೀಶ ಬಿ.ಕೆ. ರವಿಕಾಂತ್‌, ಶಾಸಕ‌ ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ, ಹಾಸನಾಂಬ ದೇವಸ್ಥಾನ ಆಡಳಿತಾಧಿಕಾರಿ ಮಾರುತಿ, ಎಸ್ಪಿ ಮೊಹಮ್ಮದ್ ಸುಜಿತಾ , ಎಎಸ್ಪಿ ತಮ್ಮಯ್ಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್‌. ಪೂರ್ಣಿಮಾ, ಉಪ ವಿಭಾಗಾಧಿಕಾರಿ ಶ್ರುತಿ, ತಹಶೀಲ್ದಾರ್ ಶ್ವೇತಾ, ಅಧಿಕಾರಿಗಳ ಸಮ್ಮುಖದಲ್ಲಿ ದೇಗುಲದ ಗರ್ಭಗುಡಿ ಬಾಗಿಲ ಬೀಗ ಮುದ್ರೆ ತೆರೆಯಲಾಯಿತು.

ADVERTISEMENT

ಬೆಳಿಗ್ಗೆ ದೇಗುಲದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದವು. ತಳವಾರ ವಂಶದ ನರಸಿಂಹರಾಜ್ ಅರಸ್ ಬಾಳೆ ಕಂದು ಕಡಿಯುವ ಮೂಲಕ ಬಾಗಿಲು ತೆರೆಯಲು ಅನುವು ಮಾಡಿಕೊಟ್ಟರು. ಹಾಸನಾಂಬ, ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು.

ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ಹಾಗೂ ಮಧ್ಯಾಹ್ನ 3 ರಿಂದ ರಾತ್ರಿ 2 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಶೇಷ ದರ್ಶನಕ್ಕಾಗಿ ಒಬ್ಬರಿಗೆ ₹300 ಹಾಗೂ ₹ 1000 ಮುಖಬೆಲೆಯ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ.

ವಿಶೇಷ ದರ್ಶನ, ಸಾಮಾನ್ಯ ದರ್ಶನ, ವಿವಿಐಪಿ ದರ್ಶನಕ್ಕೆ ಪ್ರತ್ಯೇಕ ದ್ವಾರಗಳ ವ್ಯವಸ್ಥೆ ಮಾಡಲಾಗಿದೆ. ಸರದಿಯಲ್ಲಿ ನಿಲ್ಲುವ ಭಕ್ತರಿಗೆ ನೆರಳು, ಅಂಗವಿಕಲರಿಗೆ ಗಾಲಿ ಕುರ್ಚಿಗಳನ್ನು ಒದಗಿಸಲಾಗಿದೆ.

ನಾಡಿನ ಒಳಿತಿಗಾಗಿ ಪ್ರಾರ್ಥನೆ:

ಜಿಲ್ಲಾಡಳಿತದ ವತಿಯಿಂದ ಜಾತ್ರಾ ಮಹೋತ್ಸವ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ ಹಾಗೂ ಕಮಾನುಗಳ ಅಲಂಕಾರ, ದೇವಸ್ಥಾನದಲ್ಲಿ ಪುಷ್ಪಲಂಕಾರ ದೀಪಾಲಂಕಾರ ಹಾಗೂ ಗರ್ಭಗುಡಿಯ ಗೋಪುರಕ್ಕೆ ನೂತನ ಕಳಸ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ತಿಳಿಸಿದರು.

ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ದರ್ಶನಕ್ಕೆ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗಿದೆ. ದೇವಿಯ ದರ್ಶನ ಮತ್ತು ವಿಶೇಷ ಪೂಜೆ ನೆರವೇರಿಸಿ ಜಿಲ್ಲೆಗೆ ಹಾಗೂ ನಾಡಿನ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಲಾಗಿದೆ ಎಂದರು.

ಈ ಬಾರಿ ನೆರೆ ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆಯಿಂದ 10 ಲಕ್ಷ ಮಂದಿ ಭಕ್ತಾದಿಗಳು ಬರುವ ನಿರೀಕ್ಷೆಯಿದ್ದು, ಮಹಿಳಾ ಭಕ್ತರ ಸಂಖ್ಯೆ ಹೆಚ್ಚಲಿದೆ. ಉತ್ತಮ ರೀತಿಯಲ್ಲಿ ಜಾತ್ರೆ ಸಾಗಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.

ಅಂಗವಿಲಕರು, ವೃದ್ಧರಿಗೆ ವಿಶೇಷ ದರ್ಶನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಬಾರಿ ದರ್ಶನ ಪಡೆಯಲು ದಿನದ 24 ಗಂಟೆ ಅವಕಾಶ ಕಲ್ಪಿಸಲಾಗಿದ್ದು, ಗೊಂದಲ ಸೃಷ್ಟಿ ಬೇಡ. ಯಾವುದೇ ತಡೆ ಇಲ್ಲದೇ ಸುಲಲಿತವಾಗಿ ಭಕ್ತರು ದರ್ಶನ ಪಡೆಯುವಂತೆ ಮನವಿ ಮಾಡಿದರು.

ನ. 5 ರಂದು ಆಳ್ವಾಸ್ ನುಡಿಸಿರಿ ಕಲಾತಂಡದಿಂದ ನಗರದ ಕಲಾ ಕಾಲೇಜು ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಕೋರಿದರು.

ಹಾಸನಾಂಬ ದೇಗುಲದ ಗರ್ಭಗುಡಿ
ಗರ್ಭಗುಡಿಯ ಬಾಗಿಲು ತೆರೆಯುವ ಮುನ್ನ ಪೂಜೆ ಸಲ್ಲಿಸಲಾಯಿತು
ಹಾಸನಾಂಬ ದರ್ಶನೋತ್ಸವದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸಿದ್ದ ಸಚಿವ ಕೆ.ಎನ್‌. ರಾಜಣ್ಣ
ಹಾಸನಾಂಬ ದರ್ಶನಕ್ಕೆ ಬರುವ ವೇಳೆ ಕಾಂಗ್ರೆಸ್‌ ಮುಖಂಡರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು
ದರ್ಶನೋತ್ಸವಕ್ಕೆ ಚಾಲನೆ ನೀಡಲು ಬಂದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಸಚಿವ ಕೆ.ಎನ್‌. ರಾಜಣ್ಣ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಸ್ವಾಗತಿಸಿದರು
ದರ್ಶನದ ಮೊದಲ ದಿನ ದೇಗುಲದ ಎದುರು ಸೇರಿದ್ದ ಜನ
ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಜಿಲ್ಲೆಯ ಅಧಿಕಾರಿಗಳು ಸಿದ್ಧೇಶ್ವರ ಸ್ವಾಮಿ ದರ್ಶನ ಪಡೆದರು
ಹಾಸನಾಂಬ ದರ್ಶನಕ್ಕೆ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಧಿಕೃತ ಸಮಯಕ್ಕೆ ಸರಿಯಾಗಿ ಬಾಗಿಲು‌ ತೆರೆಯಲಾಗಿದ್ದು ಎಲ್ಲರು ಶಾಂತಿಯುತವಾಗಿ ದೇವಿ ದರ್ಶನ ಪಡೆಯಬೇಕು
ಕೆ.ಎನ್. ರಾಜಣ್ಣ ಜಿಲ್ಲಾ ಉಸ್ತುವಾರಿ ಸಚಿವ
ಅಶ್ವೀಜ ಮಾಸದಲ್ಲಿ ಹಾಸನಾಂಬೆ ದೇಗುಲದ ಬಾಗಿಲು ತೆರೆಯಲಾಗಿದೆ. ದೇವಿಯ ವಾರ್ಷಿಕ ದರ್ಶನ ಆರಂಭವಾಗಿದ್ದು ಎರಡು ವಾರಗಳ ಕಾಲ ದೇವಿಯು ಸಕಲರಿಗೆ ಶುಭಫಲ ನೀಡಲಿ
ನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಮಠ

ಮೊದಲ ದಿನವೇ ಪ್ರತಿಭಟನೆ ಬಿಸಿ

ಹಾಸನಾಂಬೆ ದೇಗುಲದ ಬಾಗಿಲು ತೆರೆಯುವ ಮೊದಲ ದಿನವೇ ಪ್ರತಿಭಟನೆಯ ಬಿಸಿ ತಟ್ಟಿತು. ಆಡಳಿತ ಪಕ್ಷ ಕಾಂಗ್ರೆಸ್‌ ಕಾರ್ಯಕರ್ತರು ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್‌ ಅವರಿಗೂ ಪೊಲೀಸ್ ವ್ಯವಸ್ಥೆಯ ಚುರುಕು ಮುಟ್ಟಿತು. ದೇವಿಯ ದರ್ಶನಕ್ಕೆ ತೆರಳುವ ಸಂದರ್ಭದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಇದರ ಜೊತೆಗೆ ಸ್ಥಳೀಯ ಜನರೂ ದರ್ಶನಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಅಲ್ಲಿಗೇ ಬಂದ ಸ್ಥಳೀಯ ಶಾಸಕ ಸ್ವರೂಪ್‌ ಪ್ರಕಾಶ್‌ ಕೂಡ ಈ ಬಗ್ಗೆ ತಲೆಕೆಡಿಸಿಕೊಳ್ಳದೇ ದೇವಸ್ಥಾನದ ಒಳಗೆ ತೆರಳಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಇನ್ನೊಂದೆಡೆ ನಗರಸಭೆ ಮಾಜಿ ಅಧ್ಯಕ್ಷ ಆರ್‌. ಮೋಹನ್ ಅವರನ್ನು ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಮೋಹನ್‌ ಅವರು ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ಆರಂಭಿಸಿದರು. ನಂತರ ಅಧಿಕಾರಿಗಳು ಬಂದು ಪರಿಸ್ಥಿತಿ ತಿಳಿಗೊಳಿಸಿದರು. ದೇಗುಲ ಪ್ರವೇಶ ದ್ವಾರದಲ್ಲಿ ಹೊರ ಜಿಲ್ಲೆಯ ಪೊಲೀಸರನ್ನು ನಿಯೋಜಿಸಲಾಗಿದ್ದು ಸ್ಥಳೀಯ ಮುಖಂಡರ ಪರಿಚಯವೇ ಇಲ್ಲದೇ ಇಷ್ಟೆಲ್ಲ ಆವಾಂತರ ಸೃಷ್ಟಿಯಾಗುತ್ತಿದೆ. ಪ್ರತಿ ವರ್ಷ ಹಾಸನಾಂಬೆ ಜಾತ್ರೆ ಸಂದರ್ಭದಲ್ಲಿ ಇಂತಹ ಗೊಂದಲಗಳು ಸೃಷ್ಟಿಯಾಗುತ್ತಲೇ ಇವೆ ಎಂದು ಸಾರ್ವಜನಿಕರು ದೂರಿದರು.

ಸಾಂಸ್ಕೃತಿಕ ವೈಭವ ಹಾಸನಾಂಬ ಮತ್ತು ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಸ್ಥಳೀಯ ಕಲಾವಿದರಿಂದ ಹಾಸನಾಂಬ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ನ.2 ರಿಂದ ನ.14ರವರೆಗೆ ಸಂಜೆ 5 ಗಂಟೆಯಿಂದ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಸುಗಮ ಸಂಗೀತ ಭಕ್ತಿಗೀತೆ ಗಾಯನ ಜನಪದ ಗೀತೆ ಭಾವ ಸಂಗಮ ಭಜನೆ ವಾದ್ಯ ಸಂಗೀತ ಭರತ ನಾಟ್ಯ ಹರಿಕಥೆ ಹಾಸನಾಂಬ ದೇವಿಯ ಮಹಿಮೆಯ ಕುರಿತು ಗೀತಗಾಯನ ರಂಗ ಗೀತೆಗಳು ಪರಿಸರ ಗೀತೆಗಳು ಪರಿಸರ ಮತ್ತು ಜಾಗೃತಿ ಗೀತೆಗಳ ನಡೆಯಲಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹರೀಶ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.