ADVERTISEMENT

ಹಾಸನ| ಮುಖ್ಯಮಂತ್ರಿ ಶ್ವೇತಪತ್ರ ಹೊರಡಿಸಲಿ: ಎಚ್.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 2:04 IST
Last Updated 22 ಡಿಸೆಂಬರ್ 2025, 2:04 IST
<div class="paragraphs"><p>ಭಾನುವಾರ ಹಾಸನಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ವಿಮಾನ ನಿಲ್ದಾಣ ಕಾಮಗಾರಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.&nbsp;</p></div>

ಭಾನುವಾರ ಹಾಸನಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ವಿಮಾನ ನಿಲ್ದಾಣ ಕಾಮಗಾರಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. 

   

ಹಾಸನ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ 2,400ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಆಗಿದೆ. ಕಂದಾಯ ಸಚಿವರು ₹ 1 ಸಾವಿರ ಕೋಟಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಅತಿವೃಷ್ಟಿಯಿಂದ ₹1 ಲಕ್ಷ ಕೋಟಿ ನಷ್ಟವಾಗಿದೆ ಎಂದು ಹೇಳುತ್ತಾರೆ. ವೇದಿಕೆ ಮೇಲೆ ಬರಿ ಪೊಳ್ಳು ಹೇಳಿಕೆ ಕೊಟ್ಟುಕೊಂಡು ಎಷ್ಟು ದಿನಕಾಲ ಕಳೆಯುತ್ತೀರಾ ಎಂದು ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ₹ 34ಸಾವಿರ ಕೋಟಿಯನ್ನು ಸಾಲವಾಗಿ ರೈತರಿಗೆ ಕೊಡುತ್ತೇವೆ ಎಂದು ರಾಜಣ್ಣ ಹೇಳುತ್ತಲೇ ಇದ್ದರು. ನವೆಂಬರ್ ಅಂತ್ಯವರೆಗೆ ₹ 12ಸಾವಿರ ಕೋಟಿ ಕೊಟ್ಟಿದ್ದಾರೆ. ನಬಾರ್ಡ್‌ನಿಂದ ಕಡಿತವಾಗಿದೆ ಎಂದು ಕಾರಣ ಹೇಳುತ್ತಾರೆ. 2006, 2017, 2018 ರಲ್ಲಿ ರೈತರ ₹ 1 ಲಕ್ಷ ಸಾಲ ಮನ್ನಾ ಮಾಡಿ, ಹಣ ಕೊಟ್ಟೆ. ಹಣ ನೀಡಿದ ಬಳಿಕ ಬ್ಯಾಂಕ್‌ಗಳು ಉಳಿದವು. ಇಂದು ತಮ್ಮ ಸರ್ಕಾರದಿಂದ ಎಷ್ಟೆಷ್ಟು ಕೊಟ್ಟಿದ್ದೇನೆ ಎಂಬುದರ ಬಗ್ಗೆ ಮುಖ್ಯಮಂತ್ರಿ ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು. 

ADVERTISEMENT

ಈ ಬಾರಿ ಬಜೆಟ್ ನಂತರ ರಾಜ್ಯದ ಸಾಲ ₹ 10 ಲಕ್ಷ ಕೋಟಿ ತಲುಪುತ್ತದೆ. ಕನಕಪುರ, ಮಾಗಡಿ, ಬೆಂಗಳೂರು ಸೇರಿಸಿ ಗ್ರೇಟರ್‌ ಬೆಂಗಳೂರು ಅಥಾರಿಟಿ ಮಾಡುವುದಾಗಿ ಹೇಳುತ್ತಾರೆ. ನನ್ನಿಂದ ಬೆಳೆದ ಚಿಲ್ಲರೆಗಳು, ಕುಮಾರಸ್ವಾಮಿ ಏನು ಮಾಡವ್ನೆ ಎನ್ನುತ್ತಾರೆ. ನಾನು ಮಾಡಿರುವ ಕೆಲಸಗಳು ಅವರ ಕಣ್ಣ ಮುಂದೆ ಇವೆ. ಜನರೇ ಮುಂದೆ ತೀರ್ಪು ಕೊಡುತ್ತಾರೆ ಎಂದರು.

ಜಮೀನು ಕೊಡುತ್ತೇವೆ ಎಂದರೂ ಮಂಡ್ಯಗೆ ಕಾರ್ಖಾನೆ ತರಲಿಲ್ಲ ಎಂದು ಹೇಳುತ್ತಾರೆ. ಒಬ್ಬ ಶಾಸಕ ಜಮೀನು ಕೊಡಿಸಲು ಆಗುತ್ತಾ? ಜಿಲ್ಲೆಗೆ ಯಾರ್‍ಯಾರು ಅನ್ಯಾಯ ಮಾಡಿದ್ದಾರೆ ಎಂಬುದನ್ನು ಮುಂದೆ ಹೇಳುತ್ತೇನೆ. ಯಾವ ಪಕ್ಷಗಳು ಇಲ್ಲಿ ಲೂಟಿ ಮಾಡಿವೆ ಎನ್ನುವುದನ್ನೂ ಹೇಳುತ್ತೇನೆ ಎಂದರು.

ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ರಾಜ್ಯ ಸರ್ಕಾರ ಸಹಕಾರ ಕೊಡಬೇಕು. ಭೂಮಿ, ವಿದ್ಯುತ್ ಕೊಡುವುದು ಅವರೇ. ಕೆಲವರು ಸುಮ್ಮನೆ ಕುಹುಕದ ಮಾತನಾಡುತ್ತಾರೆ. ₹7,290 ಕೋಟಿ ವೆಚ್ಚದಲ್ಲಿ ಮ್ಯಾಗ್ನೆಟಿಕ್ ಪ್ರೊಡಕ್ಷನ್ ಮಾಡುವ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದ್ದು, ಇದರಲ್ಲಿ ಎರಡು ಕಂಪನಿಗಳಿಗೆ ರಾಜ್ಯದಲ್ಲಿ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಉತ್ತರ ಕರ್ನಾಟಕದಲ್ಲಿ ಧಾರಾಕಾರ ಪ್ರವಾಹ ಬಂದಿತ್ತು. ತೊಗರಿ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನಿಗದಿ ಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವಿನ ಜವಾಬ್ದಾರಿ ಇದೆ. ಬೆಂಬಲ ಬೆಲೆಯಲ್ಲಿ ರೈತರಿಂದ ಕೃಷಿ ಉತ್ಪನ್ನ ಖರೀದಿಸಬೇಕು. ನಾನೂ ಎರಡು ಬಾರಿ ಮುಖ್ಯಮಂತ್ರಿ ಆದಾಗ ಇವೆಲ್ಲವನ್ನೂ ಎದುರಿಸಿದ್ದೇನೆ. ಕೆಲವು ಸತ್ಯಾಂಶಗಳನ್ನು ಹೇಳಲು ಆಗುವುದಿಲ್ಲ ಎಂದರು.

ಕಾಂಗ್ರೆಸ್ ಶಾಸಕರ ಸಂಖ್ಯೆ 140 ದಾಟಿದೆ. ನಾಲ್ಕು ತಿಂಗಳು ಕಳೆದರೆ ರಾಜ್ಯ ಸರ್ಕಾರ ಮೂರು ವರ್ಷ ಪೂರೈಸುತ್ತದೆ. ಅವರ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಮನವೊಲಿಸುವಲ್ಲಿ ನಿಮ್ಮ ಪ್ರಯತ್ನ ಏನು ಎಂದು ಪ್ರಶ್ನಿಸಿದರು.

ಜಿಲ್ಲೆಗೆ ಇತ್ತೀಚೆಗೆ ಕಾಂಗ್ರೆಸ್ ಲಗ್ಗೆ ಹಾಕಲು ಬಹಳ ವೇಗದಲ್ಲಿದ್ದು, ವೇದಿಕೆ, ಅಲಂಕಾರ, ಬಾಣ, ಬಿರುಸು ಕಾರ್ಯಕ್ರಮ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಜಿಲ್ಲೆಗೆ ಯಾರೂ ಮಾಡದ ಅಭಿವೃದ್ಧಿಗೆ ಚಾಲನೆ ಕೊಟ್ಟಿದ್ದೇವೆ. 70ಸಾವಿರ ಫಲಾನುಭವಿಗಳಿಗೆ ಆರ್ಥಿಕ ನೆರವು ಕೊಟ್ಟಿದ್ದೇವೆ ಎಂಬ ಜಾಹೀರಾತು ಗಮನಿಸಿದ್ದೇನೆ. ಕಾಂಗ್ರೆಸ್ ಕುರ್ಚಿ, ಇಡ್ಲಿ- ವಡೆ. ನಾಟಿ ಕೋಳಿ ತಿಂದಿದ್ದರ ಬಗ್ಗೆ ಮಾತನಾಡಲ್ಲ, ಅದು ನನಗೆ ಮಹತ್ವವಲ್ಲ. ಕಾಂಗ್ರೆಸ್ ಕುರ್ಚಿ ಅಲಂಕರಿಸುವವರು, ಮುಖ್ಯಮಂತ್ರಿ ಯಾರೂ ಎಂಬುದೂ ನನಗೆ ಅವಶ್ಯಕತೆ ಇಲ್ಲ ಎಂದರು.

ಶಾಸಕರಾದ ಸಿ.ಎನ್‌. ಬಾಲಕೃಷ್ಣ, ಸ್ವರೂಪ್‌ ಪ್ರಕಾಶ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಿಂಗೇಶ್‌ ಸೇರಿದಂತೆ ಮುಖಂಡರು, ಕಾರ್ಯಕರ್ತರು ಇದ್ದರು. 

ಕೇಂದ್ರ ಸರ್ಕಾರವೂ ಸಾಲ ಮಾಡಿದೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಕೇಂದ್ರ ಸರ್ಕಾರ ₹11 ಲಕ್ಷ ಕೋಟಿಯ ಆಸ್ತಿ ಮಾಡಿದೆ. ನಿಮ್ಮಲ್ಲಿ ಯಾವ ಆಸ್ತಿ ಮಾಡಿದ್ದೀರಾ?
ಎಚ್‌.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ

ಮಧ್ಯವರ್ತಿಗಳಿಂದ ಮೆಕ್ಕೆಜೋಳ ಖರೀದಿ

ಕೆಎಂಎಫ್‌ನಿಂದ ಕಳೆದ ವರ್ಷ 24 ಲಕ್ಷ ಟನ್ ಮೆಕ್ಕೆ ಜೋಳ ಖರೀದಿ ಮಾಡಲಾಗಿತ್ತು. ಈ ಬಾರಿ 10 ಲಕ್ಷ ಟನ್ ಖರೀದಿ ಮಾಡಿದ್ದಾರೆ. ಮಧ್ಯವರ್ತಿಗಳಿಂದ ಹಳೆಯ ಜೋಳ ಖರೀದಿ ಮಾಡಿರುವುದರಿಂದ ಈ ರೀತಿ ಆಗಿದೆ ಎಂದು ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು. ನಾನು 2006 ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ರೈತರಿಂದ ನೇರ ಖರೀದಿಗೆ ಕೆಎಂಎಫ್‌ಗೆ ಅವಕಾಶ ನೀಡಿದೆ. ಅಂದು ರೇವಣ್ಣ ಕೆಎಂಎಫ್ ಅಧ್ಯಕ್ಷರಿದ್ದರು. ಬಹುಶಃ ರೇವಣ್ಣ ನಾನು ಪರ್ಮನೆಂಟ್ ಅಧ್ಯಕ್ಷ ಆಗಿರುತ್ತೇನೆ ಅಂದುಕೊಂಡಿದ್ದ. ಆಗ ನಾನು ಇಲ್ಲಿನ ಪಶು ಆಹಾರ ಘಟಕ ನಿರ್ಮಾಣಕ್ಕೆ ಭೂಮಿ ಕೊಟ್ಟೆ ಹಣವನ್ನೂ ಕೊಟ್ಟೆ. ಆದರೆ ರೇವಣ್ಣ ಘಟಕವನ್ನು ಕೆಎಂಎಫ್‌ಗೆ ವರ್ಗಾವಣೆ ಮಾಡಿದ. ಅದರ ಪರಿಣಾಮ ಈಗ ಕಾಣ್ತಾ ಇದೆ ಎಂದು ಹೇಳಿದರು.

ವಿಮಾನ ನಿಲ್ದಾಣ: ರೈತರಿಗೆ ಅನ್ಯಾಯ ಆಗಲು ಬಿಡಲ್ಲ

ಹಾಸನದ ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟಿರುವ ರೈತರಿಗೂ ಕೆಲ ಸಮಸ್ಯೆಗಳಿವೆ. ಯಾವುದೇ ರೈತರಿಗೂ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಜಿಲ್ಲಾ ಕೇಂದ್ರದಲ್ಲಿ ಮೊದಲು ವಿಮಾನ ನಿಲ್ದಾಣ ಆಗಬೇಕಿರುವುದು ಹಾಸನದಲ್ಲಿ. ಆಗಿನ ಕೇಂದ್ರ ಸಚಿವ ಗುಲಾಂ ನಬಿ ಆಜಾದ್‌ ಅವರೊಂದಿಗೆ ಚರ್ಚಿಸಿ ಎಚ್‌.ಡಿ. ದೇವೇಗೌಡರು ವಿಮಾನ ನಿಲ್ದಾಣ ಮಂಜೂರು ಮಾಡಿಸಿದರು. ದೇವೇಗೌಡರನ್ನು ನಂಬಿ ಆಗಿನ ಕಾಲದಲ್ಲಿ ರೈತರು ಜಮೀನು ನೀಡಿದರು ಎಂದರು. ರೈತರ ಕೃಷಿ ಉತ್ಪನ್ನಗಳನ್ನು ರಫ್ತು ಮಾಡಲು ಅನುಕೂಲ ಆಗುವ ನಿಟ್ಟಿನಲ್ಲಿ ಈ ವಿಮಾನ ನಿಲ್ದಾಣ ನಿರ್ಮಾಣಕ್ಕೆ ದೇವೇಗೌಡರ ಮುಂದಾಗಿದ್ದರು. ₹ 143 ಕೋಟಿ ಅನುದಾನ ಬಿಡುಗಡೆಯಾದರೆ ಸಂಪೂರ್ಣ ಕಾಮಗಾರಿ ಮಾಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಹೈಟೆನ್ಷನ್‌ ಮಾರ್ಗವನ್ನು ಸ್ಥಳಾಂತರಿಸಲು ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರಿಗೂ ಮಾತನಾಡಿದ್ದೇನೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.