
ಹಾಸನ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ನಗರಕ್ಕೆ ಬರಲಿದ್ದು, ಹಾಸನಾಂಬೆಯ ದರ್ಶನ ಪಡೆಯಲಿದ್ದಾರೆ. ನಂತರ ಪಕ್ಷ ಸಂಘಟನೆ ಚುರುಕುಗೊಳಿಸಲು ಜಿಲ್ಲೆಯ ಹಾಗೂ ಹೊರಜಿಲ್ಲೆಯ ಜೆಡಿಎಸ್ ಮುಖಂಡರ ಸಭೆ ನಡೆಸಲಿದ್ದಾರೆ.
ಕಳೆದ ಬಾರಿಯೂ ಹಾಸನಾಂಬ ಜಾತ್ರೆಯ ವೇಳೆ ಪಕ್ಷದ ಶಾಸಕರು, ಜನಪ್ರತಿನಿಧಿಗಳು, ಪ್ರಮುಖ ನಾಯಕರೊಂದಿಗೆ ಅವರು ಸಭೆ ನಡೆಸಿದ್ದರು. ಆದರೆ, ಈ ಬಾರಿ ಜಿಲ್ಲೆಯ ಚಿತ್ರಣ ಬದಲಾಗಿದ್ದು, ತಾವೇ ಸಂಘಟನೆಯ ನೇತೃತ್ವ ವಹಿಸಿ, ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸಲು ನಿರ್ಧರಿಸಿದ್ದಾರೆ.
ಜಿಲ್ಲೆ, ತಾಲ್ಲೂಕು ಪಂಚಾಯಿತಿ ಹಾಗೂ ಇತರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ನಡೆಸಿರುವ ಸೂಚನೆ ಸಿಗುತ್ತಿದ್ದಂತೆಯೇ, ಪಕ್ಷದ ಪ್ರಮುಖ ನಾಯಕರ ಜೊತೆಗೆ ಮುಂದಿನ ರೂಪುರೇಷೆಗಳ ಕುರಿತು ಚರ್ಚೆ ನಡೆಸಲಿದ್ದಾರೆ.
‘ಎಚ್.ಡಿ. ದೇವೇಗೌಡರು ಇದೀಗ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪಕ್ಷದ ಸಂಘಟನೆಗೆ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ತವರು ಜಿಲ್ಲೆಯಿಂದಲೇ ಸಭೆ ಆರಂಭಿಸಲಾಗುತ್ತಿದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.
‘ರಾಷ್ಟ್ರಮಟ್ಟದಲ್ಲಿ ಏರ್ಪಟ್ಟಿರುವ ಜೆಡಿಎಸ್–ಬಿಜೆಪಿ ಮೈತ್ರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮುಂದುವರಿಯುವ ಸಾಧ್ಯತೆ ಇದೆ. ಈ ಸನ್ನಿವೇಶದಲ್ಲಿ ಯಾವ ರೀತಿ ಕಾರ್ಯಯೋಜನೆ ರೂಪಿಸಬೇಕು? ಅಭ್ಯರ್ಥಿಗಳ ಆಯ್ಕೆಗೆ ಯಾವ ಮಾನದಂಡ ಅನುಸರಿಸಬೇಕು ಎಂಬ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ’ ಎಂದು ತಿಳಿದು ಬಂದಿದೆ.
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಜೆಡಿಎಸ್, ಎರಡು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷವಾದ ಬಿಜೆಪಿ ಶಾಸಕರಿದ್ದಾರೆ. ಅರಸೀಕೆರೆಯಲ್ಲಿ ಮಾತ್ರ ಆಡಳಿತಾರೂಢ ಕಾಂಗ್ರೆಸ್ ಶಾಸಕರಿದ್ದು, ಸಂಸದರೂ ಕಾಂಗ್ರೆಸ್ ಪಕ್ಷದವರು. ಕಾಂಗ್ರೆಸ್ ಸರ್ಕಾರ, ಜಿಲ್ಲೆಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಲೇ ಇರುವ ಎಚ್.ಡಿ. ರೇವಣ್ಣ ಕೂಡ ಸಭೆಯಲ್ಲಿ ಭಾಗವಹಿಸಲಿದ್ದು, ಜಿಲ್ಲೆಯಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಮಾಹಿತಿ ನೀಡಲಿದ್ದಾರೆ.
‘ಸೂಕ್ತ ಸ್ಥಾನಮಾನ ಸಿಕ್ಕಿಲ್ಲವೆಂಬ ಅತೃಪ್ತಿ ವ್ಯಕ್ತಪಡಿಸುತ್ತಿರುವ ಜಿಲ್ಲೆಯ ಕಾಂಗ್ರೆಸ್ ನಾಯಕರತ್ತಲೂ ಕುಮಾರಸ್ವಾಮಿ ದೃಷ್ಟಿ ನೆಟ್ಟಿದ್ದಾರೆ. ಸಭೆಯಲ್ಲಿ ಈ ಬಗ್ಗೆಯೂ ಪ್ರಸ್ತಾಪವಾಗಲಿದೆ’ ಎಂಬ ಮಾತು ಮುಖಂಡರಿಂದ ಕೇಳಿ ಬಂದಿದೆ.
ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ನಿಗಮ–ಮಂಡಳಿಯಲ್ಲಿ ಸ್ಥಾನಗಳು ಸಿಕ್ಕಿಲ್ಲ. ಬೇರೆ ಕ್ಷೇತ್ರದವರನ್ನು ಕರೆತಂದು ಹುಡಾಕ್ಕೆ ಅಧ್ಯಕ್ಷರನ್ನಾಗಿಸಿರುವುದು ಹಾಸನ ಕ್ಷೇತ್ರದ ಮುಖಂಡರಿಗೆ ಬೇಸರ ತರಿಸಿದೆ. ಈ ಬಗ್ಗೆ ಮಾಹಿತಿ ಪಡೆದಿರುವ ಕುಮಾರಸ್ವಾಮಿ, ಅಂಥವರನ್ನು ಸೆಳೆಯಲು ಸಮಾಲೋಚನೆ ನಡೆಸಲಿದ್ದಾರೆ.
‘ಪಕ್ಷದಲ್ಲಿ ಅಸಮಾಧಾನವಿರುವುದು ನಿಜ. ಜೆಡಿಎಸ್ ಸಭೆಯ ಬಗ್ಗೆ ಮಾಹಿತಿ ಇಲ್ಲ. ನಮ್ಮನ್ನು ಸಂಪರ್ಕಿಸಿದರೆ, ನೋಡೋಣ’ ಎಂದು ಕಾಂಗ್ರೆಸ್‌ನ ಮುಖಂಡರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.