
ಹೊಳೆನರಸೀಪುರ: ತಾಲ್ಲೂಕಿನ ಸರ್ಕಾರಿ ಶಾಲೆಗಳು ಶೈಕ್ಷಣಿಕವಾಗಿ ಉತ್ತಮವಾಗಿವೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೂಲ ಸೌಲಭ್ಯ ಕಲ್ಪಿಸಿಲ್ಲ. ಆದ್ದರಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳು ಸೇರುತ್ತಿಲ್ಲ. ಪೋಷಕರು ಖಾಸಗಿ ಶಾಲೆಗಳಿಗೆ ಹೆಚ್ಚು ಶುಲ್ಕ, ಡೊನೇಷನ್ ಕೊಟ್ಟು ಸೇರಿಸುತ್ತಿದ್ದಾರೆ ಎಂದು ಶಾಸಕ ಎಚ್.ಡಿ. ರೇವಣ್ಣ ಹೇಳಿದರು.
ಸೋಮವಾರ ಪ್ರಿಯದರ್ಶಿನಿ ವಿದ್ಯಾ ಸಂಸ್ಥೆ ಆವರಣದಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ 2025, 26ನೇ ಸಾಲಿನ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಯವರು ಉಚಿತವಾಗಿ ಕಲಿಸುತ್ತೇವೆ ಬನ್ನಿ ಎಂದರೂ ಬರುತ್ತಿಲ್ಲ ಏಕೆ ಎಂದು ಸರ್ಕಾರ ಗಂಭೀರವಾಗಿ ಚಿಂತಿಸಬೇಕಿದೆ ಎಂದರು.
ಎಚ್.ಡಿ. ಕುಮಾರಸ್ವಾಮಿ ಆಡಳಿತದಲ್ಲಿ ಶಾಲಾ ಕಾಲೇಜುಗಳಿಗೆ ಹೆಚ್ಚಿನ ಅನುದಾನ ನೀಡಿ, ಶಿಕ್ಷಕರನ್ನು ಹಾಗೂ ಉಪನ್ಯಾಸಕರನ್ನು ನೇಮಿಸಿದ್ದರು ಎಂದು ಹೇಳಿದರು.
ಪ್ರತಿಭಾ ಕಾರಂಜಿ, ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ ಒದಗಿಸಿಕೊಡುತ್ತಿದೆ. ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿರುವ ಎಲ್ಲಾ ಮಕ್ಕಳು ಉತ್ತಮ ಮನರಂಜನೆ ನೀಡಿ ಬಹುಮಾನ ಗಳಿಸಿ ಎಂದು ಹಾರೈಸಿದರು.
ಸಂಸದ ಶ್ರೇಯಸ್ ಎಂ. ಪಟೇಲ್ ಮಾತನಾಡಿ, ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿ, ಶೈಕ್ಷಣಿಕ ಪ್ರಗತಿಗೆ ಪೂರಕವಾಗುತ್ತವೆ. ಏಕಾಗ್ರತೆ ಮತ್ತು ಆರೋಗ್ಯ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.
ಪೋಷಕರು ನಿಮ್ಮನ್ನು ಪ್ರೀತಿಯಿಂದ ಬೆಳೆಸುತ್ತಾರೆ. ಶಿಕ್ಷಕರು ನಿಮ್ಮ ಪ್ರಗತಿ ಹಾಗೂ ಉನ್ನತಿಗೆ ಸಹಕಾರ ಆಗುತ್ತಾರೆ. ನೀವು ಪೋಷಕರು ಮತ್ತು ಶಿಕ್ಷಕರಿಗೆ ಗೌರವ ತರುವಂತೆ ಸಾಧನೆ ಮಾಡಿ ಎಂದು ಹಾರೈಸಿದರು.
ಹಂಗರಹಳ್ಳಿ, ಆನೆಕನ್ನಂಬಾಡಿ, ಇತರೆ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಪಟ್ಟಣದ ಸೀತವಿಲಾಸ ರಸ್ತೆಯ ಜ್ಞಾನ ಗಂಗೋತ್ರಿ ವಿದ್ಯಾಸಂಸ್ಥೆ ಮತ್ತು ಇತರೆ ಶಾಲೆಗಳ ವಿದ್ಯಾರ್ಥಿಗಳ ವೇಷಭೂಷಣ ಆಕರ್ಷಕವಾಗಿತ್ತು.
ಬಿಇಒ ಸೋಮಲಿಂಗೇಗೌಡ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕಾಳೇಗೌಡ, ಪ್ರಿಯದರ್ಶಿನಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಹೊನ್ನಕುಮಾರ್, ಮೇಲ್ವಿಚಾರಕ ಗೋಪಿ, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮಹಾಲಿಂಗಪ್ಪ, ಇಸಿಒಗಳಾದ ಕೇಶವ್, ಕಾಂತರಾಜಪ್ಪ, ಆನಂದ್, ಬಿಆರ್‍ಸಿ ಶೈಲಜಾಧರಣಿ, ದೈಹಿಕ ಶಿಕ್ಷಣ ಪರಿವೀಕ್ಷಕ ಸುಜಾತಅಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.