
ಚನ್ನರಾಯಪಟ್ಟಣ: ಧಾರಾಕಾರ ಮಳೆಯಿಂದಾಗಿ ದಂಡಿಗನಹಳ್ಳಿ ಹೋಬಳಿಯ ಮನೆಗಳಿಗೆ ಮತ್ತು ಬೆಳೆಗಳಿಗೆ ಹಾನಿಯಾಗಿದ್ದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜನರ ಕಷ್ಟ ಆಲಿಸುತ್ತಿಲ್ಲ ಎಂದು ಶಾಸಕ ಎಚ್.ಡಿ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕು ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ರೈತರ ತೋಟ, ಹೊಲ, ಗದ್ದೆಗಳಲ್ಲಿ ಮಳೆನೀರು ನಿಂತು ಪರಿಪಾಟಲು ಪಡುತ್ತಿದ್ದಾರೆ. ದಂಡಿಗನಹಳ್ಳಿ ಹೋಬಳಿಯ ಆನೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 14 ಮನೆಗಳಿಗೆ ಹಾನಿಯಾಗಿದೆಯಾದರು ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ರೈತರು ದೂರುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಕೇಂದ್ರದಲ್ಲಿ ಸ್ಥಾನದಲ್ಲಿ ಕುಳಿತು ಕೆಲಸ ಮಾಡದೇ ತಾಲ್ಲೂಕಿನಲ್ಲಿ ಪ್ರವಾಸ ಮಾಡಿ ರೈತರ ಕಷ್ಟ ಆಲಿಸಬೇಕು. ಅಧೀನ ಅಧಿಕಾರಿಗಳ ಮೂಲಕ ಕೆಲಸ ಮಾಡಿಸಬೇಕು. ಬೇಜಾಬ್ದಾರಿಯಿಂದ ವರ್ತಿಸಬಾರದು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಾಕಿ ಇರುವ ಕಡತಗಳನ್ನು ಶೀಘ್ರು ವಿಲೇವಾರಿ ಮಾಡಬೇಕು’ ಎಂದು ಹೇಳಿದರು.
ಹಳ್ಳಿಗಳಿಗೆ ತೆರಳಿ ರೈತರ ಕಷ್ಟಕ್ಕೆ ಸ್ಪಂಧಿಸುವಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಜಿಲ್ಲಾಧಿಕಾರಿಗೆ ತಿಳಿಹೇಳಬೇಕು. ಎಷ್ಟು ಬೆಳೆಗಳಿಗೆ ನಷ್ಟ ಸಂಭವಿಸಿದೆ ಎಂದು ಅಂದಾಜು ಮಾಡಿ ಪರಿಹಾರ ನೀಡುವಂತಾಗಬೇಕು. ಮುಸುಕಿನ ಜೋಳ ಖರೀದಿಸುತ್ತಿಲ್ಲ. ಹೆಚ್ಚು ಬೆಲೆ ನೀಡಿ ಖರೀದಿ ಮಾಡುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದರು.
‘ಕಂದಾಯ ಸಚಿವರು ಹಾಸನಾಂಬ ಜಾತ್ರೆಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿರುವುದಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದ ಅವರು, ಉದಯಪುರ, ಶಾಂತಿಗ್ರಾಮ ಮತ್ತು ಮೊಸಳೆಹೊಸಹಳ್ಳಿಯಲ್ಲಿ ಸರ್ಕಾರಿ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಿಸಲು ₹5.75 ಕೋಟಿ ಮಂಜೂರಾಗಿದೆ’ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ತಹಶೀಲ್ದಾರ್ ಜಿ.ಎಸ್. ಶಂಕರಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಿ.ಆರ್. ಹರೀಶ್ ಸೇರಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
‘ದರ್ಶನೋತ್ಸವ; ಖರ್ಚು ವಿವರ ತಿಳಿಸಿ’
ಹಾಸನಾಂಬೆ ಜಾತ್ರೆಯಲ್ಲಿ ₹26 ಕೋಟಿ ಆದಾಯ ಬಂದಿದೆ. ಆದರೆ ಎಷ್ಟು ಖರ್ಚಾಯಿತು. ಯಾವ್ಯಾವ ಗಣ್ಯರು ಆಗಮಿಸಿದ್ದರು ಎಂದು ಮಾಹಿತಿ ತಿಳಿಸಬೇಕು. ಗಣ್ಯರನ್ನು ದೇವಸ್ಥಾನಕ್ಕೆ ಕರೆ ತರಲು ಪಾಂಡಿಚೇರಿ ರಾಜ್ಯದ ವಾಹನಗಳನ್ನು ಬಳಸಿಕೊಂಡಿರುವುದು ಎಷ್ಟರಮಟ್ಟಿಗೆ ಸರಿ? ಸ್ಥಳೀಯವಾಗಿ ವಾಹನಗಳು ಲಭ್ಯ ಇರಲಿಲ್ಲವೇ ಎಂದು ಪ್ರಶ್ನಿಸಿದರು. ಹಾಗಾಗಿ ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಿದ್ದ ವಾಹನದಲ್ಲಿ ತೆರಳದೆ ನನ್ನ ಕಾರಿನಲ್ಲಿ ತೆರಳಿ ದೇವಿಯ ದರ್ಶನ ಪಡೆದೆ’ ಎಂದು ಶಾಸಕ ಎಚ್.ಡಿ. ರೇವಣ್ಣ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.