ADVERTISEMENT

ಹಾಸನ ಜಿಲ್ಲೆಯಲ್ಲಿ ಅತಿವೃಷ್ಟಿ: 345 ಮನೆಗಳಿಗೆ ಹಾನಿ

ಸರ್ಕಾರದ ಮಾರ್ಗಸೂಚಿ ಪ್ರಕಾರ ಪರಿಹಾರ: ಡಿಸಿ ಆರ್‌. ಗಿರೀಶ್‌

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 12:53 IST
Last Updated 19 ಆಗಸ್ಟ್ 2020, 12:53 IST
ಆರ್‌. ಗಿರೀಶ್‌
ಆರ್‌. ಗಿರೀಶ್‌   

ಹಾಸನ: ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ ಸೇರಿ 18,813 ಹೆಕ್ಟೇರ್ ಪ್ರದೇಶದಲ್ಲಿ‌ ಬೆಳೆ ಹಾನಿಯಾಗಿದ್ದು, ಶೇಕಡಾ 33ಕ್ಕಿಂತ ಹೆಚ್ಚು ಬೆಳೆ ನಷ್ಟ ಹೊಂದಿರುವ ರೈತರಿಗೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್ ತಿಳಿಸಿದರು.

ಆ.2ರಿಂದ 8ರವರೆಗೆ ಸುರಿದ ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆ ಮೆಕ್ಕೆಜೋಳ ಮತ್ತು ಭತ್ತ ಹೆಚ್ಚು ಹಾನಿಯಾಗಿದೆ. ಸಕಲೇಶಪುರ, ಬೇಲೂರು ವ್ಯಾಪ್ತಿಯಲ್ಲಿ 13,413 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆ ಹಾನಿಯಾಗಿದೆ. ಕಾಫಿ ಗಿಡದಿಂದ ಕಾಯಿಗಳು ಉದುರುವ ಪ್ರಕ್ರಿಯೆ ಪ್ರಾರಂಭವಾಗಲು ಸಮಯ ಬೇಕು. ಈ ಬಗ್ಗೆ ಮಾಹಿತಿ ತರಿಸಿಕೊಳ್ಳಲಾಗುವುದು. ಮುಂದಿನ ಹದಿನೈದು ದಿನಗಳಲ್ಲಿ ನಷ್ಟದ ಸಂಪೂರ್ಣ ವರದಿ ಸಿಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಿರಂತರ ಮಳೆಯಿಂದ ಜಿಲ್ಲೆಯ 118 ಗ್ರಾಮಗಳಲ್ಲಿ 302 ಮನೆ ಭಾಗಶಃ ಹಾಗೂ 43 ಮನೆ ಸಂಪೂರ್ಣ ಹಾನಿಯಾಗಿದ್ದು, ಈಗಾಗಲೇ 43 ಜನರಿಗೆ ತಕ್ಷಣದ ಪರಿಹಾರವಾಗಿ ತಲಾ ₹ 10 ಸಾವಿರ ನೀಡಲಾಗಿದೆ. ನದಿ ದಾಟುವಾಗಿ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಸಕಲೇಶಪುರ ತಾಲ್ಲೂಕಿನ ವ್ಯಕ್ತಿಯ ಕುಟುಂಬಕ್ಕೆ ₹4 ಲಕ್ಷ ಪರಿಹಾರ ನೀಡಲಾಗಿದೆ ಎಂದು ಹೇಳಿದರು.

ADVERTISEMENT

ಕಳೆದ ವರ್ಷದಂತೆ ಈ ಬಾರಿ ಜೋರು ಮಳೆ ಆಗಿಲ್ಲ. ಆದರೆ ವಿಪರೀತ ಗಾಳಿಯಿಂದ ಕಾಫಿ ತೋಟಗಳಲ್ಲಿ ಮರಗಳು ಉರುಳಿವೆ. ಜಿಲ್ಲಾದಾದ್ಯಂತ ಸಾವಿರ ವಿದ್ಯುತ್ ಕಂಬಗಳು ನೆಲಕ್ಕುರುಳಿ 330 ಗ್ರಾಮಗಳು ಬೆಳಕಿನ ಸೌಲಭ್ಯದಿಂದ ದೂರ ಉಳಿಯುವಂತಾಯಿತು. ಎಲ್ಲಾ ವಿದ್ಯುತ್‌ ಕಂಬಗಳನ್ನು ಸರಿಪಡಿಸಿ ಸಂಪರ್ಕ ನೀಡಲಾಗಿದೆ ಎಂದರು.

ಜಿಲ್ಲೆಯ 99 ಸರ್ಕಾರಿ ಶಾಲೆ ಹಾಗೂ 31 ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದೆ. 150 ಕಿ.ಮೀ. ಮುಖ್ಯ ರಸ್ತೆ, 426 ಕಿ.ಮೀ. ಗ್ರಾಮೀಣ ಪ್ರದೇಶದ ರಸ್ತೆ ಹಾಳಾಗಿದೆ ಎಂದು ಮಾಹಿತಿ ನೀಡಿದರು.

ಹೇಮಾವತಿ ಜಲಾಶಯ ತುಂಬಿದ್ದು, ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ನಾಲೆಗಳ ಮೂಲಕ ಬೆಳೆಗಳಿಗೆ ನೀರು ಹರಿಸಲಾಗುತ್ತಿದೆ. ಜಿಲ್ಲೆಯಲ್ಲಿ ವಾಡಿಕೆಗಿಂತ ನಾಲ್ಕು ಪಟ್ಟು ಹೆಚ್ಚು ಮಳೆಯಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.