ADVERTISEMENT

ಧಾರಾಕಾರ ಮಳೆ: ಕಾರಿನ ಮೇಲೆ ಬಿದ್ದ ಮರ

ಕೆರೆಯಂತಾದ ಬಿ.ಎಂ.ರಸ್ತೆ, ಕಾರು, ಬೈಕ್ ಜಖಂ; ಅಪಾರ ನಷ್ಟ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 15:29 IST
Last Updated 16 ಏಪ್ರಿಲ್ 2022, 15:29 IST
ಹಾಸನ ನಗರದ ಕೆಎಚ್‌ಬಿ ಚನ್ನಪಟ್ಟಣ ಬಡಾವಣೆಯಲ್ಲಿ ಮಳೆ ನೀರು ನಿಂತಿತ್ತು
ಹಾಸನ ನಗರದ ಕೆಎಚ್‌ಬಿ ಚನ್ನಪಟ್ಟಣ ಬಡಾವಣೆಯಲ್ಲಿ ಮಳೆ ನೀರು ನಿಂತಿತ್ತು   

‌ಹಾಸನ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ಸಂಜೆ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ.

ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಇತ್ತು.ಸಂಜೆ 4.30ಕ್ಕೆ ಆರಂಭವಾದ ಗಾಳಿ ಸಹಿತ ಮಳೆ ಸುಮಾರು ಒಂದು ತಾಸು ಸುರಿಯಿತು. ಹತ್ತಾರು ಮರಗಳು ಧರೆಗುರುಳಿದ್ದು, ಕೆಲವೆಡೆ ದ್ವಿಚಕ್ರ ವಾಹನ, ಕಾರುಗಳ ಮೇಲೆ ತೆಂಗು ಸೇರಿದಂತೆ ಅನೇಕ ಮರಗಳು ಬಿದ್ದಿವೆ.

ರಭಸದ ಮಳೆಗೆ ಬಿಎಸ್‌ಎನ್‌ಎಲ್‌ ಮುಂಭಾಗ ನೀರು ನಿಂತು ಕೆರೆಯಂತಾಗಿತ್ತು. ವಾಹನ ಸವಾರರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಲು ಅಕ್ಷರಶಃ ಪರದಾಡಿದರು. ಕೆ.ಆರ್.ಪುರಂ ಮೂಲಕ ಹಾದು ಹೋಗಿರುವ ರಾಜಕಾಲುವೆ ಭರ್ತಿಯಾಗಿ ಹರಿಯಿತು.

ADVERTISEMENT

ಬೀದಿಬದಿ ವರ್ತಕರ ವ್ಯಾಪಾರಕ್ಕೆ ತೊಂದರೆ ಆಯಿತು.ದಿಢೀರ್‌ ಮಳೆ ಬಂದ ಕಾರಣ ಸಾರ್ವಜನಿಕರು ಮಳೆಯಲ್ಲಿಯೇ ತೊಯ್ದುರು.ಕೆಲವರು ಕಟ್ಟಡ ಮತ್ತು ಮರಗಳ ಕೆಳಗೆ ನಿಂತು ಆಶ್ರಯ ಪಡೆದರು.

ನಗರ, ಪಟ್ಟಣ ಪ್ರದೇಶಗಳಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಚರಂಡಿಗಳು ಕಟ್ಟಿಕೊಂಡಿದ್ದರಿಂದ ರಸ್ತೆಗಳಲ್ಲೇ ನೀರು ಹರಿದು ಜನರ ಓಡಾಟಕ್ಕೂತೊಂದರೆಯಾಗಿದೆ. ಎಂ.ಜಿ.ರಸ್ತೆ, ರಕ್ಷಣಾಪುರಂನಲ್ಲಿ ವಿದ್ಯುತ್‌ ಕಡಿತವಾಗಿತ್ತು.

ಚನ್ನಪಟ್ಟಣ ಬಡಾವಣೆ, ಕುವೆಂಪು ನಗರದರಾಜಕಾಲುವೆಯಲ್ಲಿ ನೀರು ಹೊಳೆಯಂತೆ ಹರಿಯಿತು. ಕೆ.ಆರ್.ಪುರಂನಲ್ಲಿ ಮರಉರುಳಿ ಬಿದ್ದ ಪರಿಣಾಮ ವಾಹನಗಳ ಸಂಚಾರಕ್ಕೆ ಕೆಲ ಸಮಯಅಡ್ಡಿಯಾಯಿತು. ಕೆ.ಆರ್.ಪುರ ಐದನೇ ಕ್ರಾಸ್‌ನಲ್ಲಿ ಮರದ ಕೊಂಬೆ ಮುರಿದುನೇತಾಡುತ್ತಿದ್ದು, ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟವರು ತೆರವು ಮಾಡಬೇಕಿದೆ.

ನಗರದ ಆರ್.ಸಿ. ರಸ್ತೆಯ ಗಂಧದ ಕೋಠಿ ಮುಂಭಾಗ ನಿಲ್ಲಿಸಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಕಾರಿನ ಮೇಲ್ಭಾಗ ಹಾಗೂ ಗಾಜು ಪುಡಿಯಾಗಿದೆ.ಕಾಮಗಾರಿಗೆ ಗುಂಡಿ ತೆಗೆದಿರುವ ಕಾರಣ ಮಣ್ಣು ಸಡಿಲಗೊಂಡು ಮರ ಬಿದ್ದಿದೆ. ₹60 ಸಾವಿರ ನಷ್ಟವಾಗಿದೆ ಎಂದು ಕಾರಿನ ಮಾಲೀಕ ಪವನ್ ತಿಳಿಸಿದರು.

ಕುವೆಂಪು ನಗರ ಬಡಾವಣೆಯಲ್ಲಿ ರಸ್ತೆಬದಿ ನಿಂತಿದ್ದ ಕಾರಿನ ಮೇಲೆ ತೆಂಗಿನ ಮರ ಉರುಳಿದ ಪರಿಣಾಮ ಕಾರಿನ ಮುಂಭಾಗಜಖಂ ಆಗಿದೆ. ಬಿ.ಎಂ.ರಸ್ತೆಯ ಬಿಎಸ್‌ಎನ್‌ಎಲ್ ಬಳಿ ವಿದ್ಯುತ್‌ ಪರಿವರ್ತಕದ ಮೇಲೆ ಮರಬಿದ್ದಿದೆ. ನಗರಸಭೆ ಅಧ್ಯಕ್ಷ ಆರ್.ಮೋಹನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲಾ ಕೇಂದ್ರ ಹಾಸನ ಸೇರಿದಂತೆ ತಾಲ್ಲೂಕಿನಾದ್ಯಂತ, ಹೊಳೆನರಸೀಪುರ,ಚನ್ನರಾಯಪಟ್ಟಣ, ಅರಕಲಗೂಡು, ಕೊಣನೂರು, ಶ್ರವಣಬೆಳಗೊಳದಲ್ಲಿ ಗುಡುಗು ಸಹಿತ ರಭಸದ ಮಳೆಸುರಿದಿದೆ. ಸುಮಾರು ಅರ್ಧ ತಾಸಿಗೂ ಹೆಚ್ಚು ಮಳೆ ಸುರಿದ ಪರಿಣಾಮ ಇಳೆ ತಂಪಾಯಿತು.

ಅರಕಲಗೂಡು ಸುತ್ತಮುತ್ತ ಸಾಧಾರಣ ಮಳೆಯಾದರೆ, ಹೊಳೆನರಸೀಪುರಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆ ಸುರಿದಿದೆ. ರಾತ್ರಿ ಏಳು ಗಂಟೆ ನಂತರ ಮತ್ತೆ ತುಂತುರು ಮಳೆ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.