ಆಲೂರು: ತಾಲ್ಲೂಕಿನಲ್ಲಿ ಎಡಬಿಡದೇ 15 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ, ಮರಸು ಹೊಸಳ್ಳಿ ಬಳಿ ಹಾದು ಹೋಗಿರುವ ವಾಟೆಹೊಳೆ ನಾಲೆ ಒಡೆದಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿರುವ ಮುಸುಕಿನ ಜೋಳ, ಶುಂಠಿ ಮತ್ತು ಭತ್ತದ ಸಸಿ ಮಡಿಲು ನಾಶವಾಗುವ ಸ್ಥಿತಿ ನಿರ್ಮಾಣವಾಗಿದೆ. ಮರಸು ದೊಡ್ಡಕೆರೆ ಹೊರತುಪಡಿಸಿ, ಬಹುತೇಕ ಎಲ್ಲ ಕೆರೆ ಕಟ್ಟೆಗಳು ಭರ್ತಿಯಾಗಿವೆ.
ಬೆಳಿಗ್ಗೆ ನಾಲೆಯಲ್ಲಿ ಇಲಿಗಳು ಮಾಡಿದ ಬಿಲದಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ಹೊರ ಹೋಗುತ್ತಿತ್ತು. ಮಧ್ಯಾಹ್ನದ ವೇಳೆಗೆ ನಾಲೆ ಏರಿ ಒಡೆದು ನೀರು ಹರಿದ ಪರಿಣಾಮ, ತಗ್ಗು ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಮಡಿಲು, ಮುಸುಕಿನ ಜೋಳ ಮತ್ತು ಶುಂಠಿ ಬೆಳೆಗೆ ನೀರು ಆವರಿಸಿತು. ಗದ್ದೆಗಳಲ್ಲಿ ನೀರು ನಿಂತಿರುವುದರಿಂದ ಮುಸುಕಿನ ಜೋಳ ಮತ್ತು ಶುಂಠಿ ಬೆಳೆಗಳ ಬೇರು ಕಾಣಿಸುತ್ತಿವೆ.
ನಾಲೆ ಒಳಭಾಗದಲ್ಲಿ ಸುಮಾರು ಐದು ಅಡಿ ಎತ್ತರಕ್ಕೆ ಸಿಮೆಂಟ್ ಕಾಂಕ್ರೀಟ್ ಹಾಕಿರುವುದು ಒಡೆದರೆ, ನಾಲೆಯಲ್ಲಿ ಹರಿದು ಬರುತ್ತಿರುವ ಸಂಪೂರ್ಣ ನೀರು ಗದ್ದೆಗಳ ಮೇಲೆ ಹರಿಯಲಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗುವ ಆತಂಕವನ್ನು ರೈತರು ವ್ಯಕ್ತಪಡಿಸಿದ್ದಾರೆ.
‘ಮಳೆ ಕಡಿಮೆಯಾದ ನಂತರ ನಾಲೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಜನಸಾಮಾನ್ಯರು ಏರಿ ಮೇಲೆ ಓಡಾಡದೇ ಬದಲಿ ಜಾಗದಲ್ಲಿ ಓಡಾಡಬೇಕು’ ಎಂದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಧರ್ಮರಾಜ್ ಮನವಿ ಮಾಡಿದ್ದಾರೆ.
‘ಕೆ.ಹೊಸಕೋಟೆ ಹೋಬಳಿ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಗಪ್ಪನ ಕೆರೆ ಕೋಡಿಯಲ್ಲಿ ಮಣ್ಣು ತುಂಬಿದ್ದ ಕಾರಣ, ನೀರು ರಸ್ತೆ ಮೇಲೆ ಹರಿದು ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಕೂಡಲೇ ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಕೋಡಿಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡುವ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು’ ಎಂದು ಪಿಡಿಒ ಪರಮೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.