ADVERTISEMENT

ಸಕಲೇಶಪುರ: ಬೆಂಗಳೂರು–ಮಂಗಳೂರು ಭಾರಿ ವಾಹನಗಳ ಸಂಚಾರ ಬಂದ್‌ ಸಾಧ್ಯತೆ

ದೋಣಿಗಾಲ್‌: ಕುಸಿಯುತ್ತಲೇ ಇರುವ ರಾಷ್ಟ್ರೀಯ ಹೆದ್ದಾರಿ ಬದಿಯ ಮಣ್ಣು

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 3:13 IST
Last Updated 11 ಜುಲೈ 2022, 3:13 IST
ಸಕಲೇಶಪುರ ತಾಲ್ಲೂಕಿನ ದೋಣಿಗಾಲ್‌ನಲ್ಲಿ ಭೂ ಕುಸಿತ ತಡೆಯಲು ಪ್ಲಾಸ್ಟಿಕ್‌ ಹೊದಿಕೆ, ಮರಳಿನ ಮೂಟೆಗಳನ್ನು ಇಡುತ್ತಿರುವ ಸಿಬ್ಬಂದಿ
ಸಕಲೇಶಪುರ ತಾಲ್ಲೂಕಿನ ದೋಣಿಗಾಲ್‌ನಲ್ಲಿ ಭೂ ಕುಸಿತ ತಡೆಯಲು ಪ್ಲಾಸ್ಟಿಕ್‌ ಹೊದಿಕೆ, ಮರಳಿನ ಮೂಟೆಗಳನ್ನು ಇಡುತ್ತಿರುವ ಸಿಬ್ಬಂದಿ   

ಸಕಲೇಶಪುರ: ತಾಲ್ಲೂಕಿನ ದೋಣಿಗಾಲ್‌ನಲ್ಲಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಭೂಕುಸಿತ ಮುಂದುವರಿದಿದ್ದು, ಭಾರಿವಾಹನಗಳ ಸಂಚಾರಕ್ಕೆ ಬಂದ್ ಆಗುವ ಸಾಧ್ಯತೆ ಇದೆ. ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಹಾಗೂ ಚತುಷ್ಪಥ ಕಾಮಗಾರಿ ಗುತ್ತಿಗೆ ಪಡೆದಿರುವವರ ನಿರ್ಲಕ್ಷ್ಯ ಕಾರಣ ಎಂದು ಜನರು ದೂರಿದ್ದಾರೆ.

ಹಾಸನ–ಮಾರನಹಳ್ಳಿ 47 ಕಿ.ಮೀ. ಚತುಷ್ಪಥ ಕಾಮಗಾರಿಗಾಗಿ ದೋಣಿಗಾಲ್‌ನಲ್ಲಿ 120 ಅಡಿ ಆಳದಲ್ಲಿ 800 ಮೀಟರ್ ಉದ್ದ ಭೂಮಿಯನ್ನು 2019ರಲ್ಲಿಯೇ ಬಗೆಯಲಾಯಿತು. ಆದರೆ, ತಡೆಗೋಡೆ ನಿರ್ಮಾಣ ಮಾಡಲಿಲ್ಲ. ಪರಿಣಾಮ 2020ರಿಂದ ಪ್ರತಿ ಮಳೆಗಾಲದಲ್ಲಿ ಭೂ ಕುಸಿತ ಉಂಟಾಗುತ್ತಲೇ ಇದೆ. ಮಳೆ ನೀರಿನೊಂದಿಗೆ ಮಣ್ಣು ಕೊಚ್ಚಿ ಹೋಗುತ್ತಿದೆ. ರಸ್ತೆಯ ಸಮತಟ್ಟು ಪ್ರದೇಶದ 6 ಅಡಿ ಅಗಲ, 15 ಅಡಿ ಉದ್ದ ಹಾಗೂ 120 ಅಡಿ ಆಳಕ್ಕೆ ಮಣ್ಣು ಕುಸಿದು ಬಿದ್ದಿದೆ.

ಮಲೆನಾಡಿನಲ್ಲಿ ಎರಡು ವಾರಗಳಿಂದ ಬೀಳುತ್ತಿರುವ ಮಳೆ ಸಾಧಾರಣವಾಗಿದೆ. ವಾಡಿಕೆಯಂತೆ ಜುಲೈ ಕೊನೆಯ ವಾರ ಹಾಗೂ ಆಗಸ್ಟ್‌ ತಿಂಗಳಲ್ಲಿ ಭಾರಿ ಮಳೆಯಾಗುತ್ತದೆ. ಒಮ್ಮೊಮ್ಮೆ 24 ಗಂಟೆಗಳಲ್ಲಿ ಸರಾಸರಿ 20 ಸೆಂ.ಮೀ. ಮಳೆಯಾಗುತ್ತದೆ. ಅಂತಹ ಮಳೆ ಸುರಿದರೆ, ಬೆಂಗಳೂರು–ಮಂಗಳೂರು ಹೆದ್ದಾರಿ ಮಾತ್ರವಲ್ಲ, ಅದರ ಮೇಲ್ಭಾಗದಲ್ಲಿರುವ ಸಕಲೇಶಪುರ– ಕ್ಯಾನಹಳ್ಳಿ ರಸ್ತೆ ಸಹ ಕುಸಿಯುವ ಸಾಧ್ಯತೆ ಇದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

2020ರ ಆಗಸ್ಟ್‌ನಲ್ಲಿ ಭೂ ಕುಸಿತ ಉಂಟಾದಾಗ ಸುರಿಯುತ್ತಿದ್ದ ಮಳೆಯಿಂದಾಗಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಸಾಧ್ಯವಾಗಿರಲಿಲ್ಲ. ಈ ಮಾರ್ಗದಲ್ಲಿ 4 ತಿಂಗಳು ವಾಹನಗಳ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. 2021 ಜುಲೈವರೆಗೂ ಶಾಶ್ವತ ತಡೆಗೋಡೆ ಮಾಡಲಿಲ್ಲ. ಜುಲೈ ಕೊನೆಯ
ವಾರದಲ್ಲಿ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದ್ದರಿಂದರಾಜಧಾನಿ ಹಾಗೂ ಕರಾವಳಿ
ನಡುವೆ ಮತ್ತೆ ವಾಹನಗಳ ಸಂಚಾರ ಬಂದ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.