ADVERTISEMENT

ಬದುಕು ಹಸನಾಗಲು ಶಿಕ್ಷಣ ಸಹಕಾರಿ: ಡಾ.ಬಿ.ಎನ್. ರತ್ನಾ ಅಭಿಮತ

ರಾಜೀವ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 2:07 IST
Last Updated 10 ಮಾರ್ಚ್ 2021, 2:07 IST
‘ಅಭಿನವ 2021’ ಕಾರ್ಯಕ್ರಮವನ್ನು ರಾಜೀವ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಎನ್. ರತ್ನಾ ಉದ್ಘಾಟಿಸಿದರು
‘ಅಭಿನವ 2021’ ಕಾರ್ಯಕ್ರಮವನ್ನು ರಾಜೀವ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಎನ್. ರತ್ನಾ ಉದ್ಘಾಟಿಸಿದರು   

ಹಾಸನ: ‘ಇಂದಿನ ಯುವ ಪೀಳಿಗೆಯ ಬದುಕು ಹಸನಾಗಲು ಶಿಕ್ಷಣ ಸಹಕಾರಿ, ಉತ್ತಮ ವಿದ್ಯಾಭ್ಯಾಸದ ಶಿಕ್ಷಣದ ಮೂಲಕ ಜೀವಮಾನದ ಕನಸುಗಳನ್ನು ವಿದ್ಯಾರ್ಥಿಗಳು ಸಾಕಾರ ಮಾಡಿಕೊಳ್ಳಬಹುದು’ ಎಂದು ರಾಜೀವ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಎನ್. ರತ್ನಾ ತಿಳಿಸಿದರು.

ರಾಜೀವ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ನೂತನ ವಿದ್ಯಾರ್ಥಿಗಳ ಆಯುರ್ವೇದ ಪ್ರಶಿಕ್ಷಣ ಹಾಗೂ ಸ್ವಾಗತ ಸಮಾರಂಭ ‘ಅಭಿನವ 2021’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಗುರುಗಳ ಆದರ್ಶ ತತ್ವಗಳನ್ನು ಮೈಗೂಡಿಸಿಕೊಳ್ಳುವತ್ತ ಹೆಚ್ಚಿನ ಒಲವು ತೋರಿಸುವ ಅವಶ್ಯಕತೆಯಿದೆ. ಶಿಕ್ಷಣದ ಜೊತೆಗೆ ಉತ್ತಮ ಆದರ್ಶಗಳನ್ನು ಬೆಳೆಸಿಕೊಂಡು ಮುನ್ನಡೆದಾಗ ಸಾಧನೆಯ ಹಾದಿ ಸುಗಮ ಎಂದು ಹೇಳಿದರು.

ADVERTISEMENT

ಹಾರ್ವಡ್ ಸ್ಕೂಲ್ ಪ್ರಾಂಶುಪಾಲ ಎಲ್.ಪಿ. ರವಿಕುಮಾರ್ ಮಾತನಾಡಿ, ‘ಇತ್ತೀಚೆಗೆ ಮಹಿಳಾ ವಿದ್ಯಾರ್ಥಿಗಳೇ ವೃತ್ತಿಪರತೆಯ ಕೋರ್ಸ್‍ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ. ಮಹಿಳೆಯರು ಪುರುಷ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿ ಕೊಳ್ಳತ್ತಿರುವುದು ಆಶಾದಾಯಕ ಬೆಳವಣಿಗೆ’ ಎಂದರು.

‘ಗುರು ಶಿಷ್ಯ ಪರಂಪರೆಯ ಸಂಸ್ಕಾರ ಕೊನೆಗೊಳ್ಳಬಾರದು. ಪೋಷಕರು ಮಕ್ಕಳ ಮುಂದೆ ಗುರುಗಳನ್ನು ಹಾಗೂ ಹಿರಿಯರನ್ನು ಹೀನಾಯವಾಗಿ ಕಾಣುವುದು, ಮಾತನಾಡುವುದು ಮಾಡಬಾರದು. ಪೋಷಕರ ಒಳ್ಳೆಯ ಗೌರವಯುತವಾದ ನುಡಿಗಳಿಂದ ಮಕ್ಕಳಲ್ಲಿ ಗುರುಗಳ ಮೇಲೆ ಇನ್ನೂ ಹೆಚ್ಚಿನ ಗೌರವ ಮೂಡುತ್ತದೆ’ ಎಂದು ವಿವರಿಸಿದರು.

ರಾಜೀವ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ.ರಂಜಿತ್ ರಾಜೀವ್ ಮಾತನಾಡಿ, ‘ಉತ್ತಮ ಸಾಧನೆ ಮಾಡಲು ಕಠಿಣ ಪ್ರರಿಶ್ರಮವೊಂದೇ ದಾರಿ. ಮೊದಲು ಸಾಧನೆಯ ಕನಸುಗಳನ್ನು ಕಾಣಿ. ನಂತರ ಅದನ್ನು ನನಸಾಗಿಸಲು ಬೇಕಾದ ಮಾರ್ಗವನ್ನು ನಿಮ್ಮದಾಗಿಸಿಕೊಳ್ಳಿ. ಭವಿಷ್ಯದ ಧ್ಯೇಯ ಗಳನ್ನು ಗಟ್ಟಿಯಾಗಿಸಿಕೊಂಡು ಗುರಿಯತ್ತ ಮುನ್ನುಗ್ಗಿ’ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎ. ನಿತಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎನ್.ಪಾಂಡುರಂಗ ಸ್ವಾಗತಿಸಿದರು. ಡಾ. ಅಜಯ್ ಕುಮಾರ್ ವಂದಿಸಿದರು. ಡಾ. ಸೂರಜ್ ಕುಂಬಾರ್ ಹಾಗೂ ಡಾ. ಅಶ್ವಿನಿ ನಿರೂಪಿಸಿದರು. ನೂತನ ವಿದ್ಯಾರ್ಥಿಗಳು ಔಷಧೀಯ ಸಸಿಗಳನ್ನು ಸಂಸ್ಥೆಯ ಆವರಣದಲ್ಲಿ ನೆಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.