
ಸಕಲೇಶಪುರ: ಸಕಲೇಶಪುರದಲ್ಲಿ ಹೇಮಾವತಿಗೆ ಸತತ ಎರಡನೇ ವರ್ಷ ಗಂಗಾರತಿ ಮಾಡುತ್ತಿರುವುದು ಮಲೆನಾಡಿನ ಈ ಭಾಗದ ಸಮಗ್ರ ಅಭಿವೃದ್ಧಿಯ ಮುನ್ಸೂಚನೆ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಮುಖ್ಯಸ್ಥ ಶಂಭುನಾಥಸ್ವಾಮಿ ಹೇಳಿದರು.
ಸಕಲೇಶ್ವರಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ ಭಾನುವಾರ ರಾತ್ರಿ ಹೇಮಾವತಿ ನದಿಯಲ್ಲಿ ಹಮ್ಮಿಕೊಂಡಿದ್ದ ಗಂಗಾರತಿ ನಂತರ ಮಾತನಾಡಿದರು.
ಮಾಘ ಮಾಸದಲ್ಲಿ ಮಾಗಸ್ನಾನ ಶ್ರೇಷ್ಠತೆ ಬಗ್ಗೆ ಋಷಿಗಳು ಅರ್ಥಪೂರ್ಣವಾಗಿ ತಿಳಿಸಿಕೊಟ್ಟಿದ್ದಾರೆ. ಇಂತಹ ಮಾಘ ಮಾಸ ಹುಣ್ಣಿಮೆಯ ದಿನ ಗಂಗಾರತಿ ಮಾಡುತ್ತಿರುವುದು ಜನರ ಮನಸ್ಸಿನ ಕೊಳೆಯನ್ನು ತೊಳೆದು ಗಂಗೆಯಂತೆ ಶುಭ್ರವಾಗುವಂತೆ ಮನ ಪರಿವರ್ತನೆ ಆಗಬೇಕು.ಹುಣ್ಣಿಮೆಯ ಬೆಳಕಿನಲ್ಲಿ ಗಂಗಾರತಿ ನೋಡಿ ಕಣ್ಣು ತುಂಬಿಸಿಕೊಳ್ಳುವುದಷ್ಟೇ ಅಲ್ಲ, ನಿಮ್ಮ ಮನಸ್ಸಿನ ಕತ್ತಲೆಯನ್ನು ಅಳಿಸಿ, ಬೆಳಕು ಹತ್ತಿಸಿಕೊಳ್ಳಿ’ ಎಂದು ಸಲಹೆ ನೀಡಿದರು.
ತೆಂಕಲಗೋಡು ಮಠದ ಚನ್ನಮಲ್ಲಿಕಾರ್ಜುನಸ್ವಾಮಿ, ‘ಗಂಗಾರತಿ ರೀತಿಯಲ್ಲಿಯೇ ಹೇಮಾವತಿ ನದಿಗೆ ಗಂಗಾರತಿಯನ್ನು ಶ್ರದ್ಧೆಯಿಂದ ಮಾಡಿದ್ದಾರೆ’ ಎಂದರು.
ಶಾಸಕ ಸಿಮೆಂಟ್ ಮಂಜು ಮಾತನಾಡಿ, ‘ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಬುನಾಥಸ್ವಾಮಿಗಳು ಹಾಗೂ ಸಕಲೇಶ್ವರಸ್ವಾಮಿ ದೇವಸ್ಥಾನ ಸಮಿತಿಯವರು ಅತ್ಯಂತ ಯಶಸ್ವಿಯಾಗಿ ಗಂಗಾರತಿ ನಡೆಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡರಾದ ಮುರುಳಿ ಮೋಹನ್, ಬೈರಮುಡಿ ಚಂದ್ರು, ತಹಶೀಲ್ದಾರ್ ಕೆ.ಎಸ್. ಸುಪ್ರೀತಾ, ಡಿವೈಎಸ್‌ಪಿ ಮಹಾಂತೇಶ್, ಸಕಲೇಶ್ವರಸ್ವಾಮಿ ದೇವಸ್ಥಾನ ಸಮಿತಿ ಮುಖ್ಯಸ್ಥರಾದ ಬ್ಯಾಕರವಳ್ಳಿ ಜಯಣ್ಣ, ನಂದೀಕೃಪ ರಾಜು, ರವಿಕುಮಾರ್, ಮಹೇಶ್, ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.