ಕಾಡಾನೆ ಹಿಂಡು
ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದ್ದು, ಕಾಡಾನೆಗಳ ಹಿಂಡು ಬೇಲೂರು ತಾಲ್ಲೂಕಿನ ಕೆಳಬಿಕ್ಕೋಡು ಗ್ರಾಮದಲ್ಲಿ ಬೀಡು ಬಿಟ್ಟಿದೆ.
ಹಲವು ದಿನಗಳಿಂದ ಜನನಿಬಿಡ ಪ್ರದೇಶದಲ್ಲಿ ಹಿಂಡಾಗಿ ಓಡಾಡುತ್ತಿವೆ. ಕಾಡಾನೆಗಳು ಗ್ರಾಮದೊಳಗೆ ಬರುತ್ತಿದ್ದಂತೆಯೇ ಗ್ರಾಮಸ್ಥರು ಭಯಗೊಂಡು ಓಡಿ ಹೋಗುವಂತಾಗಿದೆ.
ಗ್ರಾಮದೊಳಗೆ ಓಡಾಡಿದ ಆನೆಗಳು, ಗ್ರಾಮದ ಸಮೀಪವಿರುವ ಹೊಲ, ಗದ್ದೆ, ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿವೆ. ಮರಿಗಳು ಸೇರಿ ಸುಮಾರು 20ಕ್ಕೂ ಹೆಚ್ಚು ಕಾಡಾನೆಗಳಿದ್ದು, ಕಾಫಿ, ಜೋಳ, ಶುಂಠಿ, ಭತ್ತದ ಬೆಳೆಗಳನ್ನು ತುಳಿದು, ತಿಂದು ಸಂಪೂರ್ಣ ನಾಶಪಡಿಸಿವೆ. ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ ಸ್ಥಳದಲ್ಲೇ ಠಿಕಾಣಿ ಹೂಡಿದ್ದು, ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸಲು ಹರಸಾಹಸ ಮಾಡುತ್ತಿದ್ದಾರೆ. ಕಾಡಾನೆಗಳ ದಾಳಿಯಿಂದ ಭಯಭೀತರಾಗಿರುವ ಗ್ರಾಮಸ್ಥರು, ಮಾಲೀಕರು ಹಾಗೂ ಕಾರ್ಮಿಕರು ಕಾಫಿ ತೋಟಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.