ಹಿರೀಸಾವೆ: ಶುಕ್ರವಾರದಿಂದ ಶಾಲೆಗಳು ಆರಂಭವಾಗಲಿದ್ದು, ಚಿಣ್ಣರು ಶಾಲೆಗಳತ್ತ ಹೆಜ್ಜೆ ಹಾಕಲಿದ್ದಾರೆ. ಪೂರ್ವಭಾವಿಯಾಗಿ ಇಲಾಖೆಯಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಗುರುವಾರ ಎಡೆಬಿಡದ ಕೆಲಸಗಳ ನಡುವೆಯೇ ಶಿಕ್ಷಕರು, ಶಾಲಾ ಕೊಠಡಿಗಳ ಸ್ವಚ್ಛತೆ ಮಾಡಿಸುವಲ್ಲಿ ನಿರತರಾಗಿದ್ದರು.
ಶಾಲೆ ಪ್ರಾರಂಭದ ದಿನವೇ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲು ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಗುರುವಾರ ಸಮೂಹ ಸಂಪನ್ಮೂಲ ಕೇಂದ್ರಗಳ ಮೂಲಕ ಆಯಾಯ ಶಾಲೆಯ ಶಿಕ್ಷಕರಿಗೆ ಪುಸ್ತಕಗಳನ್ನು ಹಂಚಿಕೆ ಮಾಡಲಾಯಿತು.
ಹಿರೀಸಾವೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲಾ ಆವರಣದಲ್ಲಿ ಪಠ್ಯಪುಸ್ತಕಗಳ ಸಂಗ್ರಹಣೆ ಮಾಡಲಾಗಿದೆ. ಮತಿಘಟ್ಟ ಮತ್ತು ಹಿರೀಸಾವೆ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರು ತಮ್ಮ ಶಾಲೆಯಲ್ಲಿ ಇರುವ ವಿದ್ಯಾರ್ಥಿಗಳ ಸಂಖ್ಯೆ ಅನುಗುಣವಾಗಿ ಪಠ್ಯ ಪುಸ್ತಕಗಳನ್ನು ಪಡೆದು, ಶಾಲೆ ಕಡೆಗೆ ಹೆಜ್ಜೆ ಹಾಕಿದರು.
ಬಹುತೇಕ ಶಾಲೆಗಳಲ್ಲಿ ದಾಸೋಹ ಸಿಬ್ಬಂದಿಯ ಸಹಕಾರದೊಂದಿಗೆ ಅಡುಗೆ ಮನೆ ಸೇರಿದಂತೆ ಕೊಠಡಿಗಳ ಸ್ವಚ್ಛತೆ ಮಾಡಿದ್ದಾರೆ. ಮಳೆಯಿಂದ ಕೆಲವು ಶಾಲಾ ಆವರಣದಲ್ಲಿ ಬೆಳೆದಿರುವ ಗಿಡಗಳ ಸ್ವಚ್ಛತೆಗೆ ಕಾರ್ಮಿಕರನ್ನು ಅವಲಂಬಿಸಿದ್ದರು.
ಕನ್ನಡ ಮಾಧ್ಯಮದ ಒಂದರಿಂದ ಐದನೇ ತರಗತಿವರೆಗೆನ ಎಲ್ಲ ವಿಷಯಗಳ ಬಹುತೇಕ ಪಠ್ಯಪುಸ್ತಕ ಸರಬರಾಜು ಆಗಿದೆ. 6 ಮತ್ತು 7ನೇ ತರಗತಿಯ ಮತ್ತು ಇಂಗ್ಲಿಷ್ ಮಾಧ್ಯಮದ ಎಲ್ಲ ತರಗತಿಗಳ ಭಾಗ ಒಂದರ ಕೆಲವು ಪುಸ್ತಕಗಳು ಇನ್ನೂ ಬರಬೇಕಿದೆ. ಶುಕ್ರವಾರ ಶಾಲೆಗೆ ಬರುವ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಿಕ್ಷಕರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಜೂನ್ ತಿಂಗಳಲ್ಲಿ ಎಲ್ಲ ವಿಷಯಗಳ ಭಾಗ ಒಂದು ಮತ್ತು ಭಾಗ ಎರಡರ ಪಠ್ಯಪುಸ್ತಕಗಳನ್ನು ಇಲಾಖೆ ನೀಡಲಿದೆ.-ಮಂಜುನಾಥ್, ಹಿರೀಸಾವೆ ಕ್ಲಸ್ಟರ್ ಸಿಆರ್‌ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.