ಹಿರೀಸಾವೆ: ಇಲ್ಲಿನ ಗ್ರಾಮ ದೇವತೆ ಚೌಡೇಶ್ವರಿ ದೇವಿಯ ರಥೋತ್ಸವವು ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಗ್ರಾಮದ ಕೆರೆ ಏರಿ ಮೇಲೆ ಇರುವ ದೇವರ ಮೂಲಸ್ಥಾನದಲ್ಲಿ ಬೆಳಿಗ್ಗೆ ಉತ್ಸವ ಮೂರ್ತಿಗೆ ಚಿನ್ನಾಭರಣಗಳಿಂದ ಅಲಂಕಾರ ಮಾಡಲಾಯಿತು. ನಂತರ ವಿಶೇಷ ಪೂಜೆ ಸಲ್ಲಿಸಿ ಭಕ್ತರ ವೇದ ಘೋಷಣೆಗಳು ಮತ್ತು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಗ್ರಾಮಕ್ಕೆ ಕರೆತಂದು, ಊರು ಮಧ್ಯದಲ್ಲಿರುವ ಉಯ್ಯಾಲೆ ಕಂಬದಲ್ಲಿ ಕೂರಿಸಲಾಯಿತು.
ರಾಹುಕಾಲದಲ್ಲಿ ರಥಕ್ಕೆ ಬಲಿ ಅನ್ನವನ್ನು ಅರ್ಪಿಸಲಾಯಿತು. ಭಕ್ತರು ದೇವಿಯನ್ನು ರಥ ಮತ್ತು ಉಯ್ಯಾಲೆ ಕಂಬದ ಸುತ್ತ ಮೂರು ಸುತ್ತು ಉತ್ಸವ ನಡೆಸಿದರು. ಹೂವಿನಿಂದ ಶೃಂಗರಿಸಿದ್ದ ರಥದ ಮೇಲೆ ಅಮ್ಮನವರನ್ನು ಕೂರಿಸಲಾಯಿತು. ಭಕ್ತರು ದೇವಿಗೆ ಪೂಜೆ ಸಲ್ಲಿಸಿದ ನಂತರ ಮಧ್ಯಾಹ್ನ 1.45ಕ್ಕೆ ರಥವನ್ನು ಪೂರ್ವ ದಿಕ್ಕಿಗೆ ಭಕ್ತಿಭಾವದಿಂದ ಜನರು ರಥವನ್ನು ಎಳೆದು ಪುನೀತರಾದರು. ಬಾಳೆಹಣ್ಣು, ದವನವನ್ನು ರಥದ ಮೇಲೆ ಎಸೆದರು. ಹರಕೆ ಹೊತ್ತಿದ್ದ ಭಕ್ತರು ಹರಕೆ ಅರ್ಪಿಸಿದರು.
ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಸೇರಿದಂತೆ ವಿವಿಧ ಸಂಘಗಳಿಂದ ಪಾನಕ, ಫಲಾಹಾರವನ್ನು ಭಕ್ತರಿಗೆ ವಿತರಿಸಿದರು. ರಥೋತ್ಸವದ ನೇತೃತ್ವವನ್ನು ಗ್ರಾಮದ ಅರಳಿಮರದ ಮನೆತನದವರು ವಹಿಸಿದ್ದರು. ದೇವಸ್ಥಾನದ ಮುಖ್ಯಸ್ಥ ಅನಂತರಾಮಯ್ಯ ಮತ್ತು ಧರ್ಮದರ್ಶಿ ಫಣೀಶ್ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು.
ಬೆಳಗೀಹಳ್ಳಿ, ಸೋರೆಕಾಯಿಪುರ, ತೂಬಿನಕೆರೆ, ಹೊನ್ನೇನಹಳ್ಳಿರುವ ದೇವರ ಮನೆತನದವರು ವಿಶೇಷ ಪೂಜೆಗಳನ್ನು ಸಲ್ಲಿಸಿದರು. ಸಂಜೆ ಚೌಡೇಶ್ವರಿ ದೇವಿಯ ಸಹೋದರಿ ಹೆಬ್ಬಾರಮ್ಮ ದೇವಿಯ ದರ್ಶನವನ್ನು ಭಕ್ತರು ಪಡೆದರು.
ಶಾಸಕ ಬಾಲಕೃಷ್ಣ, ಮುಖಂಡರಾದ ವಿಜಯಕುಮಾರ್, ರಾಮಕೃಷ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.