ADVERTISEMENT

ಗ್ರಾಮಮಟ್ಟದಲ್ಲಿ ಶಾಂತಿ, ಸೌಹಾರ್ದ ಸಭೆ ನಡೆಸಿ

ಜಿಲ್ಲಾ ಮಟ್ಟದ ಜಾಗೃತಿ, ಉಸ್ತುವಾರಿ ಸಮಿತಿ ತ್ರೈಮಾಸಿಕ ಸಭೆಯಲ್ಲಿ ಎಸ್ಪಿ ಮೊಹಮ್ಮದ್ ಸುಜೀತಾ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 4:22 IST
Last Updated 28 ಅಕ್ಟೋಬರ್ 2025, 4:22 IST
ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಎಸ್ಪಿ ಮೊಹಮ್ಮದ್‌ ಸುಜೀತಾ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್‌, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ, ಅಧಿಕಾರಿಗಳು ಪಾಲ್ಗೊಂಡಿದ್ದರು 
ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಎಸ್ಪಿ ಮೊಹಮ್ಮದ್‌ ಸುಜೀತಾ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್‌, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ, ಅಧಿಕಾರಿಗಳು ಪಾಲ್ಗೊಂಡಿದ್ದರು    

ಹಾಸನ: ಗ್ರಾಮಗಳಲ್ಲಿ ಶಾಂತಿ ಮತ್ತು ಸೌಹಾರ್ದ ಸಭೆ ನಡೆಸಲು ನಿಗದಿತ ವೇಳಾಪಟ್ಟಿ ಸಿದ್ಧಪಡಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಸೂಚಿಸಿದರು.

ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ (ದೌರ್ಜನ್ಯ ನಿಯಂತ್ರಣ) ನಿಯಮಗಳಡಿ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ತ್ರೈಮಾಸಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿವಿಧ ಇಲಾಖೆಗಳು ಜಂಟಿಯಾಗಿ ಸಭೆ ನಡೆಸುವುದರಿಂದ ಸ್ಥಳೀಯ ಸಮಸ್ಯೆ ಪರಿಹಾರಕ್ಕೆ ಅನುಕೂಲವಾಗಲಿದೆ ಎಂದರು.

ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್ ಮಾತನಾಡಿ, ‘ಕಾಡಂಚಿನಲ್ಲಿ ವಾಸವಿರುವ ಹಲಸರು, ಮಲೆಯರು, ಮಲೆಕುಡಿ ಸಮುದಾಯದವರು ಅರಣ್ಯ ಪ್ರದೇಶದಲ್ಲಿ ಕಿರು ಉತ್ಪನ್ನ ಸಂಗ್ರಹಿಸಲು ಅವಕಾಶ ಕಲ್ಪಿಸಬೇಕು. ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ತಿಳಿಸಿದರು.

ಶೆಟ್ಟಿಹಳ್ಳಿ ರಸ್ತೆ ಬದಿಗಳಲ್ಲಿ ಹಳೆಯ ಮರಗಳನ್ನು ತೆರವುಗೊಳಿಸಬೇಕು. ದಿನಸಿ ಅಂಗಡಿಗಳಲ್ಲಿಯೂ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದು ಹಾಗೂ ಮದ್ಯದ ಅಂಗಡಿಗಳನ್ನು ನಿಗದಿತ ಸಮಯಕ್ಕಿಂತ ಮೊದಲು ತೆರೆದು ಮಾರಾಟ ಮಾಡುವುದು ಕಂಡು ಬರುತ್ತಿದೆ ಎಂದು ಸಮಿತಿಯ ಸದಸ್ಯರು ಸಭೆಯ ಗಮನಕ್ಕೆ ತಂದರು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮಂಜುನಾಥ್‌ ಸೂಚಿಸಿದರು.

ಸಣ್ಣ ನೀರಾವರಿ ಇಲಾಖೆಯಿಂದ ಈಗಾಗಲೇ ಕೊರೆದಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಈಗಾಗಲೇ ಭೂ ಮಂಜೂರಾತಿ ಆಗಿರುವವರಿಗೆ ಖಾತೆ ಮಾಡಿಕೊಡಬೇಕು. ಪೌರಕಾರ್ಮಿಕರಿಗೆ ಮನೆ ನಿರ್ಮಿಸಿ ಕೊಡಬೇಕು. ಸಿಟಿ ಬಸ್‌ ನಿಲ್ದಾಣದ ಬಳಿ ನಗರಸಭೆಯಿಂದ ನಿರ್ಮಾಣ ಮಾಡಿರುವ ಅಂಗಡಿ ಮಳಿಗೆಗಳಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾತಿ ನೀಡಬೇಕು. ಆದರ್ಶ ಗ್ರಾಮ ಯೋಜನೆಯಡಿ ವಿದ್ಯುತ್ ದೀಪ ಅಳವಡಿಸಬೇಕು. ಕಾಫಿ ಲೈನ್ ಮನೆಗಳಲ್ಲಿ ವಾಸ ಮಾಡುವ ಕಾರ್ಮಿಕರಿಗೆ ಗಿರಿಜನ ಉಪಯೋಜನೆಯಡಿ ನಿವೇಶನ ಒದಗಿಸಬೇಕು. ಗುಡ್ಡೆನಹಳ್ಳಿ ಗ್ರಾಮದಲ್ಲಿ ಕುಲುವಾಡಿಕೆ ಜಮೀನನ್ನು ಇತರೆ ವರ್ಗದವರಿಗೆ ಖಾತೆ ಮಾಡಿ ಕೊಡಬಾರದು. ಕಾರ್ಲೇ ಗ್ರಾಮದಲ್ಲಿ ಸ್ಮಶಾನ ಒತ್ತುವರಿ ತೆರವು ಮಾಡಬೇಕು ಎಂದು ಸಮಿತಿ ಸದಸ್ಯರಾದ ಮಲ್ಲೇಶ್, ಮರಿ ಜೋಸೆಫ್, ಶಿವಮ್ಮ, ನವೀನ್ ಸದಾ, ಶಿವಪ್ಪ ನಾಯಕ್ ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ಸಕಲೇಶಪುರ ಉಪ ವಿಭಾಗದ ರಾಜೇಶ್, ಡಿವೈಎಸ್ಪಿ ಗಂಗಾಧರಪ್ಪ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ದೂದ್‌ಪೀರ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಪೌರಕಾರ್ಮಿಕರ ಆರೋಗ್ಯ ತಪಾಸಣೆ

ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹ ಸೌಲಭ್ಯ ಕಲ್ಪಿಸುವುದರ ಜೊತೆಗೆ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳ ನಿಯೋಜನೆ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ 2013 ರನ್ವಯ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪೌರಕಾರ್ಮಿಕರಿಗೆ ಬೆಳಗಿನ ಉಪಾಹಾರ ಮತ್ತು ಸುರಕ್ಷತಾ ಪರಿಕರಗಳನ್ನು ಒದಗಿಸಬೇಕು ಎಂದು ತಿಳಿಸಿದರು. ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಪಿಎಫ್ ಮತ್ತು ಪಿಎಫ್ ಹಣ ಪಾವತಿ ಆಗುತ್ತಿರುವ ಬಗ್ಗೆ ಪರಿಶೀಲನೆ ಮಾಡಬೇಕು. ಸುರಕ್ಷಾ ಪರಿಕರಗಳನ್ನು ನೀಡಲಾಗಿದೆಯೇ? ಅವುಗಳ ಬಳಕೆ ಮಾಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಸೂಚಿಸಿದ ಅವರು ವರ್ಷಕ್ಕೆ ಮೂರು ಬಾರಿ ಸುರಕ್ಷಾ ಪರಿಕರಗಳನ್ನು ನೀಡುವಂತೆ ತಿಳಿಸಿದರು. ಸಮಿತಿ ಸದಸ್ಯರಾದ ಶ್ರೀನಿವಾಸ್ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ದೂದ್‌ಪೀರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಿಲ್ ಮತ್ತಿತರರು ಹಾಜರಿದ್ದರು.