ಹೊಳೆನರಸೀಪುರ: ಕೇಂದ್ರ ಸರ್ಕಾರದಲ್ಲಿ ಹತ್ತಾರು ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದ ಬಾಬು ಜಗಜೀವನ್‍ರಾಮ್ ಅವರು ಕೆಲವರ ಕುತಂತ್ರದಿಂದ ದೇಶದ ಪ್ರಧಾನಿ ಆಗುವ ಅವಕಾಶ ತಪ್ಪಿತು. ಅವರು ಪ್ರಧಾನಿ ಆಗಿದ್ದರೆ ದೇಶ ಇನ್ನೂ ಹೆಚ್ಚಿನ ಅಭಿವೃದ್ಧಿ ಆಗುತ್ತಿತ್ತು ಎಂದು ಶಾಸಕ ಎಚ್.ಡಿ. ರೇವಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕು ಆಡಳಿತ ಶನಿವಾರ ಆಯೋಜಿಸಿದ್ದ ಬಾಬೂಜಿ ಅವರ 118 ಜನ್ಮದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಡಾ.ಬಿ.ಆರ್. ಅಂಬೇಡ್ಕರ್ ಹೆಸರಿನ ವಸತಿ ಶಾಲೆಗಳಂತೆ ಬಾಬು ಜಗಜೀವನ್‍ರಾಮ್ ಹೆಸರಿನಲ್ಲೂ ದೇಶಾದ್ಯಂತ ವಸತಿ ಶಾಲೆಗಳನ್ನು ತೆರಯಬೇಕು ಎಂದು ಆಗ್ರಹಿಸಿದರು. ಬಾಬು ಜಗಜೀವನ್‍ರಾಮ್ ಅವರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ವೇದಿಕೆಗೆ ತಂದರು.
ಶಿಕ್ಷಣ ಇಲಾಖೆಯ ಎಂ.ಜಿ. ಪರಮೇಶ್ ಪ್ರಧಾನ ಭಾಷಣ ಮಾಡಿ, ಬಾಬು ಜಗಜೀವನ್‍ರಾಮ್, ಸ್ವಾತಂತ್ರ ಹೋರಾಟಗಾರ. ಕೇಂದ್ರ ಸರ್ಕಾರದಲ್ಲಿ ಕಾರ್ಮಿಕ ಇಲಾಖೆ, ರಕ್ಷಣಾ ಇಲಾಖೆ ಹಾಗೂ ಕೃಷಿ ಸಚಿವರಾಗಿದ್ದವರು, ನೊಂದವರ ಶೋಷಿತರ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿದ್ದರು ಎಂದರು. ಪರಿಶಿಷ್ಟ ಸಮಾಜದ ಸಾಧಕರನ್ನು ಸನ್ಮಾನಿಸಿದರು. ತಹಶೀಲ್ದಾರ್ ವೈ.ಎಂ. ರೇಣುಕುಮಾರ್, ಪುರಸಭಾಧ್ಯಕ್ಷ ಎಚ್.ಕೆ. ಪ್ರಸನ್ನ, ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಆರ್. ಮಂಜುನಾಥ್, ಲಕ್ಕೂರು ಬಸವರಾಜ್, ಪುರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಣ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ಕಂದಾಯ ಇಲಾಖೆಯ ಲೋಕೇಶ್, ಮುಖಂಡ ಪಾಪಣ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.