ADVERTISEMENT

ಹೊಸ ಬಡಾವಣೆ: 15 ಸಾವಿರ ನಿವೇಶನ

1200 ಎಕರೆ ಜಮೀನು ಅಭಿವೃದ್ಧಿ ಪಡಿಸಲು ನಿರ್ಧಾರ: ರಾಜೇಗೌಡ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 15:44 IST
Last Updated 9 ಜುಲೈ 2019, 15:44 IST
ಕೆ.ಎಂ.ರಾಜೇಗೌಡ
ಕೆ.ಎಂ.ರಾಜೇಗೌಡ   

ಹಾಸನ: ನಗರದ ಹೊರವಲಯದ ಭುವನಹಳ್ಳಿ, ಗೇಕರವಳ್ಳಿ, ಸಮುದ್ರವಳ್ಳಿ, ಕೆಂಚಟ್ಟಳ್ಳಿ ಸೇರಿದಂತೆ ಸುಮಾರು 1200 ಎಕರೆ ಜಮೀನನ್ನು ಅಭಿವೃದ್ಧಿ ಪಡಿಸಿ ಹೊಸ ಬಡಾವಣೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ರಾಜೇಗೌಡ ಹೇಳಿದರು.

ಕೃಷ್ಣಾನಗರ ಬಡಾವಣೆ ಅಭಿವೃದ್ಧಿಯಾದ ನಂತರ ಜನರು ಇಂತಹ ಹೊಸ ಯೋಜನೆಗಳಿಗೆ ಬೇಡಿಕೆ ಸಲ್ಲಿಸುತ್ತಿದ್ದು, ಅದರ ಅನುಗುಣವಾಗಿ ಗ್ರಾಮಗಳ ರೈತರ ಸ್ವಯಂ ಪ್ರೇರಿತ ಒಪ್ಪಿಗೆ ಮೇರೆಗೆ ಮತ್ತೊಂದು ಹೊಸ ಬಡಾವಣೆ ನಿರ್ಮಿಸಲು ನಿರ್ಧರಿಸಲಾಗಿದೆ. ಸರ್ಕಾರದ ಅನುಮತಿ ದೊರೆತ ಕೂಡಲೇ ಶೀರ್ಘದಲ್ಲಿ ಕೆಲಸ ಕಾರ್ಯಗಳನ್ನು ಪ್ರಾರಂಭಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭುವನಹಳ್ಳಿ, ಗೇಕರವಳ್ಳಿ, ಸಮುದ್ರವಳ್ಳಿ, ಕೆಂಚಟ್ಟಳ್ಳಿ ಗ್ರಾಮಗಳ ರೈತರನ್ನು ನೇರವಾಗಿ ಸಂಪರ್ಕಿಸಿ ಅವರ ಒಪ್ಪಿಗೆ ಪಡೆದಿದ್ದು, ಕೆಲವರು ಒಪ್ಪಲು ಹಿಂಜರಿಯುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಅವರ ಮನವೊಲಿಸಿ ಎಲ್ಲರ ಸಹಭಾಗಿತ್ವದೊಂದಿಗೆ ಶೇಕಡಾ 50.50 ಅನುಪಾತದಲ್ಲಿ ನಿವೆಶನಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.

ADVERTISEMENT

1200 ಎಕರೆ ಜಮೀನಿನಲ್ಲಿ ಸುಮಾರು 15 ಸಾವಿರ ವಸತಿಗೆ ಉಪಯೋಗವಾದ ನಿವೇಶನಗಳನ್ನು ನಿರ್ಮಿಸಲು ಯೋಜಿಸಲಾಗಿದ್ದು, ಉಳಿದಂತೆ ಪಾರ್ಕ್, ಸೂಪರ್ ಬಜಾರಾ (ಹೈಟೆಕ್ ಮಾರ್ಕೆಟ್) ಒಳಗೊಂಡಂತೆ ಸರ್ಕಾರಿ ನಿಯಮಗಳ ಅನ್ವಯ ಸಾರ್ವಜನಿಕ ಬಳಕೆಗೆ ಸ್ಥಳಗಳಿಗಾಗಿ ಮೀಸಲಿಡಲಾಗುವುದು ಎಂದು ವಿವರಿಸಿದರು.

ಮೂಲಭೂತ ಸೌಕರ್ಯಗಳು ಸೇರಿದಂತೆ ಸುಮಾರು ₹ 500 ಕೋಟಿ ವೆಚ್ಚದಲ್ಲಿ ಬಡಾವಣೆ ನಿರ್ಮಾಣಕ್ಕೆ ಗುರಿ ಹೊಂದಲಾಗಿದ್ದು, ಮನೆ ನಿರ್ಮಾಣ ಮಾಡುವವರಿಗೆ ಜಲಸಂರಕ್ಷಣೆ ಸೇರಿದಂತೆ ಪರಿಸರಕ್ಕೆ ಪೂರಕ ನಿಯಮಗಳನ್ನು ಅನುಸರಿಸುವ ಷರತ್ತು ನಿಬಂಧನೆಗಳನ್ನು ಹಾಕಲಾಗುವುದು ಎಂದರು.

ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್‌ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 50ರಷ್ಟು ರಿಯಾಯಿತಿಯಲ್ಲಿ ನಿವೇಶನಗಳನ್ನು ನೀಡಲಾಗುವುದು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೆ.ಎಂ. ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ಪಾರ್ಕ್‍ಗಳ ಅಭಿವೃದ್ಧಿಗೆ ಕ್ರಮವಹಿಸಲಾಗುತ್ತಿದ್ದು, ನಗರದ ಸುಮಾರು 90 ಉದ್ಯಾನ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.