ಹೆತ್ತೂರು: ಸರ್ಕಾರದಿಂದ ಆಶ್ರಯ ಯೋಜನೆಯಡಿ ಮಂಜೂರಾದ ಮನೆಯನ್ನು ಜೆಸಿಬಿ ಬಳಸಿ ನಾಶ ಮಾಡಿರುವ ಅರಣ್ಯ ಇಲಾಖೆಯ ಕ್ರಮಕ್ಕೆ ಮರಡಿಕೆರೆ ಗ್ರಾಮದ ಸಂತ್ರಸ್ತ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.
‘ಮರಡಿಕೆರೆಯ ಸರ್ವೆ ನಂ.361ರಲ್ಲಿ ಸರ್ಕಾರದ ಆಶ್ರಯ ಯೋಜನೆಯಡಿ ಪ್ರಿಯಾ ಡಿ.ಕೆ. ಅವರು ಮನೆ ನಿರ್ಮಾಣ ಮಾಡುತ್ತಿದ್ದರು. ಜುಲೈ 4ರಂದು ಅರಣ್ಯ ಇಲಾಖೆ ಅಧಿಕಾರಿಗಳು ಜೆಸಿಬಿ ಮೂಲಕ ನೆಲಸಮ ಮಾಡಿದ್ದಾರೆ. ಈ ಮನೆಯು 2021–22ನೇ ಸಾಲಿನಲ್ಲಿ ಅಶ್ರಯ ಯೋಜನೆಯಡಿ ಮಂಜೂರಾಗಿತ್ತು. ಹಂತ ಹಂತವಾಗಿ ನಾಲ್ಕು ಬಾರಿಗೆ ಅನುದಾನ ಬಿಡುಗಡೆಯಾಗಿದ್ದು, ಮನೆ ನಿರ್ಮಾಣ ಪೂರ್ಣ ಹಂತದಲ್ಲಿತ್ತು. ಕುಟುಂಬ ವಾಸಕ್ಕೆ ತೆರಳಬೇಕು ಎನ್ನುತ್ತಿದ್ದ ಸಂದರ್ಭದಲ್ಲಿ ಈ ದೌರ್ಜನ್ಯ ನಡೆಸಲಾಗಿದೆ’ ಎಂದು ಸ್ಥಳೀಯರು ದೂರಿದ್ದಾರೆ.
‘ಮನೆಯು ಅರಣ್ಯ ಭೂಮಿಯೊಳಗೆ ನಿರ್ಮಾಣವಾಗಿದೆ ಎಂಬ ಕಾರಣ ನೀಡಿರುವ ಅರಣ್ಯ ಇಲಾಖೆ, ಯಾವುದೇ ನೋಟಿಸ್ ನೀಡದೆ ಏಕಾಏಕಿ ಮನೆ ನೆಲಸಮ ಮಾಡಿದೆ. ಯಸಳೂರು ವಲಯದ ಆರ್‌ಎಫ್‌ಒ ಕೃಷ್ಣಾ ಅವರ ವಿರುದ್ಧ ದಬ್ಬಾಳಿಕೆಯ ಆರೋಪ ಕೇಳಿ ಬಂದಿದ್ದು, ಈ ಪ್ರದೇಶದಲ್ಲಿಯೇ ಇನ್ನು ಕೆಲವರು ಮನೆ ಕಟ್ಟಿಕೊಂಡಿದ್ದರೂ, ಪ್ರಿಯಾ ಮತ್ತು ಶೋಭರಾಜ್ ದಂಪತಿಯ ಮನೆ ಮಾತ್ರ ಏಕೆ ನೆಲಸಮ ಮಾಡಲಾಗಿದೆ’ ಎಂದು ಪ್ರಶ್ನಿಸಿದ್ದಾರೆ.
ಈ ಸಂಬಂಧ ಪರಿಶೀಲನೆ ನಡೆಸಿ ನ್ಯಾಯ ಒದಗಿಸಬೇಕೆಂದು ಸಂತ್ರಸ್ತ ಕುಟುಂಬ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.