ADVERTISEMENT

ಹಳೇಬೀಡು: ಹೊಯ್ಸಳೇಶ್ವರನ ಸೊಬಗು ಹೆಚ್ಚಿಸಿದ ತಿರಂಗಾ

ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಭಾರತ ಭೂಪಟದ ರಂಗೊಲಿ, ಸೆಲ್ಫಿ ಬೋರ್ಡ್

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 7:23 IST
Last Updated 14 ಆಗಸ್ಟ್ 2025, 7:23 IST
ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಉದ್ಯಾನದಲ್ಲಿ ಹರ್ ಘರ್ ತಿರಂಗಾ ಅಂಗವಾಗಿ ರೂಪಿಸಿರುವ ತಿರಂಗಾ ಬಣ್ಣದ ಚಿತ್ರ
ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಉದ್ಯಾನದಲ್ಲಿ ಹರ್ ಘರ್ ತಿರಂಗಾ ಅಂಗವಾಗಿ ರೂಪಿಸಿರುವ ತಿರಂಗಾ ಬಣ್ಣದ ಚಿತ್ರ   

ಹಳೇಬೀಡು: ಜನರಲ್ಲಿ ಸ್ವಾತಂತ್ರ್ಯದ ಸಂಭ್ರಮ ಹೆಚ್ಚಿಸುವುದಕ್ಕಾಗಿ ಕೇಂದ್ರ ಸರ್ಕಾರದ ಆದೇಶದಂತೆ ಇಲ್ಲಿನ ಹೊಯ್ಸಳೇಶ್ವರ ದೇವಾಲಯದಲ್ಲಿ ಹರ್ ಘರ್ ತಿರಂಗಾ ಅಂಗವಾಗಿ ಮೂಡಿಸಿರುವ ಚಿತ್ರಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ದೇವಾಲಯದ ಒಂದು ಬದಿಯ ನೆಲದ ಮೇಲೆ ರಂಗೋಲಿಯಿಂದ ದೊಡ್ಡದಾದ ಭಾರತದ ಭೂಪಟ ಮೂಡಿಸಲಾಗಿದೆ. ಭೂಪಟಕ್ಕೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣ ತುಂಬಿಸಿ, ಮಧ್ಯದಲ್ಲಿ ಚಕ್ರವನ್ನು ಬಿಡಿಸಲಾಗಿದೆ. ಭಾರತದ ಭೂಪಟ ವೀಕ್ಷಣೆ ಮಾಡಿ ಪ್ರವಾಸಿಗರು ಸಂಭ್ರಮಿಸುತ್ತಿದ್ದಾರೆ. ಭೂಪಟದ ತಲೆಯ ಮೇಲೆ ಸೆಲ್ಫಿ ಬೋರ್ಡ್ ಅಳವಡಿಸಲಾಗಿದ್ದು, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಹೊಯ್ಸಳೇಶ್ವರ ದೇವಾಲಯದ ಶಿಲ್ಪಕಲಾ ಸೌಂದರ್ಯ ಫೋಟೊದಲ್ಲಿ ಮೂಡುವಂತೆ ಸೆಲ್ಫಿ ಬೋರ್ಡ್ ಇಡಲಾಗಿದೆ.

ದೇವಾಲಯದ ಮತ್ತೊಂದು ಭಾಗದ ಉದ್ಯಾನದ ಹಸಿರು ಮೈದಾನದಲ್ಲಿ ವೃತ್ತಾಕಾರದಲ್ಲಿ ಬಣ್ಣದಿಂದ ತಿರಂಗಾ ಮೂಡಿಸಲಾಗಿದೆ. ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಹುಲ್ಲನ್ನು ಬೆಳೆಸಿದಂತೆ ಕಾಣುತ್ತಿದೆ. ಇಲ್ಲಿಯೂ ಪೋಟೊ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಹುಲ್ಲಿನ ಮೇಲೆ ಹಸಿರು ವೈಭವ ಹಾಗೂ ಪರಿಸರಕ್ಕೆ ಹಾನಿ ಆಗದಂತಹ ಬಣ್ಣ ಬಳಸಿ ಚಿತ್ರ ಮೂಡಿಸಿದ್ದಾರೆ.

ADVERTISEMENT

ಹೊಯ್ಸಳೇಶ್ವರ ದೇವಾಲಯದ ಸ್ಮಾರಕ, ಉದ್ಯಾನ ಹಾಗೂ ಸಂಗ್ರಹಾಲಯ ವಿಭಾಗಗಳ ಸಿಬ್ಬಂದಿ ಶ್ರಮದಿಂದ ಹರ್ ಘರ್ ತಿರಂಗಾ ಚಿತ್ರಗಳು ವರ್ಣಮಯವಾಗಿ ಮೂಡಿ ಬಂದಿವೆ. ಚಿತ್ರಕಲಾವಿದರ ಜೊತೆ ಸಿಬ್ಬಂದಿ ತಿಂಗಳಿನಿಂದ ಶ್ರಮ ವಹಿಸಿ ಕೆಲಸ ಮಾಡಿದ್ದಾರೆ. ಸಹಾಯಕ ಸ್ಮಾರಕ ಸಂರಕ್ಷಣಾಧಿಕಾರಿ ಸುನಿಲ್, ಉದ್ಯಾನ ವಿಭಾಗದ ತೋಟಗಾರಿಕಾ ಅಧಿಕಾರಿ ಶಿಲ್ಪಾ ಅವರ ಮೇಲ್ವಿಚಾರಣೆಯಲ್ಲಿ ದೇವಾಲಯದಲ್ಲಿ ಹರ್ ಘರ್ ತಿರಂಗಾ ಉತ್ತಮವಾಗಿ ಮೂಡಿ ಬಂದಿದೆ ಎಂಬ ಮಾತು ಸ್ಥಳೀಯರಿಂದ ಕೇಳಿ ಬಂತು.

ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದಲ್ಲಿ ಹರ್ ಘರ್ ತಿರಂಗಾ ಅಂಗವಾಗಿ ಮೂಡಿಸಿದ ಕಲೆಯ ಡ್ರೋನ್‌ ಚಿತ್ರ.
ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದಲ್ಲಿ ಹರ್ ಘರ್ ತಿರಂಗಾ ಅಂಗವಾಗಿ ರೂಪಿಸಿರುವ ಸೆಲ್ಫಿ ಬೋರ್ಡ್ ಹಾಗೂ ಭಾರತದ ಭೂಪಟದ ಚಿತ್ರ
ಹೊಯ್ಸಳೇಶ್ವರ ದೇವಾಲಯದ ಶಿಲ್ಪಕಲೆ ಪುರಾಣ ಪುಣ್ಯ ಕಥೆಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತವೆ. ಈಗ ಮೂಡಿಸಿರುವ ಹರ್ ಘರ್ ತಿರಂಗಾ ಚಿತ್ರಗಳು ಭಾರತದ ಸ್ವಾತಂತ್ರ್ಯ ಸಂಗ್ರಾಮ ನೆನಪಿಸಿದವು
ಕೃಷ್ಣಮೂರ್ತಿ ಬೆಂಗಳೂರಿನ ಪ್ರವಾಸಿಗ
ಹೊಯ್ಸಳೇಶ್ವರ ದೇವಾಲಯ ಶಿಲ್ಪಕಲೆಗಳಿಂದ ಮನಸ್ಸಿಗೆ ಮುದ ನೀಡುತ್ತಿದೆ. ಈಗ ತಿರಂಗಾದಿಂದ ದೇವಾಲಯ ವರ್ಣಮಯವಾಗಿದ್ದು ದೇಶಾಭಿಮಾನ ಮೂಡಿಸುತ್ತಿದೆ
ಎಚ್.ಆರ್. ಮಧು ಹಳೇಬೀಡು ಗ್ರಾ.ಪಂ. ಅಧ್ಯಕ್ಷ

ಜನರಿಂದ ಉತ್ತಮ ಪ್ರತಿಕ್ರಿಯೆ

ಹಳೇಬೀಡು ಹೊಯ್ಸಳೇಶ್ವರ ದೇವಾಲಯದಲ್ಲಿ ರೂಪಿಸಿರುವ ಹರ್ ಘರ್ ತಿರಂಗಾ ರಂಗೋಲಿ ಕುರಿತು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಪುರಾತತ್ವ ಅಧೀಕ್ಷಕ ಡಾ.ಸುಜಿತ್ ನಯನ್ ಹೇಳಿದರು. ಸರ್ಕಾರದ ಆದೇಶದಂತೆ ಪುರಾತತ್ವ ಇಲಾಖೆಯ ಎಲ್ಲ ಸ್ಮಾರಕಗಳಲ್ಲಿಯೂ ಹರ್ ಘರ್ ತಿರಂಗಾ ಸೊಬಗು ಹೆಚ್ಚಿಸಲಾಗಿದೆ. ಸಾಕಷ್ಟು ಸ್ಥಳದಲ್ಲಿ ಸ್ಥಳೀಯ ಸಂಸ್ಥೆಗಳು ಸಹಕಾರ ನೀಡಿವೆ. ಪ್ರತಿ ಊರಿನ ಇಲಾಖೆಯ ಸ್ಮಾರಕಗಳಲ್ಲಿ ಮೂಡಿಸಿರುವ ಹರ್ ಘರ್ ತಿರಂಗಾ ಚಿತ್ತಾರಗಳು ಪ್ರವಾಸಿಗರು ಹಾಗೂ ಸ್ಥಳೀಯರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.