
ಹಾಸನ: ತಾಲ್ಲೂಕಿನ ನಿಟ್ಟೂರು ಸಮೀಪದ ಹಂಗರಹಳ್ಳಿ ಸರ್ಕಾರಿ ಶಾಲೆಯ ವಿಲೀನ ವಿರೋಧಿಸಿ, ಅಖಿಲ ಭಾರತೀಯ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಒ) ನೇತೃತ್ವದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಎಐಡಿಎಸ್ಒ ಜಿಲ್ಲಾ ಘಟಕದ ಅಧ್ಯಕ್ಷೆ ಚೈತ್ರಾ ಮಾತನಾಡಿ, ನಿಟ್ಟೂರಿನಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಆರಂಭಿಸುವ ನೆಪದಲ್ಲಿ ಸುತ್ತಲಿನ 5–6 ಕಿ.ಮೀ. ವ್ಯಾಪ್ತಿಯ 12 ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲು ಸರ್ಕಾರ ಮುಂದಾಗಿರುವುದು ಖಂಡನೀಯ ಎಂದರು.
ಹಂಗರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 25ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದು, ವಿಲೀನಗೊಳಿಸಲು ಉದ್ದೇಶಿಸಿರುವ ಶಾಲೆಗಳ ಪೈಕಿ ಹೆಚ್ಚು ಮಕ್ಕಳನ್ನು ಹೊಂದಿರುವ ಶಾಲೆಯಾಗಿದೆ. ಇಂತಹ ಶಾಲೆಯನ್ನು ಮುಚ್ಚುವುದು ಮಕ್ಕಳ ಶಿಕ್ಷಣಕ್ಕೆ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥ ಲೋಕೇಶ್ ನಾಯಕ್ ಮಾತನಾಡಿ, ಹಳ್ಳಿಯ ಜನರು ಬೆಳಿಗ್ಗೆ ನಾಲ್ಕು ಗಂಟೆಯಿಂದಲೇ ಹೃನುಗಾರಿಕೆ ಸೇರಿದಂತೆ, ಕೂಲಿ, ಹೊಲ ಕೆಲಸಕ್ಕೆ ಹೋಗುವ ಜೀವನ ನಡೆಸುತ್ತಿದ್ದಾರೆ. ಸರ್ಕಾರ ಬಸ್ ವ್ಯವಸ್ಥೆ ನೀಡುತ್ತೇವೆ ಎನ್ನುವುದು ದೂರದ ಮಾತು. ಮಕ್ಕಳನ್ನು ದೂರದ ಶಾಲೆಗೆ ಕಳಿಸುವುದು ಬಡ ಕುಟುಂಬಗಳಿಗೆ ಸಾಧ್ಯವಿಲ್ಲ. ನಮಗೆ ಬಸ್ ಬೇಡ, ಯಾವುದೇ ಸೌಲಭ್ಯ ಬೇಡ. ನಮ್ಮೂರ ಸರ್ಕಾರಿ ಶಾಲೆ ಬೇಕು. ಶಾಲೆ ವಿಚಾರದಲ್ಲಿ ರಾಜಕಾರಣ ಮಾಡುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿದರು.
ಶಾಲೆಯ ಎಸ್‌ಡಿಎಂಸಿ ಪದಾಧಿಕಾರಿಗಳು ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಉತ್ತಮ ಶಿಕ್ಷಕರು ಹಾಗೂ ಮೂಲಸೌಕರ್ಯ ಒದಗಿಸುವುದೇ ಸರ್ಕಾರದ ಜವಾಬ್ದಾರಿ. ಯಾವುದೇ ಕಾರಣಕ್ಕೂ ಹಂಗರಹಳ್ಳಿ ಸರ್ಕಾರಿ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ. ಇದಕ್ಕೆ ಗ್ರಾಮದ ಸಂಪೂರ್ಣ ವಿರೋಧವಿದೆ ಎಂದು ಸ್ಪಷ್ಟಪಡಿಸಿದರು.
ಎಐಡಿಎಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಸುಷ್ಮಾ, ಗ್ರಾಮಸ್ಥರಾದ ಕುಮಾರ್ ನಾಯಕ್, ಶೋಭಾಬಾಯಿ, ಪ್ರಜ್ವಲ್, ಗುರು ನಾಯಕ್, ಸುರೇಶ್ ನಾಯಕ್, ಸ್ವಾಮಿ ನಾಯಕ್ ಹಾಗೂ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.