ADVERTISEMENT

ಚನ್ನರಾಯಪಟ್ಟಣ: ಮೀನು ಸಾಕಾಣಿಕೆಗೆ ಕೆರೆಗಳ ಗುರುತಿಸಿ

ಖಾತ್ರಿ ಯೋಜನೆಯಲ್ಲಿ ಮೀನು ಹೊಂಡ ನಿರ್ಮಾಣಕ್ಕೆ ಅವಕಾಶ: ತಾ.ಪಂ. ಇಒ ಜಿ.ಆರ್. ಹರೀಶ್

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 13:07 IST
Last Updated 18 ಜೂನ್ 2025, 13:07 IST
ಚನ್ನರಾಯಪಟ್ಟಣದಲ್ಲಿ ಬುಧವಾರ ಏರ್ಪಡಿಸಿದ್ದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ಸಹನಕುಮಾರ್, ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್ ಭಾಗವಹಿಸಿದ್ದರು
ಚನ್ನರಾಯಪಟ್ಟಣದಲ್ಲಿ ಬುಧವಾರ ಏರ್ಪಡಿಸಿದ್ದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ಸಹನಕುಮಾರ್, ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್ ಭಾಗವಹಿಸಿದ್ದರು   

ಚನ್ನರಾಯಪಟ್ಟಣ: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮೀನು ಹೊಂಡಗಳನ್ನು ನಿರ್ಮಿಸಲು ಅವಕಾಶ ಇದೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಿ.ಆರ್. ಹರೀಶ್ ಹೇಳಿದರು.

ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ ಸಾಕಷ್ಟು ಕೆರೆಗಳಿವೆ. ವರ್ಷಪೂರ್ತಿ ನೀರು ಇರುವ ಕೆರೆಗಳನ್ನು ಗುರುತಿಸಿ ಮೀನು ಸಾಕಾಣಿಕೆಗೆ ಅವಕಾಶ ಒದಗಿಸಬೇಕು. ಕೆರೆಗಳನ್ನು ಹರಾಜು ಹಾಕಿ ಮೀನುಗಳನ್ನು ಸಾಕಲು ಅವಕಾಶ ನೀಡಬೇಕು. ಅದರ ಬಗ್ಗೆ ಜನರಲ್ಲಿ ಅರಿವು ಉಂಟು ಮಾಡಬೇಕು’ ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿಯ ಗಮನಕ್ಕೆ ತಂದರು.

ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಸಹನಕುಮಾರ ಮಾತನಾಡಿ, ‘ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಈ ಬಗ್ಗೆ ತರಬೇತಿ ನೀಡಿದರೆ ಅವರು ಗ್ರಾಮೀಣ ಭಾಗದ ಜನರಿಗೆ ಮಾಹಿತಿ ನೀಡಲು ಅನುಕೂಲವಾಗುತ್ತದೆ’ ಎಂದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಹರೀಶ್, ‘ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕ್ರಿಯಾಯೋಜನೆ ಅನ್ವಯ ಕಾರ್ಯನಿರ್ವಹಿಸಬೇಕು. ಕ್ರಿಯಾಯೋಜನೆಯಲ್ಲಿ ಇಲ್ಲದಿರುವ ಕಾಮಗಾರಿ ಕೈಗೆತ್ತಿಕೊಳ್ಳುವುದು ಬೇಡ. ಮದ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆ ತಲುಪುವಂತೆ ನೋಡಿಕೊಳ್ಳಬೇಕು’ ಎಂದರು.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಪಾವತಿಸಲು ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ರೈತರಿಗೆ ಮಾಹಿತಿ ನೀಡುವ ದೃಷ್ಠಿಯಿಂದ ಈಗಾಗಲೇ 41 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಆಟೋಗಳಲ್ಲಿ ಪ್ರಚಾರ ಮಾಡಲಾಗಿದೆ. ಅದೇ ರೀತಿ ಬೆಳೆ ಸಮೀಕ್ಷೆ ಪ್ರಕ್ರಿಯೆ ಸಹ ಆರಂಭವಾಗಿದ್ದು, ರೈತರು ಬೆಳೆದ ಬೆಳೆಯನ್ನು ಮೊಬೈಲ್ ಆ್ಯಪ್ ಮೂಲಕ ತಾವೇ ಸಮೀಕ್ಷೆ ಮಾಡಲು ಅನುಕೂಲ ಕಲ್ಪಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮೋಹನ್ ಕುಮಾರ್ ತಿಳಿಸಿದರು.

ಗ್ರಾ.ಪಂ. ಮೇಲ್ದರ್ಜೆಗೆ; ಪ್ರಸ್ತಾವ

2011ರ ಜನಗಣತಿ ಪ್ರಕಾರ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 6974 ಜನಸಂಖ್ಯೆ ಇತ್ತು. 14 ವರ್ಷದ ಬಳಿಕ ಜನಸಂಖ್ಯೆ ಹೆಚ್ಚಾಗಿರುವುದರಿಂದ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸುವಂತೆ ಶ್ರವಣಬೆಳಗೊಳ ಗ್ರಾಮಪಂಚಾಯಿತಿ ವತಿಯಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಇಒ ಹರೀಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.