ADVERTISEMENT

ಪ್ರಾಣ ಉಳಿಸಲು ಆಗದಿದ್ದರೆ ಅಧಿಕಾರ ಬಿಟ್ಟು ತೊಲಗಿ-ಎಚ್‌.ಡಿ.ರೇವಣ್ಣ

ರಾಜ್ಯ ಸರ್ಕಾರದ ವಿರುದ್ಧ ಶಾಸಕ ಎಚ್‌.ಡಿ. ರೇವಣ್ಣ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಮೇ 2021, 15:01 IST
Last Updated 21 ಮೇ 2021, 15:01 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಹಾಸನ: ರಾಜ್ಯದಲ್ಲಿ ಕೋವಿಡ್ ಪೀಡಿತರು ಸರಿಯಾದ ಚಿಕಿತ್ಸೆ ಸಿಗದೆ ಮೃತಪಡುತ್ತಿದ್ದಾರೆ. ಜನರ ಪ್ರಾಣ ಉಳಿಸಲು ಆಗದಿದ್ದರೆ ಅಧಿಕಾರ ಬಿಟ್ಟು ತೊಲಗಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದರು.

ಕೋವಿಡ್ ಪ್ರಕರಣಗಳು ಹಾಗೂ ಸೋಂಕಿತರ ಮರಣ ಪ್ರಮಾಣದ ಮಾಹಿತಿ ಮುಚ್ಚಿಡಲಾಗಿದೆ. ಗ್ರಾಮೀಣ ಭಾಗದಲ್ಲಿ ಚಿಕಿತ್ಸೆ ಪಡೆಯಲು ಹಣವಿಲ್ಲದೆ ಹಲವುಸೋಂಕಿತರು ಮೃತಪಡುತ್ತಿದ್ದಾರೆ. ಚಿಕಿತ್ಸೆಗಾಗಿ ಬಡ ಹೆಣ್ಣು ಮಕ್ಕಳು ಮಾಂಗಲ್ಯ ಮಾರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಾವುದು ಮುಖ್ಯಮಂತ್ರಿ ಗಮನಕ್ಕೆಬಂದಿಲ್ಲವೇ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್‌ಗೆ ಸರಿಯಾಗಿ ಚಿಕಿತ್ಸೆ ಸಿಗದೆ, ನೋವು ತಾಳಲಾರದೆ ಹಾಗೂ ಖಾಸಗಿಆಸ್ಪತ್ರೆಗಳ ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸಲಾಗದೆ ಜನರು ಆತ್ಮಹತ್ಯೆಮಾಡಿಕೊಳ್ಳುತ್ತಿದ್ದಾರೆ. ಮೊನ್ನೆ ಹೊಳೆನರಸೀಪುರ ತಾಲ್ಲೂಕಿನ ನಾಗಲಪುರದಲ್ಲಿ ಕೊರೊನಾ ಸೋಂಕಿಗೆ ಹೆದರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೇ ಅರಸೀಕೆರೆ ತಾಲ್ಲೂಕು ಅಬ್ಬನಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಲವತ್ತ ಹಳ್ಳಿಯಮಂಜು ಮತ್ತು ಪುಷ್ಪ ದಂಪತಿ ತನ್ನ ಮಗಳನ್ನು ಉಳಿಸಿಕೊಳ್ಳಲು 2 ಎಕರೆ ಜಮೀನನ್ನು ಕೇವಲ ₹2.5 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಮಗಳು ಬದುಕಿದಳು. ಆದರೆ ತಾಯಿ ಪುಷ್ಪರನ್ನು ಉಳಿಸಿಕೊಳ್ಳಲು ಆಗಿಲ್ಲ. ರಾಜ್ಯದಲ್ಲಿ ಈ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲೆಯಲ್ಲಿ ಕಳೆದ 7 ದಿನಗಳಿಂದ ಪಾಸಿಟಿವಿಟಿ ದರ ಶೇಕಡಾ 45 ರಷ್ಟಿದೆ.ಗುರುವಾರ 1,800 ಕೋವಿಡ್‌ ಪ್ರಕರಣ ಪತ್ತೆಯಾದರೂ ಆರೋಗ್ಯ ಇಲಾಖೆ ಪಟ್ಟಿಯಲ್ಲಿ 1,300 ತೋರಿಸಲಾಗಿದೆ. 23 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಆದರೆ 16 ಸಾವು ಎಂದು ತೋರಿಸಲಾಗಿದೆ. ಚಿಕಿತ್ಸೆ ಸಿಗದೆ ಜಿಲ್ಲೆಯಲ್ಲಿ ನಿತ್ಯ 100 ಮಂದಿ ಮೃತಪಡುತ್ತಿದ್ದು, ಇದು ದಾಖಲೆಗೆ ಸೇರುತ್ತಿಲ್ಲ ಎಂದರು.

ಸರ್ಕಾರ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಖಾಸಗಿಆಸ್ಪತ್ರೆಗಳಿಗೆ ಆಮ್ಲಜನಕ ಸಿಲಿಂಡರ್‌ ನೀಡುತ್ತಿಲ್ಲ. ರಾಜಕೀಯ ಪುಡಾರಿಗಳ ಒತ್ತಡಕ್ಕೆಮಣಿದು ಜನರನ್ನು ಲೂಟಿ ಮಾಡುತ್ತಿರುವ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಯಾಗುತ್ತಿದೆ. ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಗಳ ಹಿಡಿತದಲ್ಲಿದೆ ಎಂದು ಆರೋಪಿಸಿದರು.

ಸಿಮೆಂಟ್‌, ಕಬ್ಬಿಣ, ಸ್ಟಿಲ್ ದರ ಏರಿಕೆಯಾಗಿದೆ. ಖಾಸಗಿ ಕಂಪನಿಗಳು ಮಂತ್ರಿಗಳಿಗೆಮಾಮೂಲಿ ನೀಡುತ್ತಿವೆ. ಸರ್ಕಾರ ಖಾಸಗಿ ಕಂಪನಿಗಳ ಗೂಲಾಮರಂತೆನಡೆದುಕೊಳ್ಳುತ್ತಿದೆ. ರಾಜ್ಯದ ಜನ ಮತ ನೀಡಿ ಗೆಲ್ಲಿಸಿದ್ದಾರೆ. ಗೌರವ ಇದ್ದರೆ, ಪರಿಸ್ಥಿತಿನಿರ್ವಹಣೆ ಮಾಡಲು ಆಗದಿದ್ದರೆ ರಾಜೀನಾಮೆ ನೀಡಿ ಹೋಗಲಿ ಎಂದು ಟೀಕಿಸಿದರು.

ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಲಸಿಕೆ ಖರೀದಿಗೆ ₹ 100 ಕೋಟಿ ನೀಡಲಿದೆ. ಆದರೆಪ್ರಾದೇಶಿಕ ಪಕ್ಷ ಜೆಡಿಎಸ್ ಬಳಿ ಅಷ್ಟೊಂದು ಹಣ ಎಲ್ಲಿಂದ ಬರಬೇಕು ಎಂದುಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿರೋಧ ಪಕ್ಷದ ನಾಯಕ ಜಿಲ್ಲಾಧಿಕಾರಿಗಳ ಜೊತೆಗೆ ಮಾಹಿತಿ ಪಡೆಯಬಾರದುಎಂದು ಯಾವ ಕಾನೂನಿನಲ್ಲಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಒಳಗೊಂಡಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗೊಂದಿಗೆ ಸಭೆ ನಡೆಸಿ ಮಾಹಿತಿ ಪಡೆಯುವ ಅಧಿಕಾರ ಇದೆ. ಆದರೆಸಭೆ ನಡೆಸಲು ಅಧಿಕಾರವಿಲ್ಲವೆಂದು ಸಿದ್ದರಾಮಯ್ಯ ಅವರಿಗೆ ಹೇಳಿದ್ದಾರೆಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.