ಹಾಸನ: ‘ನನಗೀಗ 92 ವರ್ಷ. ಇನ್ನು 15 ದಿನಗಳಲ್ಲಿ 93 ಆರಂಭವಾಗುತ್ತದೆ. ಜಿಲ್ಲೆಯ ಅಭಿವೃದ್ಧಿ, ರಾಜಕೀಯದ ಬಗ್ಗೆ ಈಗ ಏನನ್ನೂ ಮಾತನಾಡುವುದಿಲ್ಲ. ಮತ್ತೆ ಹಾಸನಕ್ಕೆ ಬರುತ್ತೇನೆ. ಆಗ ವಿಸ್ತೃತವಾಗಿ ಎಲ್ಲವನ್ನೂ ಮಾತನಾಡುತ್ತೇನೆ’ ಎಂದು ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹೇಳಿದರು.
ತಾಲ್ಲೂಕಿನ ದ್ಯಾಪಲಾಪುರ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಾಲಯ ಉದ್ಘಾಟನೆ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇಂದಿನ ದೇವಾಲಯ ಉದ್ಘಾಟನಾ ಕಾರ್ಯಕ್ರಮಕ್ಕೆ ಬೆಂಗಳೂರಿನ ನಿವಾಸದಿಂದ ಉಪಹಾರ ಸೇವಿಸದೇ ಬಂದಿದ್ದೇನೆ. ದೇವಾಲಯದಲ್ಲಿ ವಿಶೇಷ ಪೂಜೆ ಬಳಿಕ ಅರ್ಚಕರು ನೀಡಿದ ಸ್ವಲ್ಪ ಪ್ರಸಾದವನ್ನು ಸವಿದು ವೇದಿಕೆಯಲ್ಲಿ ಮಾತನಾಡುತ್ತಿದ್ದೇನೆ. ಇಂತಹ ದೈಹಿಕ ಭಾವ ಹಾಗೂ ಮನಸ್ಸನ್ನು ಹಿಡಿದು ನಿಲ್ಲಿಸುವ ಶಕ್ತಿ ಆಂಜನೇಯ ಸ್ವಾಮಿಗೆ ಇದೆ’ ಎಂದರು.
‘ನನ್ನ ಹಲವು ದಶಕದ ರಾಜಕೀಯ ಜೀವನದಲ್ಲಿ ಬೆನ್ನ ಹಿಂದೆ ನಿಂತು, ಶಕ್ತಿ ತುಂಬಿದ ಗ್ರಾಮದ ಹಿರಿಯರು, ಮಕ್ಕಳು, ಯುವಕರು ಇಂದು ಆಂಜನೇಯ ಸ್ವಾಮಿಯ ದೇವಾಲಯ ಉದ್ಘಾಟನೆ, ಕುಂಭಾಭಿಷೇಕ ಮಾಡಿದ್ದೀರಿ. ನಾನು ಕೂಡ ಉಪವಾಸವಿದ್ದು, ಪ್ರಾರ್ಥನೆ ಮಾಡಿದ್ದೇನೆ’ ಎಂದು ಹೇಳಿದರು.
‘ದೇವಾಲಯ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದಿದ್ದು, ಯಾವುದೇ ರೀತಿಯ ರಾಜಕೀಯ ಮಾತನಾಡುವುದಿಲ್ಲ. ಜಿಲ್ಲೆಯ ಪ್ರಗತಿಯ ಬಗ್ಗೆ ಏನನ್ನೂ ಹೇಳುವುದಿಲ್ಲ, ಎಲ್ಲವೂ ಗೊತ್ತಿದೆ. ಮುಂದಿನ ಕೆಲ ದಿನಗಳಲ್ಲಿ ಮತ್ತೊಮ್ಮೆ ಬರುತ್ತೇನೆ. ಎಲ್ಲಾ ವಿಚಾರವನ್ನೂ ಮಾತನಾಡುತ್ತೇನೆ’ ಎಂದರು.
‘ಪಾಕಿಸ್ತಾನದಿಂದ ಆಮದಾಗುತ್ತಿದ್ದ ವಸ್ತುಗಳ ಮೇಲೆ ನಿರ್ಬಂಧ ಹೇರಲಾಗಿದ್ದು, ಉಗ್ರರ ನಿಗ್ರಹಕ್ಕೆ ಅನೇಕ ಕಠಿಣ ಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ್ದಾರೆ. ರಾಷ್ಟ್ರೀಯ ವಿಚಾರದಲ್ಲಿ ಎಲ್ಲರೂ ಒಟ್ಟಾಗಿ ಬೆಂಬಲಿ ಸೂಚಿಸಿದ್ದು, ಪ್ರಧಾನಿ ಜೊತೆ ನಿಲ್ಲುತ್ತೇವೆ. ಅತ್ಯಂತ ಹೇಯ ಕೃತ್ಯಕ್ಕೆ ಕೈ ಹಾಕಿದವರನ್ನು ನೆಲಸಮ ಮಾಡಲೇಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ಕೆಲಸ ಮಾಡುತ್ತಿದ್ದು, ಅಂಥವರಿಗೆ ಆಂಜನೇಯ ಶಕ್ತಿ ಕೊಡಲಿ’ ಎಂದು ಹೇಳಿದರು.
ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ‘ಎಚ್.ಡಿ. ದೇವೇಗೌಡರು ಹಾಗೂ ಶಾಸಕ ಎಚ್.ಡಿ. ರೇವಣ್ಣ ಅವರ ಶ್ರಮದಿಂದ ಜಿಲ್ಲೆಯು ಇಂದು ಅಭಿವೃದ್ಧಿ ಕಂಡಿದೆ. ಗ್ರಾಮದಲ್ಲಿ ಎಲ್ಲರೂ ಜಾತ್ಯತೀತವಾಗಿ, ಪಕ್ಷಾತೀತವಾಗಿ ಒಂದಾಗಿ ಹೋಗಬೇಕು. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿನ ದುರಸ್ತಿ ಹಾಗೂ ಸಾಗುವಳಿ ಚೀಟಿ ವಿತರಣೆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸತ್ಯನಾರಾಯಣ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್, ಒಕ್ಕಲಿಗರ ಸಂಘದ ರಾಜ್ಯ ಘಟಕದ ನಿರ್ದೇಶಕ ರಘು ಗೌಡ, ಜೆಡಿಎಸ್ ಜಿಲ್ಲಾ ವಕ್ತಾರ ರಘು ಹೊಂಗೆರೆ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಸ್ವಾಮಿಗೌಡ, ಲಕ್ಷ್ಮಣಗೌಡ, ಬೋರೇಗೌಡ, ಕೀರ್ತಿ, ವೆಂಕಟೇಗೌಡ, ಕುಮಾರ್, ಬಾಲಣ್ಣ, ಪ್ರದೀಪ್ ಇದ್ದರು.
ಪ್ರಧಾನಿಗೆ ಆಂಜನೇಯ ಶಕ್ತಿ ಕೊಡಲಿ: ಎಚ್‌ಡಿಡಿ ‘ದೇವಾಲಯ ಉದ್ಘಾಟನೆಯಲ್ಲಿ ರಾಜಕೀಯ ಮಾತನಾಡುವುದಿಲ್ಲ’ ಎಚ್.ಡಿ.ದೇವೇಗೌಡ, ರೇವಣ್ಣ ಶ್ರಮದಿಂದ ಜಿಲ್ಲೆ ಅಭಿವೃದ್ಧಿಸ್ವರೂಪ್
ಜಿಲ್ಲೆಯು ಲೂಟಿಕೋರದ ಕೈಗೆ ಸಿಲುಕಿದೆ. ದೇಶದ ಅಭಿವೃದ್ಧಿಗೆ ಮೋದಿ ಇರಲೇಬೇಕು. ಅವರಿಗೆ ಸಂಪೂರ್ಣ ಬೆಂಬಲವಿದೆ. ಜಿಲ್ಲೆಯಲ್ಲಿ ಏನೇ ರಾಜಕಾರಣವಿದ್ದರೂ ರಾಷ್ಟ್ರಮಟ್ಟದಲ್ಲಿ ಮೋದಿಗೆ ನಮ್ಮ ಸಂಪೂರ್ಣ ಬೆಂಬಲವಿದೆ.ಎಚ್.ಡಿ. ರೇವಣ್ಣ ಶಾಸಕ
‘ನಾನು ಕಾಯುತಿದ್ದೇನೆ. ಜಿಲ್ಲೆಯ ಕೆಲವು ಅಧಿಕಾರಿಗಳು ದೇವೇಗೌಡರ ಕುಟುಂಬದ ಕಾಲ ಮುಗಿದೇ ಹೋಯಿತು ಅಂದುಕೊಂಡಿದ್ದಾರೆ. ಅವರಿಗೆಲ್ಲ ನಾ ಏನು ಎಂದು ತೋರಿಸುತ್ತೇನೆ. ಬಡ್ಡಿ ಸಮೇತ ತಿರುಗಿಸಿ ಕೊಡದಿದ್ದರೆ ದೇವೇಗೌಡರ ಮಗನೇ ಅಲ್ಲ’ ಎಂದು ಶಾಸಕ ಎಚ್.ಡಿ. ರೇವಣ್ಣ ಹೇಳಿದರು.
‘ಪಕ್ಷ ಹಾಗೂ ಕುಮಾರಸ್ವಾಮಿ ಅವರನ್ನು ಮುಗಿಸಲು ಏನೆಲ್ಲ ನಡೆದಿದೆ ಕಂಡಿದ್ದೇನೆ. 1989ರಲ್ಲಿ ಪಕ್ಷ ಸೋತಿತ್ತು. ನಂತರ ದೇವೇಗೌಡರು ಮುಖ್ಯಮಂತ್ರಿಯಾದರು ಪ್ರಧಾನಿಯಾದರು. ಇಂತಹ ಅನೇಕ ಏಳು ಬೀಳುಗಳನ್ನು ದೇವೇಗೌಡರು ಕಂಡಿದ್ದಾರೆ. ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ’ ಎಂದರು.
‘2004–05 ರಲ್ಲಿ ದ್ಯಾಪಲಾಪುರದಲ್ಲಿ ಆದ ಅನಾಹುತ ನಂತರ ಅಂದು ದೇವೇಗೌಡರ ಆದೇಶದ ಮೇರೆಗೆ ಸುಮಾರು 78 ಮನೆಗಳನ್ನು ವಿಶೇಷ ಪ್ರಕರಣದಡಿ ನಿರ್ಮಿಸಿ ಕೊಡಲಾಯಿತು’ ಎಂದರು.
‘ಜಿಲ್ಲೆಗೆ ದೇವೇಗೌಡರು ನೀಡಿರುವ ಕೊಡುಗೆ ಮರೆಯುವಂತಿಲ್ಲ. ಹೇಮಾವತಿ ಜಲಾಶಯ ನಿರ್ಮಾಣ ಸಂಬಂಧ 48 ಹಳ್ಳಿಗಳು ಮುಳುಗಡೆಯಾಯಿತು. ಆ ಎಲ್ಲ ಹಳ್ಳಿಗಳಿಗೆ ಕೋಟ್ಯಂತರ ರೂಪಾಯಿ ಪರಿಹಾರ ವಿತರಿಸಲಾಯಿತು. ಹೀಗೆ ಅನೇಕ ಯೋಜನೆಗಳು ಅಭಿವೃದ್ಧಿ ಕೆಲಸಗಳು ನಮ್ಮ ಪಕ್ಷದ ಆಡಳಿತ ಅವಧಿಯಲ್ಲಿ ಆಗಿದೆ’ ಎಂದು ನೆನಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.