ADVERTISEMENT

ಸದಾಶಿವ ಆಯೋಗದ ವರದಿ ಜಾರಿಗೊಳಿಸಿ: ಎಚ್‌.ಪಿ. ಶಂಕರ್‌ ರಾಜು ಒತ್ತಾಯ

ಮಾದಿಗ ಸಮುದಾಯದ ಮುಖಂಡ ಎಚ್‌.ಪಿ. ಶಂಕರ್‌ ರಾಜು ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 11:50 IST
Last Updated 3 ಸೆಪ್ಟೆಂಬರ್ 2020, 11:50 IST
ಎಚ್‌.ಪಿ. ಶಂಕರ್‌ರಾಜು
ಎಚ್‌.ಪಿ. ಶಂಕರ್‌ರಾಜು   

ಹಾಸನ: ಒಳಮೀಸಲಾತಿ ಅನುಷ್ಠಾನ ಕುರಿತು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ನೀಡಿರುವ ವರದಿ
ಶಿಫಾರಸ್ಸುಗಳನ್ನು ಜಾರಿಗೊಳಿಸುವ ಮೂಲಕ ಮಾದಿಗ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಡಾ. ಬಾಬು ಜಗಜೀವನ್‌ರಾಮ್‌ ಮಾದಿಗ ಮಹಾಸಭಾ ವೇದಿಕೆ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್‌.ಪಿ. ಶಂಕರ್‌ರಾಜು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

‘ಪರಿಶಿಷ್ಟ ಜಾತಿ ಒಳಗಿನ ಅಸಮಾನತೆ ಇನ್ನೂ ಜೀವಂತವಾಗಿದೆ. ರಾಜ್ಯದಲ್ಲಿ ಮಾದಿಗ ಸಮುದಾಯದವರು ರಸ್ತೆ ಬದಿಯಲ್ಲಿ ಚಪ್ಪಲಿ ಕೆಲಸ, ನಗರಸಭೆ, ಪುರಸಭೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಗ್ರಾಮಾಣ ಭಾಗದ ಜನರು ಜಮೀನು ಇಲ್ಲದೆ ಉದ್ಯೋಗಕ್ಕಾಗಿ ಪಟ್ಟಣ, ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಸಮುದಾಯಕ್ಕೆ ಅನ್ಯಾಯವಾಗಿರುವ ಬಗ್ಗೆ ಆಯೋಗದ ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಮಾದಿಗ ಸಮುದಾಯ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಸಾಕಷ್ಟು ಹಿಂದೆ ಉಳಿದಿದೆ.
ಪ್ರಭಾವಿಗಳು, ಹಣವಂತರು ಮೀಸಲಾತಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಈ ಬಗ್ಗೆ
ಗಮನಹರಿಸಬೇಕು’ ಎಂದರು.

ADVERTISEMENT

‘ಸುಪ್ರೀಂ ಕೋರ್ಟ್‌ ಇ.ವಿ.ಚಿನ್ನಯ್ಯ ಪ್ರಕರಣದಲ್ಲಿ 2005ರಲ್ಲಿ ನೀಡಿದ ತೀರ್ಪಿನ ಮರುಪರಿಶೀಲನೆ ಅಗತ್ಯ ಇದೆ. ಅದಕ್ಕಾಗಿ ಏಳು ಅಥವಾ ಅದಕ್ಕಿಂತ ಹೆಚ್ಚು ನ್ಯಾಯಮೂರ್ತಿಗಳಿರುವ ಪೀಠ ರಚಿಸಬೇಕು ಎಂದು ಐವರು ನ್ಯಾಯಮೂರ್ತಿಗಳ ಪೀಠವು ಮುಖ್ಯ ನ್ಯಾಯಮೂರ್ತಿಯವರಿಗೆ ಕೋರಿಕೆ ಸಲ್ಲಿಸಿದೆ’ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ವೇದಿಕೆ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಎ.ಟಿ. ಮಂಜುನಾಥ್‌, ಉಪಾಧ್ಯಕ್ಷ ಕೆ.ಎಚ್‌. ರಂಗಸ್ವಾಮಿ,
ನಗರಾಧ್ಯಕ್ಷ ಎಚ್‌.ಎಸ್‌. ಬಾಬು, ಶಿವಮ್ಮ ಸಾಲಿ, ಸದಾಶಿವ ಆಯೋಗದ ಸಮನ್ವಯ ಸಮಿತಿ ರಾಜ್ಯ ಕಾರ್ಯದರ್ಶಿ
ಎಸ್‌.ವಸಂತಕುಮಾರ್‌ ಲಕ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.