ಹಾಸನ: ಮುಂಗಾರು ಮಳೆ ನಿಗದಿಗಿಂತ ಮೊದಲೇ ಆರಂಭವಾಗಿದ್ದು, ಎಲ್ಲೆಡೆ ಮಳೆ ಅಬ್ಬರಿಸುತ್ತಿದೆ. ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದ್ದು, ಜಲಾಶಯದ ಒಡಲು ತುಂಬುತ್ತಿದೆ. ಇನ್ನೊಂದೆಡೆ ಹಿನ್ನೀರಿನಿಂದಾಗಿ ತಗ್ಗು ಪ್ರದೇಶದಿಂದ ಮೇಲ್ಭಾಗಕ್ಕೆ ಬಂದಿರುವ ಕಾಡಾನೆಗಳು, ಮತ್ತೆ ನಾಡಿನತ್ತ ಹೆಜ್ಜೆ ಹಾಕುವ ಆತಂಕವೂ ಎದುರಾಗುತ್ತಿದೆ.
ಮಲೆನಾಡಿನ ತಪ್ಪಲಿನಲ್ಲಿದ್ದ ಕಾಡಾನೆಗಳು, ಹೇಮಾವತಿ ಜಲಾಶಯದಿಂದ ಹಿನ್ನೀರಿನ ಪರಿಣಾಮವಾಗಿ ನಾಡಿನತ್ತ ಲಗ್ಗೆ ಇಡಲು ಆರಂಭಿಸಿದವು. ಮೂರು ದಶಕಗಳಿಂದ ಸಕಲೇಶಪುರ, ಆಲೂರು, ಬೇಲೂರು ತಾಲ್ಲೂಕಿನಲ್ಲಿ ಕಾಡಾನೆಗಳ ಉಪಟಳ ಹೆಚ್ಚುತ್ತಲೇ ಇದೆ.
ಇದೀಗ ಸಕಲೇಶಪುರ ತಾಲ್ಲೂಕಿನಲ್ಲಿ ಕಡಿಮೆಯಾಗಿರುವ ಆನೆಗಳು ಬೇಲೂರು ತಾಲ್ಲೂಕಿಗೆ ಲಗ್ಗೆ ಇಟ್ಟಿವೆ. ಕಾಫಿ ತೋಟಗಳಲ್ಲಿ ಕೆಲಸ ಮಾಡುವುದೇ ದುಸ್ತರ ಎನ್ನುವಂತಾಗಿದೆ. ಕೂಲಿ ಕೆಲಸಕ್ಕೆ ತೆರಳುವ ಕಾರ್ಮಿಕರ ಮೇಲೆಯೇ ಆನೆಗಳು ದಾಳಿ ಮಾಡುತ್ತಿವೆ.
ರೋಸಿ ಹೋದ ಅಧಿಕಾರಿಗಳು: ಕಾಡಾನೆ ದಾಳಿಯಿಂದ ಜಿಲ್ಲೆಯಲ್ಲಿ ಐದು ತಿಂಗಳಲ್ಲಿ ಆರು ಮಂದಿ ಮೃತಪಟ್ಟಿದ್ದು, ಗ್ರಾಮಸ್ಥರು, ಬೆಳೆಗಾರರ ಆಕ್ರೋಶ ಹೆಚ್ಚಾಗುತ್ತಿದೆ. ಪ್ರತಿ ಬಾರಿ ಆನೆ ದಾಳಿಯಿಂದ ಸಾವು ಸಂಭವಿಸಿದಾಗ, ಅಧಿಕಾರಿಗಳು ಗ್ರಾಮಸ್ಥರ ಆಕ್ರೋಶ ಎದುರಿಸುವಂತಾಗಿದೆ.
ಪ್ರತಿ ಬಾರಿ ಯಾರಾದರೂ ಮೃತಪಟ್ಟಾಗ ನಾವು ಬಂದು ಸಮಾಧಾನ ಮಾಡುವುದಕ್ಕೆ ಆಗುವುದಿಲ್ಲ. ಇದು ಅರಣ್ಯ ಅಧಿಕಾರಿಗಳ ಕೆಲಸ. ಆನೆ ಎಲ್ಲಿದೆ ಎಂಬುದರ ಮಾಹಿತಿಯನ್ನು ಧ್ವನಿ ವರ್ಧಕದ ಮೂಲಕ ಸುತ್ತಲಿನ ಜನರಿಗೆ ತಿಳಿಸಬೇಕು. ಇಟಿಎಫ್ ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಬಂದಿದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ಕೊಡಿ ಮೊದಲು. ಧ್ವನಿವರ್ಧಕ ಹಾಕಿಕೊಂಡು ಎಲ್ಲಿಯೋ ಒಂದು ಕಡೆ ಸುತ್ತಾಡುವುದಲ್ಲ. ಈ ಅನಾಹುತಗಳು ಮೇಲಿಂದ ಮೇಲೆ ಆಗುತ್ತಲೇ ಇದ್ದು, ಅರಣ್ಯಾಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಈಗಾಗಲೇ ಅರಣ್ಯಾಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ.
ಆನೆ ದಾಳಿಯಿಂದ ಪೀಡಿತವಾಗಿರುವ ಹಾಸನದ ಜಿಲ್ಲೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಏಳು ಬಾರಿ ಭೇಟಿ ನೀಡಿದ್ದಾರೆ. ಆದರೆ, ಇಲ್ಲಿಯವರೆಗೆ ಹೇಳಿಕೊಳ್ಳುವಂತಹ ಯಾವುದೇ ಸುಧಾರಣಾ ಕ್ರಮಗಳು ಆಗಿಲ್ಲ ಎನ್ನುವುದು ಈ ಭಾಗದ ಜನಪ್ರತಿನಿಧಿಗಳ ಆಕ್ರೋಶ.
‘ಜಿಲ್ಲೆಗೆ ಇದುವರೆಗೂ 7 ಬಾರಿ ಭೇಟಿ ನೀಡಿದ್ದೇನೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆ ನೀಡಿದ್ದಾರೆ. ಆದರೆ ಬಂದ ನಂತರ ಕ್ಷೇತ್ರದಲ್ಲಿ ಕೆಲಸ ಆಗಬಾರದೇ? ಆನೆ ಹಾವಳಿ ನಿಯಂತ್ರಣ ಆಗಬಾರದೆ? ಕೇವಲ ಬಂದು ಹೋದ ಲೆಕ್ಕ ಹೇಳಿದರೆ ಸಾಕೇ’ ಎಂದು ಶಾಸಕ ಶಾಸಕ ಸಿಮೆಂಟ್ ಮಂಜು ಪ್ರಶ್ನಿಸುತ್ತಾರೆ.
ಇಟಿಎಫ್ ತಂಡಕ್ಕೆ ಹೆಚ್ಚುವರಿಯಾಗಿ 15 ಜನ ಸರ್ಕಾರಿ ಸಿಬ್ಬಂದಿ ನೇಮಿಸಲಾಗುವುದು. 6 ವಾಹನ ಹೊಸ ಮೈಕ್ ಬಳಸಲಾಗುವುದು. 3 ಹೊಸ ತಂಡ ರಚಿಸಲಾಗುವುದುಏಡುಕೊಂಡಲು ಸಿಸಿಎಫ್
ಕೇಂದ್ರ ಸರ್ಕಾರ ಅರಣ್ಯ ಇಲಾಖೆ ಜನಪ್ರತಿನಿಧಿಗಳು ಕಾಡಾನೆ-ಮಾನವ ಸಂಘರ್ಷ ಪರಿಹಾರಕ್ಕೆ ವೈಜ್ಞಾನಿಕವಾಗಿ ಚಿಂತಿಸಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ.ಡಿ.ಸಿ.ಸಣ್ಣಸ್ವಾಮಿ ಕಾಂಗ್ರೆಸ್ ಮುಖಂಡ
‘9 ಗಂಟೆಯ ನಂತರವೇ ಕೆಲಸ ಕೊಡಿ’
ಕಾಡಾನೆ ಮತ್ತು ಮಾನವ ಮಾನವ ಸಂಘರ್ಷ ತಾಲ್ಲೂಕಿನಲ್ಲಿ ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಬೆಳಗಿನ ಜಾವ 6 ಗಂಟೆಗೆ ಕೆಲಸ ಕೊಡುವುದನ್ನು ಜಿಲ್ಲಾಧಿಕಾರಿ ನಿಷೇಧಿಸಿದ್ದಾರೆ. ಬೆಳಗಿನ ಜಾವ ಕಾಡಾನೆಗಳ ಚಲನವಲನ ಹೆಚ್ಚಿಗೆ ಇರುವುದರಿಂದ ರೈತರ ಮತ್ತು ಬೆಳೆಗಾರರ ಒಳಿತಿಗಾಗಿ ಜಿಲ್ಲಾಡಳಿತ ಈ ನಿರ್ಧಾರ ತೆಗೆದುಕೊಂಡಿದ್ದು ಎಲ್ಲ ರೈತರು ಕಾಫಿ ಬೆಳೆಗಾರರು ಬೆಳಿಗ್ಗೆ 6 ಗಂಟೆಗೆ ಕೆಲಸ ಕೊಡದೇ 9 ಗಂಟೆ ನಂತರವೇ ಕೆಲಸ ಕೊಡಬೇಕು ಎಂದು ಕಾಫಿ ಬೆಳೆಗಾರರ ಸಂಘದ ಬೇಲೂರು ತಾಲ್ಲೂಕು ಘಟಕದ ಅಧ್ಯಕ್ಷ ಅದ್ದೂರಿಕುಮಾರ್ ಕಾರ್ಯದರ್ಶಿ ಸಂಜಯ್ ಕೌರಿ ಮನವಿ ಮಾಡಿದ್ದಾರೆ.
ನಿಗದಿಯಾಗದ ಸಭೆ: ಬೇಸರ
‘ಕಾಡಾನೆ ಸಮಸ್ಯೆ ಪರಿಣಾಮಕಾರಿಯಾಗಿ ಪರಿಹರಿಸುವ ನಿಟ್ಟಿನಲ್ಲಿ ಮೇ ಅಂತ್ಯದಲ್ಲಿ ಬೆಳೆಗಾರರು ತಜ್ಞರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಭೆ ನಡೆಸಲಾಗುವುದು. ನಂತರ ಕಾಡಾನೆ ಪೀಡಿತ ಕ್ಷೇತ್ರದ ಶಾಸಕರೊಂದಿಗೆ ದೆಹಲಿಗೆ ನಿಯೋಗ ತೆರಳಿ ಕೇಂದ್ರ ಅರಣ್ಯ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು’ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಭರವಸೆ ನೀಡಿದ್ದರು. ಆದರೆ ಇದುವರೆಗೆ ಸಭೆಗೆ ದಿನಾಂಕ ನಿಗದಿಯಾಗಿಲ್ಲ ಎನ್ನುವ ಬೇಸರ ಜಿಲ್ಲೆಯ ಜನರದ್ದು. ‘ಆನೆಧಾಮದ ಹೆಸರಿನಲ್ಲಿ ಸರ್ಕಾರ ಕಾಲ ದೂಡುತ್ತಿದೆ. ಪ್ರಾಣಹಾನಿ ಪರಿಹಾರವನ್ನು ₹50 ಲಕ್ಷಕ್ಕೆ ಹೆಚ್ಚಿಸಲು ಒತ್ತಾಯಿಸಿದರೆ ₹20 ಲಕ್ಷ ನೀಡುತ್ತಿದೆ. ಸಾವುಗಳು ಹೆಚ್ಚುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ’ ಎಂದು ಬೇಲೂರು ಶಾಸಕ ಎಚ್.ಕೆ.ಸುರೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.