ಹಾಸನ: ಜಿಲ್ಲೆಯಲ್ಲಿ ಯುವಕರು ಹಾಗೂ ಮಕ್ಕಳಲ್ಲಿ ಹೃದಯಘಾತ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಸೂಕ್ತ ತಪಾಸಣೆಗೆ ಕ್ರಮ ಕೈಗೊಳ್ಳುವಂತೆ ವೈದ್ಯರಿಗೆ ನಿರ್ದೇಶನ ನೀಡಲಾಗಿದೆ ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.
ನಗರದ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ (ಹಿಮ್ಸ್) ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ, ಹಿಮ್ಸ್ ನಿರ್ದೇಶಕರು, ಹೃದಯ ತಜ್ಞರ ಜೊತೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎರಡು ವರ್ಷಗಳಲ್ಲಿ 507 ಹೃದಯಾಘಾತ ಪ್ರಕರಣ ದಾಖಲಾಗಿದ್ದು, ಇದರಲ್ಲಿ 18 ರಿಂದ 80 ವರ್ಷ ಪ್ರಾಯದ 119 ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಹೆಚ್ಚುತ್ತಿರುವ ಹೃದಯಘಾತ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಶಸ್ತ್ರಚಿಕಿತ್ಸಕರು, ಹೃದ್ರೋಗ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆ ಹಾಗೂ ತಾಲ್ಲೂಕ ಆಸ್ಪತ್ರೆಗಳಲ್ಲಿ ಹೃದಯದ ಸಮಸ್ಯೆ ಇರುವ ಜನರು ಬಂದಲ್ಲಿ ಇಸಿಜಿ ಮಾಡಿಸಬೇಕು. ಇದರಲ್ಲಿ ಸಮಸ್ಯೆ ಬಗ್ಗೆ ಮಾಹಿತಿ ದೊರೆತಲ್ಲಿ, ಟಿಎಂಟಿ, ಎಕೋ ಸೇರಿದಂತೆ ಇತರೆ ಪರೀಕ್ಷೆ ಮಾಡಬೇಕು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ, ಜಿಲ್ಲಾ ಆಸ್ಪತ್ರೆಗೆ ಮತ್ತು ಜಯದೇವ ಹೃದ್ರೋಗ ಆಸ್ಪತ್ರೆಗೆ ಶಿಫಾರಸು ಮಾಡುವಂತೆ ಸೂಚನೆ ನೀಡಿರುವುದಾಗಿ ಹೇಳಿದರು.
ಹೃದಯಘಾತ ಪತ್ತೆ ಹಚ್ಚುವ ಹಾಗೂ ಚಿಕಿತ್ಸೆ ಪೂರ್ವ ಕೈಗೊಳ್ಳಬೇಕಾದ ತಪಾಸಣಾ ಕ್ರಮಗಳ ಕುರಿತು ಜಿಲ್ಲೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿನ ನರ್ಸ್ ಸೇರಿದಂತೆ ಎಲ್ಲ ಸಿಬ್ಬಂದಿಗೆ ನುರಿತ ಹೃದ್ರೋಗ ತಜ್ಞರಿಂದ ವಿಶೇಷ ತರಬೇತಿಯನ್ನು ಕೆಲವೇ ದಿನಗಳಲ್ಲಿ ಆರಂಭಿಸಲಾಗುವುದು ಎಂದರು.
ಹೃದಯಾಘಾತ ಪ್ರಮಾಣ ತಗ್ಗಿಸಲು ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ, ಹೋಬಳಿ ಮಟ್ಟದಲ್ಲಿ ಹೃದಯ ತಪಾಸಣೆ ಶಿಬಿರ ಹಮ್ಮಿಕೊಳ್ಳುವ ನಿಟ್ಟಿನಲ್ಲೂ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಹೃದಯಘಾತ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ, ಸಿಪಿಆರ್‌ನಂತಹ ವೈದ್ಯಕೀಯ ಕ್ರಮಗಳನ್ನು ಅನುಸರಿಸುವ ಕುರಿತು ಹಿಮ್ಸ್, ಜಿಲ್ಲಾ ಆಸ್ಪತ್ರೆ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಬಗ್ಗೆಯೂ ಚಿಂತಿಸಲಾಗಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಇದರಿಂದಾಗಿ ಹೃದಯಘಾತದಂತಹ ಸಮಸ್ಯೆ ಉಲ್ಬಣಿಸುತ್ತಿದೆ. ಯೋಗ, ಧ್ಯಾನ, ಪೌಷ್ಟಿಕ ಆಹಾರ, ಕಾಲಕ್ಕೆ ತಜ್ಞ ವೈದ್ಯರ ಸಲಹೆ, ತಪಾಸಣೆಯಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಜಂಕ್ ಫುಡ್ ತಪಾಸಣೆ:
ಜಂಕ್ ಫುಡ್ ಹಾಗೂ ಹೊರಗಡೆಯ ಆಹಾರಗಳನ್ನೇ ಹೆಚ್ಚು ಬಳಕೆ ಮಾಡುತ್ತಿರುವುದು ಆರೋಗ್ಯ ಸಮಸ್ಯೆ ಹೆಚ್ಚಲು ಕಾರಣವಾಗಿದೆ. ನಗರದ ಹೋಟೆಲ್ ಹಾಗೂ ಕ್ಯಾಂಟೀನ್, ಜಂಕ್ ಫುಡ್ ತಯಾರಕ ಘಟಕಗಳಲ್ಲಿ ಆಹಾರಗಳನ್ನು ತಯಾರಿಸಲು ಬಳಸುವ ಎಣ್ಣೆ ಹಾಗೂ ಇತರೆ ಪದಾರ್ಥಗಳು ಹಾಗೂ ಸ್ಥಳದಲ್ಲಿ ಕೈಗೊಳ್ಳುವ ಸ್ವಚ್ಛತೆ ಕ್ರಮಗಳ ಬಗ್ಗೆ ಆಹಾರ ಇಲಾಖೆ, ನಗರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತಪಾಸಣೆ ನಡೆಸಲು ಸೂಚನೆ ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಅನಿಲ್, ಹಿಮ್ಸ್ ನಿರ್ದೇಶಕ ರಾಜಣ್ಣ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾಗಪ್ಪ, ಹೃದ್ರೋಗ ತಜ್ಞ ತಿರುಮಲೈ ಉಪಸ್ಥಿತರಿದ್ದರು.
ಕೋವಿಡ್ ಲಸಿಕೆ: ಗೊಂದಲ ಬೇಡ
ಕೋವಿಡ್ ಲಸಿಕೆ ಪಡೆದಿರುವವರಲ್ಲಿ ಹೃದಯಘಾತ ಸಮಸ್ಯೆ ಹೆಚ್ಚುತ್ತಿದೆ ಎಂಬ ಜನರ ಆತಂಕದ ಕುರಿತು ಉತ್ತರಿಸಿದ ಸಂಸದ ಶ್ರೇಯಸ್ ಲಸಿಕೆ ನೀಡಿ ಈಗಾಗಲೇ ಮೂರ್ನಾಲ್ಕು ವರ್ಷ ಕಳೆದಿದೆ. ಸದ್ಯಕ್ಕೆ ಈ ಬಗ್ಗೆ ಯಾವುದೇ ನಿರ್ದಿಷ್ಟವಾದ ಮಾಹಿತಿ ಇಲ್ಲ. ಈ ಬಗ್ಗೆ ಸಾರ್ವಜನಿಕರು ಅನಗತ್ಯ ಗೊಂದಲಕ್ಕೆ ಈಡಾಗಬಾರದು ಎಂದು ಸಲಹೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅನಿಲ್ ಎಚ್. ಮಾತನಾಡಿ 2020 -21ನೇ ಸಾಲಿನಲ್ಲಿ ಲಸಿಕೆ ನೀಡಲಾಗಿದೆ. ಜನರಿಗೆ ಇದರಿಂದಲೇ ಹೃದಯಘಾತ ಸಂಭವಿಸುತ್ತಿದೆ ಎಂಬ ಯಾವುದೇ ಆತಂಕ ಬೇಡ. ಜೀವನ ಶೈಲಿ ಬದಲಾವಣೆ ನಿಯಮಿತ ಆರೋಗ್ಯ ತಪಾಸಣೆ ಇಲ್ಲದಿರುವುದರಿಂದ ಈ ರೀತಿ ತೊಂದರೆ ಉಂಟಾಗುತ್ತಿದೆ ಎಂದು ಹೇಳಿದರು.
ಬೈರಾಪುರ ಟೋಲ್ ಸ್ಥಗಿತವಿಲ್ಲ:
ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶನದಂತೆ ಬೈರಾಪುರ ಬಳಿ ಟೋಲ್ ಸಂಗ್ರಹ ಕೇಂದ್ರ ತೆರೆಯಲಾಗಿದೆ. ಆದರೆ ಅಲ್ಲಿ ಪದೇ ಪದೇ ಗಲಾಟೆ ಆಗುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಆದರೆ ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹ ಸ್ಥಗಿತ ಇಲ್ಲ ಎಂದು ಸಂಸದ ಶ್ರೇಯಸ್ ಸ್ಪಷ್ಟಪಡಿಸಿದರು. ಬೈರಾಪುರ ಟೋಲ್ ಸಂಗ್ರಹಾ ಕೇಂದ್ರ ಮುಚ್ಚುವ ಹಾಗೂ ಇತರೆ ವಿಷಯಗಳ ಕುರಿತು ಮುಂದಿನ ಅಧಿವೇಶನದಲ್ಲಿ ಚರ್ಚಿಸಲಾಗುವುದು. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು. ಇಸ್ರೇಲ್‌ನಲ್ಲಿ ಸಿಲುಕಿಕೊಂಡಿರುವ ಜಿಲ್ಲೆಯ ಪ್ರವಾಸಿಗರು ಹಾಗೂ ನಾಗರಿಕರ ಕುರಿತು ಜಿಲ್ಲಾಡಳಿತದಿಂದ ಮಾಹಿತಿ ಪಡೆಯಲಾಗುತ್ತಿದೆ. ನಂತರ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಿ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.