ಹಾಸನ: ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷದ್,
ಬಜರಂಗದಳ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹಾಸನ ನಗರದ ಪೆನ್ಷನ್ ಮೊಹಲ್ಲಾ, ಟಿಪ್ಪು ನಗರ, ಚಿಪ್ಪಿನಕಟ್ಟೆ ಸುತ್ತಮುತ್ತ ಅಕ್ರಮವಾಗಿ ಸಾರ್ವಜನಿಕವಾಗಿ, ಜನ ವಸತಿ ಪ್ರದೇಶದಲ್ಲಿ ಹಾಗೂ ಜಿಲ್ಲೆಯ ವಿವಿಧ ಭಾಗಗಳಲ್ಲಿರುವ ಕಸಾಯಿಖಾನೆಗಳು ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೇ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚು ಇರುವುದರಿಂದ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಜಿಲ್ಲೆಯಲ್ಲಿ ಗೋವುಗಳನ್ನು ಕಡಿಯಲು ಅನುಮತಿ ಇರುವುದಿಲ್ಲ. ಪರವಾನಗಿ ಇಲ್ಲದಿದ್ದರೂ ಬಿಡಾಡಿ ದನಗಳನ್ನು
ಸಾಗಿಸಲಾಗುತ್ತಿದೆ. ನಿತ್ಯ 150ಕ್ಕೂ ಹೆಚ್ಚು ಗೋವುಗಳ ಮಾರಣ ಹೋಮ ನಡೆಯುತ್ತಿದೆ. ಕೊಟ್ಟಿಗೆಗಳಿಂದ ದನಗಳನ್ನು ಕದ್ದು ತಂದು ಕಸಾಯಿಖಾನೆಯಲ್ಲಿ ಕಡಿದು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಈ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳನ್ನು ಹುಟ್ಟಿಸುತ್ತದೆ. ಕೂಡಲೇ ಅಕ್ರಮ ಕಸಾಯಿಖಾನೆಗಳನ್ನು ತೆರವುಗೊಳಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷದ್–ಬಜರಂಗದಳದ ದಕ್ಷಿಣ ಪ್ರಾಂತ ಸಹ ಸಂಯೋಜಕ ರಘು, ಜಿಲ್ಲಾ ಕಾರ್ಯದರ್ಶಿ ನವೀನ್ ಕುಮಾರ್, ಕೌಶಿಕ್, ಚೇತನ್, ಪ್ರಮೋದ್, ಮಣಿ, ಸುಜಿತ್, ಮಂಜು, ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ರಾಹುಲ್ ಕಿಣಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.