
ಬಾಗೂರು (ನುಗ್ಗೇಹಳ್ಳಿ ): ‘ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಕೆರೆ–ಕಟ್ಟೆಗಳನ್ನು ತುಂಬುವುದರಿಂದ ರೈತರನ್ನು ಉಳಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಎಲ್ಲಾ ಜನಪ್ರತಿನಿಧಿಗಳು ಹೆಚ್ಚು ಗಮನ ಹರಿಸಬೇಕಿದೆ’ ಎಂದು ಆದಿಚುಂಚನಗಿರಿ ಮಹಾಮಠದ ನಿರ್ಮಲಾನಂದ ನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಹೋಬಳಿಯ ವಳಗೇರಹಳ್ಳಿ- ಅಣತಿ ಗ್ರಾಮದ ಕೆರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕ್ಷೇತ್ರದ ಶಾಸಕ ಸಿಎನ್ ಬಾಲಕೃಷ್ಣ ಅವರು ಸರ್ಕಾರದ ನೆರವಿನೊಂದಿಗೆ ತಾಲ್ಲೂಕಿನಲ್ಲಿ ಅನೇಕ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿರುವುದರಿಂದ ತಾಲ್ಲೂಕಿನ ರೈತರಿಗೆ ಹೆಚ್ಚು ಅನುಕೂಲವಾಗಿದೆ ಎಂದರು.
ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ‘ವಳಗೇನಹಳ್ಳಿ -ಅಣತಿ ಗ್ರಾಮದ ದೊಡ್ಡಕೆರೆ ಸುಮಾರು 1,000 ಎಕರೆ ಪ್ರದೇಶದಲ್ಲಿದ್ದು ಜಿಲ್ಲೆಯಲೇ ಅತಿ ದೊಡ್ಡ ಎರಡನೇ ಕೆರೆಯಾಗಿದೆ. ಕಳೆದ ಹಲವಾರು ವರ್ಷಗಳಿಂದ ನವಿಲೆ ಏತ ನೀರಾವರಿ ಯೋಜನೆಯಿಂದ ಪೈಪ್ ಲೈನ್ ಮೂಲಕ ಕೆರೆಗೆ ನೀರು ಹರಿಸಲಾಗುತ್ತಿದೆ. ಈ ತಿಂಗಳ ಕಳೆದ ವಾರ ಹೆಚ್ಚು ಮಳೆ ಆಗಿದ್ದರಿಂದ ನಿರೀಕ್ಷೆಗಿಂತ ಮುಂಚೆಯೇ ಕೆರೆ ತುಂಬಿದೆ. ತಾಲೂಕಿನಲ್ಲಿ ಪ್ರಥಮ ಆದ್ಯತೆಯಾಗಿ ಕಳೆದ ಮೂರು ಅವಧಿಗಳಿಂದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ’ ಎಂದರು.
ಪೂಜಾ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿ, ತಾಲೂಕು ಅರ್ಚಕರ ಸಂಘದ ಅಧ್ಯಕ್ಷ ಶ್ರೀಧರ್ಮೂರ್ತಿ, ಶ್ರೀ ಕಾಲಭೈರವೇಶ್ವರ ಸೇವಾ ಸಮಿತಿ ಅಧ್ಯಕ್ಷ ಬೋರ್ವೆಲ್ ರಾಮಚಂದ್ರು, ಕೃಷಿ ಪತ್ತಿನ ನಿರ್ದೇಶಕ ವಿಸಿ ಗಿರೀಶ್, ಮುಖಂಡರಾದ ಜಯರಾಮಣ್ಣ, ಎಡಿ ಶಿವೇಗೌಡ, ಹುಲಿಕೆರೆ ಸಂಪತ್ ಕುಮಾರ್, ಗಿರೀಶ್, ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕರೆ–ಕಟ್ಟೆಗಳನ್ನು ತುಂಬಿಸುವುದರಿಂದ ಆರ್ಥಿಕವಾಗಿ ರೈತರು ಸದೃಢಗೊಳ್ಳುವ ಜೊತೆಗೆ ತಾಲ್ಲೂಕು ಕೂಡ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆನಿರ್ಮಲಾನಂದ ನಾಥ ಸ್ವಾಮೀಜಿ ಆದಿಚುಂಚನಗಿರಿ ಮಹಾಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.