ADVERTISEMENT

ಹಾಸನ: ‘ಮೂಲ ಸಂಸ್ಕೃತಿ ಉಳಿಸುವುದು ನಮ್ಮ ಹೊಣೆ’

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 7:18 IST
Last Updated 6 ಫೆಬ್ರುವರಿ 2023, 7:18 IST
ಹಾಸನದ ಎನ್‌ಡಿಆರ್‌ಕೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಜಾನಪದ ಪರಿಷತ್‌ ಜಿಲ್ಲಾ ಘಟಕವನ್ನು ರಾಜ್ಯ ಘಟಕದ ಅಧ್ಯಕ್ಷ ಎಸ್‌. ಬಾಲಾಜಿ, ತಂಬೂರಿ, ಚೌಡಿಕೆ ಬಾರಿಸುವ ಮೂಲಕ ಉದ್ಘಾಟಿಸಿದರು.
ಹಾಸನದ ಎನ್‌ಡಿಆರ್‌ಕೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಜಾನಪದ ಪರಿಷತ್‌ ಜಿಲ್ಲಾ ಘಟಕವನ್ನು ರಾಜ್ಯ ಘಟಕದ ಅಧ್ಯಕ್ಷ ಎಸ್‌. ಬಾಲಾಜಿ, ತಂಬೂರಿ, ಚೌಡಿಕೆ ಬಾರಿಸುವ ಮೂಲಕ ಉದ್ಘಾಟಿಸಿದರು.   

ಹಾಸನ: ಕನ್ನಡ ಜಾನಪದ ಪರಿಷತ್ತಿನ ಉದ್ದೇಶ, ಮೂಲ ಜನಪದರನ್ನು ಗುರುತಿಸಿ ಅವರಿಗೆ ಆದ್ಯತೆ ನೀಡುವುದು. ಎಲೆಮರೆಯ ಕಾಯಿಯಂತಿರುವ ಜನಪದರು ಸಾಕಷ್ಟಿದ್ದಾರೆ. ಕಲೆ ಅವರೊಂದಿಗೆ ನಶಿಸಿ ಹೋಗಬಾರದು. ನಾಡಿನಾದ್ಯಂತ ಅಂಥವರನ್ನು ಹುಡುಕುವುದು ನಮ್ಮ ಕರ್ತವ್ಯ ಎಂದು ಜಾನಪದ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್. ಬಾಲಾಜಿ ಅಭಿಪ್ರಾಯಪಟ್ಟರು.

ನಗರದ ಎನ್‍ಡಿಆರ್‌ಕೆ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ಜಾನಪದ ಪರಿಷತ್ ಹಾಸನ ಜಿಲ್ಲಾ ಘಟಕದ ಉದ್ಘಾಟನೆ ಮತ್ತು ಪದ ಸ್ವೀಕಾರ ಕಾರ್ಯಕ್ರಮದಲ್ಲಿ ತಂಬೂರಿ ಮತ್ತು ಚೌಡಿಕೆ ನುಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಈ ರೀತಿಯ ಕಾರ್ಯಕ್ರಮಗಳು ಮೂಲ ಉದ್ದೇಶ ಹಳ್ಳಿ-ಹಳ್ಳಿಯ ಮನೆ ಮನೆಗೂ ತೆರಳಿ ಮೂಲ ಜನಪದರನ್ನು ಹುಡುಕುವುದು ಮತ್ತು ಶಾಲಾ– ಕಾಲೇಜುಗಳಿಗೆ ವಿದ್ಯಾರ್ಥಿಗಳಲ್ಲಿ ಜಾನಪದ ಸಂಸ್ಕೃತಿ ಮತ್ತು ಕಲೆ, ಆಚಾರ-ವಿಚಾರ, ಉಡುಗೆ-ತೊಡುಗೆ, ಜೀವನಶೈಲಿ ಇವುಗಳನ್ನು ಪರಿಚಯಿಸುವುದಾಗಿ ಮುಂದಿನ ದಿನಗಳಲ್ಲಿ ಜಾನಪದದ ಕುರಿತು ಅರಿವು ಮೂಡಿಸುವ ಕಾರ್ಯ ನಡೆಯಬೇಕು ಎಂದು ತಿಳಿಸಿದರು.

ADVERTISEMENT

ಶಿಕ್ಷಣ ತಜ್ಞ ಡಾ.ಆರ್. ಓಬಳೇಶಘಟ್ಟಿ ಮಾತನಾಡಿ, ಸ್ನಾತಕೋತ್ತರ ಪದವಿಯನ್ನು ಜಾನಪದದಲ್ಲಿ ತೆಗೆದುಕೊಂಡಿರುತ್ತಾರೆ. ಆದರೆ ಜಾನಪದದ ಅರಿವಿರುವುದಿಲ್ಲ. ನಮ್ಮ ಬದುಕೇ ಜಾನಪದ. ಪ್ರತಿಯೊಂದು ವಿಶ್ವವಿದ್ಯಾಲಯಗಳಲ್ಲೂ ಜಾನಪದ ಕೋರ್ಸ್‍ಗಳಿವೆ. ಆದರೆ ಯಾವುದೇ ಪ್ರಯೋಜನವಿಲ್ಲ. ನಿಜವಾದ ಜನಪದರು ಅನುಭವಿಗಳು. ಇಡೀ ಜನಪದದ ಎಲ್ಲ ಆಯಾಮ ಒಳಗೊಂಡಿರುವುದೇ ಜಾನಪದ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಎನ್‌ಡಿಆರ್‌ಕೆ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮೋಹನ್‍ಕುಮಾರ್ ಮಾತನಾಡಿ, ಇಂದಿನ ಯುವ ವಿದ್ಯಾರ್ಥಿಗಳು ನಮ್ಮ ಮೂಲ ಸಂಸ್ಕೃತಿಯನ್ನು ಮರೆಯಬಾರದು ಎಂದರು.

ಕನ್ನಡ ಜಾನಪದ ಪರಿಷತ್ ಹಾಸನ ಘಟಕದ ಅಧ್ಯಕ್ಷೆ ವಾಣಿಘಟ್ಟಿ, ಪತ್ರಕರ್ತ ಅರ್.ಪಿ. ವೆಂಕಟೇಶಮೂರ್ತಿ ಮಾತನಾಡಿದರು. ಪದಾಧಿಕಾರಿಗಳಾದ ಜಿ.ಓ. ಮಹಂತಪ್ಪ (ಗೌರವಾಧ್ಯಕ್ಷ), ವಾಣಿಘಟ್ಟಿ (ಅಧ್ಯಕ್ಷೆ), ದೊಡ್ಡಳ್ಳಿ ರಮೇಶ್ (ಕಾರ್ಯದರ್ಶಿ), ಸೋಮನಾಯಕ್ (ಜಂಟಿ ಕಾರ್ಯದರ್ಶಿ), ಶ್ರುತಿ ಕೆ.ಎ. (ಪತ್ರಿಕಾ ಕಾರ್ಯದರ್ಶಿ), ಶಾಂತಮ್ಮ (ಸಂಘಟನಾ ಕಾರ್ಯದರ್ಶಿ), ಗುರುಮೂರ್ತಿ (ಸಂಚಾಲಕ), ಭಾರತಿ ಹಾದಿಗೆ (ಸದಸ್ಯೆ) ಪದ ಸ್ವೀಕಾರ ಮಾಡಿದರು.

ತಾಲ್ಲೂಕು ಘಟಕದ ನಿಯೋಜಿತ ಅಧ್ಯಕ್ಷರಾಗಿ ವರುಣ್ (ಅರಕಲಗೂಡು), ಸೋಮೇಶ್ (ಆಲೂರು), ಲೋಕೇಶ್ (ಬೇಲೂರು), ಶಾಂತಾ ಅತ್ನಿ (ಹಾಸನ), ಮಂಜುಳ (ಅರಸೀಕೆರೆ) ಹಾಜರಿದ್ದರು. ಮುಖ್ಯ ಅತಿಥಿಗಳಾಗಿ ರಾಮನಗರ ಘಟಕದ ಅಧ್ಯಕ್ಷ ಕೆ.ಸಿ. ಕಾಂತಪ್ಪ, ಹರೀಶ್ ಅರೇಹಳ್ಳಿ ಎನ್‍ಡಿಆರ್‌ಕೆ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು, ಅಧ್ಯಾಪಕರು, ಸಾವಿತ್ರಿ ಬಿ. ಗೌಡ ಭಾಗವಹಿಸಿದ್ದರು. ದೊಡ್ಡಹಳ್ಳಿ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸೋಮನಾಯಕ ವಂದಿಸಿದರು. ಪ್ರಶಿಕ್ಷಣಾರ್ಥಿ ಶ್ರುತಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.