ADVERTISEMENT

ಜಲ ಯುದ್ಧಕ್ಕೂ ಮುನ್ನ ನೀರು ಸಂರಕ್ಷಿಸಿ

ಅಂತರ್ಜಲ ಕುರಿತ ಕಾರ್ಯಾಗಾರದಲ್ಲಿ ಎಸಿ ನಾಗರಾಜ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 12:40 IST
Last Updated 10 ಜನವರಿ 2019, 12:40 IST
ಹಾಸನದಲ್ಲಿ ಏರ್ಪಡಿಸಿದ್ದ ಅಂತರ್ಜಲ ಸಂರಕ್ಷಣೆ ಕುರಿತ ಕಾರ್ಯಗಾರದಲ್ಲಿ ಭಾಗವಹಿಸಿದ್ದ ಗ್ರಾಮ ಪಂಚಾಯಿತಿ ಸಿಬ್ಬಂದಿ
ಹಾಸನದಲ್ಲಿ ಏರ್ಪಡಿಸಿದ್ದ ಅಂತರ್ಜಲ ಸಂರಕ್ಷಣೆ ಕುರಿತ ಕಾರ್ಯಗಾರದಲ್ಲಿ ಭಾಗವಹಿಸಿದ್ದ ಗ್ರಾಮ ಪಂಚಾಯಿತಿ ಸಿಬ್ಬಂದಿ   

ಹಾಸನ : ನೀರು ನೈಸರ್ಗಿಕ ಸಂಪತ್ತು. ಇವುಗಳನ್ನು ಯಾರಿಂದಲೂ ಉತ್ಪತ್ತಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರು ಜಲ ಸಂಪತ್ತು ಸಂರಕ್ಷಿಸಲು ಮುಂದಾಗಬೇಕು ಎಂದು ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜು ಕರೆ ನೀಡಿದರು.

ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಅಂತರ್ಜಲ ಕಚೇರಿ ಆಶ್ರಯದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಆಯೋಜಿಸಿದ್ದ ಅಂತರ್ಜಲ ಸದ್ಬಳಕೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

’ಹತ್ತು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಜಲ ಸಂಪತ್ತು ಇತ್ತು. ಎಲ್ಲಾ ಕಡೆ ಉತ್ತಮ ಮಳೆ ಆಗುತ್ತಿತ್ತು, ಕೆರೆಗಳು ತುಂಬಿದ್ದವು, ನದಿಗಳು ಉಕ್ಕಿ ಹರಿಯುತ್ತಿದ್ದವು. ಆದರೆ, ಇಂದು ಪರಿಸ್ಥಿತಿ ಬದಲಾಗಿ, ನೀರಿಗೆ ಹಾಹಾಕಾರ ಉಂಟಾಗಿದೆ. ಟ್ಯಾಂಕರ್ ಮೂಲಕ ಕುಡಿಯುವ ನೀರು ನೀಡುವ ಪೂರೈಕೆ ಮಾಡುವ ಸ್ಥಿತಿ ಇದೆ. ಕೆರೆಗಳು ಒಣಗಿವೆ, 800, 1000 ಅಡಿ ಆಳ ಕೊರೆದರೂ ನೀರು ಸಿಗುತ್ತಿಲ್ಲ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

’ಅಂತರ್ಜಲ ಅತಿ ಬಳಕೆ ಮಾಡುವ ರಾಜ್ಯದ 43 ತಾಲ್ಲೂಕುಗಳಲ್ಲಿ ಜಿಲ್ಲೆಯ ಅರಸೀಕೆರೆ ಸೇರಿದೆ. ಬರ ಪೀಡಿತ ಅರಸೀಕೆರೆಯ ದೊಡ್ಡ ಕೆರೆಗಳಲ್ಲಿ ನೀರಿಲ್ಲ. ಕೆರೆಗಳಲ್ಲಿ ಜಾಲಿ ಮುಳ್ಳಿನ ಗಿಡಗಳು ಬೆಳೆದಿವೆ. ಹಾಗಾಗಿ ತಾಲ್ಲೂಕಿನಲ್ಲಿ ಕೊಳವೆ ಬಾವಿ ಕೊರೆಯುವುದನ್ನು ನಿಷೇಧಿಸಲಾಗಿದೆ. ಉಪವಿಭಾಗಾಧಿಕಾರಿ ಹಾಗೂ ತಾಲ್ಲೂಕು ಮಟ್ಟದ ಸಮಿತಿ ಅನುಮತಿ ಪಡೆದು ಕೊಳವೆಬಾವಿ ಕೊರೆಸಬೇಕು. ಸುತ್ತಮುತ್ತ 500 ಮೀಟರ್‌ ದೂರದಲ್ಲಿ ಯಾವುದಾದರೂ ಕೊಳವೆ ಬಾವಿ ಇದ್ದರೆ ಅನುಮತಿ ನೀಡಲಾಗುವುದಿಲ್ಲ. ಈ ನಿಯಮ ಹಾಸನ ನಗರಕ್ಕೂ ಅನ್ವಯವಾಗಿದೆ’ ಎಂದು ತಿಳಿಸಿದರು.

‘ಜಲ ಯುದ್ಧ ಆರಂಭವಾಗುವ ಮೊದಲೇ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನೀರಿನ ಸಂರಕ್ಷಣೆಗೆ ಮುಂದಾಗಬೇಕು. ಕೆರೆಗಳು ಹೂಳೆತ್ತುವುದು, ಮನೆ ಹಾಗೂ ಕಟ್ಟಡಗಳಲ್ಲಿ ಮಳೆನೀರು ಸಂಗ್ರಹ ಅಳವಡಿಸಿಕೊಳ್ಳುವುದು, ಲಭ್ಯವಿರುವ ನೀರನ್ನು ಮಿತವಾಗಿ ಬಳಸುವುದು ಹಾಗೂ ಗಿಡ, ಮರಗಳನ್ನು ಬೆಳೆಸಬೇಕು. ಓಡುವ ನೀರನ್ನು ನಡೆಯುವಂತೆ, ನಡೆಯುವ ನೀರನ್ನು ನಿಲ್ಲುವಂತೆ, ನಿಂತ ನೀರನ್ನು ಭೂಮಿಯಲ್ಲಿ ಇಂಗುವಂತೆ ಮಾಡಬೇಕು. ಗ್ರಾಮ ಪಂಚಾಯಿತಿಯಿಂದ ನೀಡುವ ನೀರನ್ನು ಮಿತವಾಗಿ ಬಳಸುವಂತೆ ಜನರಲ್ಲಿ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಅಂತರ್ಜಲ ಇಲಾಖೆ ಹಿರಿಯ ಭೂ ವಿಜ್ಞಾನಿ ಎಚ್.ಸುಧಾ ಮಾತನಾಡಿ, ನೀರನ್ನು ಅತ್ಯಂತ ಮಿತವಾಗಿ ಬಳಕೆ ಮಾಡಬೇಕು. ಅಂತರ್ಜಲ ಮಟ್ಟ ಹೆಚ್ಚಳಕ್ಕೆ ವಿವಿಧ ಇಲಾಖೆಗಳಲ್ಲಿ ಅನೇಕ ಯೋಜನೆಗಳಿದ್ದು ರೈತರು ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಅಂತರ್ಜಲ ಸಂರಕ್ಷಣೆ ಕುರಿತು ಕಿರು ಹೊತ್ತಿಗೆ ಬಿಡುಗಡೆ ಮಾಡಲಾಯಿತು. ಸಂಪನ್ಮೂಲ ವ್ಯಕ್ತಿ ಡಾ.ಬಸವರಾಜ್ ಸಿಂಪಿ, ಬೆಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೆ.ಎಸ್.ವೀರಶೇಖರ್ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.