
ಹಾಸನ: ಬೆಳ್ಳಿ ಹಬ್ಬ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಜೆಡಿಎಸ್ ಶನಿವಾರ (ಜ.24) ನಗರದಲ್ಲಿ ಬೃಹತ್ ಸಮಾವೇಶ ಆಯೋಜಿಸಿದ್ದು, ಸಿದ್ಧತೆ ಬಹುತೇಕ ಪೂರ್ಣಗೊಂಡಿವೆ.
ನಗರದ ಬೂವನಹಳ್ಳಿ ಬಳಿಯ ಹುಡಾ ಹೊಸ ಬಡಾವಣೆಯಲ್ಲಿ ಬೃಹತ್ ವೇದಿಕೆ ಸಜ್ಜುಗೊಳಿಸಲಾಗಿದೆ. ನಗರ ಹಾಗೂ ಜಿಲ್ಲೆಯ ಎಲ್ಲ ಕಡೆಗಳಿಂದ ಬರುವ ಜನರಿಗೆ ಈಗಾಗಲೇ 1 ಲಕ್ಷ ಕುರ್ಚಿಗಳನ್ನು ಹಾಕಲಾಗಿದ್ದು, ಹೆಚ್ಚುವರಿಯಾಗಿ 10 ಸಾವಿರ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಆಯೋಜಕರ ಪ್ರಕಾರ ಸುಮಾರು 1 ರಿಂದ ಒಂದೂವರೆ ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಈ ಮೂಲಕ ಶಕ್ತಿ ಪ್ರದರ್ಶನ ಮಾಡಲು ದಳಪತಿಗಳು ಅಣಿಯಾಗಿದ್ದಾರೆ. ಸ್ಥಳೀಯ ನಾಯಕರ ಜೊತೆಗೆ ರಾಜ್ಯದ ವಿವಿಧೆಡೆಯಿಂದಲೂ ಜೆಡಿಎಸ್ ನಾಯಕರು ಬರುವ ನಿರೀಕ್ಷೆ ಇದೆ.
ಸಮಾವೇಶದಲ್ಲಿ ಭಾಗಿಯಾದ ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ನಾಲ್ಕು ಬೃಹತ್ ಫುಡ್ ಕೌಂಟರ್ ತೆರೆಯಲಾಗಿದೆ. ಸುಮಾರು 2 ಸಾವಿರಕ್ಕೂ ಹೆಚ್ಚು ಅಡುಗೆ ಭಟ್ಟರು ಹಾಗೂ ಸಹಾಯಕರನ್ನು ನಿಯೋಜನೆ ಮಾಡಲಾಗಿದೆ. ಒಂದೊಂದು ಕೌಂಟರ್‌ನಲ್ಲಿ ತಲಾ 20 ಸಾವಿರ ಮಂದಿಗೆ ಭೋಜನ ಮಾಡುವ ವ್ಯವಸ್ಥೆ ಮಾಡಲಾಗಿದೆ.
ಸಮಾವೇಶಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಜನರನ್ನು ಕರೆದು ತರಲು 1,300ಕ್ಕೂ ಹೆಚ್ಚು ವಾಹನ ವ್ಯವಸ್ಥೆ ಮಾಡಲಾಗಿದೆ. 950 ಕೆಎಸ್‌ಆರ್‌ಟಿಸಿ ಬಸ್ ಹಾಗೂ 300 ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿದೆ.
ಲೋಕಸಭೆ ಚುನಾವಣೆಯ ನಂತರ ಜಿಲ್ಲೆಯಲ್ಲಿ ನಡೆಯುತ್ತಿರುವ ಜೆಡಿಎಸ್ ಬೃಹತ್ ಸಮಾವೇಶ ಇದಾಗಿದ್ದು, ನಗರದ ತುಂಬೆಲ್ಲ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಬೃಹತ್ ಅಳ, ಎತ್ತರದ ಫ್ಲೆಕ್ಸ್, ಕಟೌಟ್‌ಗಳು ರಾರಾಜಿಸುತ್ತಿವೆ. ಜೆಡಿಎಸ್ ಬ್ಯಾನರ್‌ಗಳು ಗಮನ ಸೆಳೆಯುತ್ತಿವೆ.
ಪೊಲೀಸರಿಗೆ ತರಬೇತಿ: ಹಲವು ತಿಂಗಳುಗಳ ಬಳಿಕ ಜಿಲ್ಲೆಯಲ್ಲಿ ಜೆಡಿಎಸ್‌ನಿಂದ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, 2 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಆದ್ದರಿಂದ ಜಿಲ್ಲಾ ಪೊಲೀಸ್ ಇಲಾಖೆಯಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಬಂದೋಬಸ್ತ್‌ಗಾಗಿ ಸುಮಾರು 1,400 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಕ್ಕಪಕ್ಕದ ಜಿಲ್ಲೆಯಿಂದಲೂ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ.
ಎಸ್ಪಿ ಶುಭನ್ವಿತಾ, ಎಎಸ್ಪಿಗಳಾದ ತಮ್ಮಯ್ಯ, ಶ್ರೀನಿಧಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು, ಸಮಾವೇಶದ ಸ್ಥಳದಲ್ಲಿ ಶುಕ್ರವಾರ ಸಿಬ್ಬಂದಿಗೆ ಅಗತ್ಯ ಮಾಹಿತಿ ನೀಡಿದರು.
ಹರದಹಳ್ಳಿ ದೇವೇಶ್ವರಿಗೆ ದೇವೇಗೌಡರ ಪೂಜೆ: ಸಮಾವೇಶದ ಕೇಂದ್ರ ಬಿಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಶನಿವಾರ ಬೆಳಿಗ್ಗೆ ಬೆಂಗಳೂರುದಿಂದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಹುಟ್ಟೂರು ಹರದನಹಳ್ಳಿಗೆ ಬರಲಿದ್ದು, ಕುಲದೈವ ದೇವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ 11 ಗಂಟೆಗೆ ಸಮಾವೇಶಕ್ಕೆ ಬರಲಿದ್ದಾರೆ.
ಸಮಾವೇಶದ ಸಂದರ್ಭದಲ್ಲಿ ದೇವೇಗೌಡರು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ, ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ರ‍್ಯಾಂಪ್ ಮೇಲೆ ಸಾಗಲು ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಬ್ಯಾಟರಿ ಚಾಲಿತ ಗಾಲಿ ಕುರ್ಚಿಯ ವ್ಯವಸ್ಥೆ ಮಾಡಲಾಗಿದೆ.
ಕಾಂಗ್ರೆಸ್ ನಾಯಕರಲ್ಲಿ ಹತಾಶೆ: ಸ್ವರೂಪ್ ಬೃಹತ್ ಮಟ್ಟದಲ್ಲಿ ಸಮಾವೇಶ ಹಮ್ಮಿಕೊಂಡಿರುವುದರಿಂದ ಜಿಲ್ಲೆಯ ಕಾಂಗ್ರೆಸ್ ನಾಯಕರಲ್ಲಿ ಹತಾಶೆ ಮನೋಭಾವ ಮೂಡಿದ್ದು ಹೀಗಾಗಿ ಈ ರೀತಿಯ ಹಾಸ್ನಾಸ್ಪದ ಹೇಳಿಕೆ ನೀಡುತ್ತಿದ್ದಾರೆ ಎಂದು ಶಾಸಕ ಸ್ವರೂಪ್ ಪ್ರಕಾಶ್ ತಿರುಗೇಟು ನೀಡಿದರು. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಪ್ರತ್ಯೇಕವಾಗಿ ಹಾಸನದಲ್ಲಿ ಸಮಾವೇಶ ಮಾಡುತ್ತಿದೆ ಎಂಬ ಸಂಸದ ಶ್ರೇಯಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಸಂಸದರು ಇಂತಹ ಹೇಳಿಕೆ ನೀಡುವ ಮುನ್ನ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷದ ನಾಯಕರೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದರು ಎಂಬುದನ್ನು ಪರಾಮರ್ಶೆ ಮಾಡಿಕೊಳ್ಳಲಿ ಎಂದರು. ಅಹಿಂದ ಸಮಾವೇಶದ ಪ್ರತಿಯಾಗಿ ಜಿಲ್ಲೆಯಲ್ಲಿ ಜನತಾ ಸಮಾವೇಶ ಹಮ್ಮಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಜೆಡಿಎಸ್‌ಗೆ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಮಾವೇಶದ ಮೂಲಕ ಬೆಳ್ಳಿ ಹಬ್ಬದ ಸಂಭ್ರಮ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಜೆಡಿಎಸ್ ಎಂದಿಗೂ ಎನ್‌ಡಿಎ ಮೈತ್ರಿಕೂಟದೊಂದಿಗೆ ಇರಲಿದ್ದು ಇದರಲ್ಲಿ ಯಾವುದೇ ಗೊಂದಲ ಬೇಡ. ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮುಂದುವರಿಯಲಿದ್ದು ಪಕ್ಷದ ತೀರ್ಮಾನದಂತೆ ಹಾಸನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು. ‘ಇತ್ತೀಚೆಗೆ ಕಾಂಗ್ರೆಸ್‌ನವರು ಜಿಲ್ಲೆಯಲ್ಲಿ ಎರಡು ಸಮಾವೇಶ ಮಾಡಿದ್ದರು. ಆ ಸಮಾವೇಶಗಳಲ್ಲಿ ನಾನು ಭಾಗವಹಿಸಿರಲಿಲ್ಲ ಕಾಂಗ್ರೆಸ್‌ನಿಂದ ಜಿಲ್ಲೆಗೆ ಯಾವುದೇ ಅಭಿವೃದ್ಧಿ ಆಗಿಲ್ಲ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಹಾಗೂ ಎಚ್.ಡಿ. ರೇವಣ್ಣ ಸಚಿವರಾಗಿದ್ದ ಅವಧಿಯಲ್ಲಿ ಜಿಲ್ಲೆಯು ಅಭಿವೃದ್ಧಿ ಕಂಡಿದ್ದು ಈಗ ಜಿಲ್ಲೆಗೆ ಅಗತ್ಯ ಅನುದಾನ ಬಿಡುಗಡೆಯಾಗಿಲ್ಲ. ಈ ಕುರಿತು ಕಾಂಗ್ರೆಸ್ ಶಾಸಕರಲ್ಲಿಯೂ ಅಸಮಾಧಾನವಿದೆ’ ಎಂದರು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್. ದ್ಯಾವೇಗೌಡ ಮಾಜಿ ಮೇಯರ್ ಗಿರೀಶ್ ಚನ್ನವೀರಪ್ಪ ಮಾಧ್ಯಮ ವಕ್ತಾರ ರಘು ಹೊಂಗೆರೆ ಸೇರಿದಂತೆ ಇತರೆ ಮುಖಂಡರು ಹಾಜರಿದ್ದರು.