ADVERTISEMENT

ಜೆಡಿಎಸ್‌ ಜಲಧಾರೆ ರಥಯಾತ್ರೆ ಇಂದಿನಿಂದ

ಹೊಳೆನರಸೀಪುರ ತಾಲ್ಲೂಕಿನ ಶ್ರೀರಾಮದೇವರ ಕಟ್ಟೆಯಿಂದ ಆರಂಭ: ರೇವಣ್ಣ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 15:16 IST
Last Updated 15 ಏಪ್ರಿಲ್ 2022, 15:16 IST
ರೇವಣ್ಣ
ರೇವಣ್ಣ   

ಹಾಸನ: ‘ನೀರಾವರಿ ವಿಚಾರಗಳನ್ನು ಮುಂದಿಟ್ಟುಕೊಂಡು ಹಮ್ಮಿಕೊಂಡಿರುವ ‘ಜನತಾ ಜಲಧಾರೆ’ ರಥಯಾತ್ರೆ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಶ್ರೀರಾಮದೇವರ ಕಟ್ಟೆಯಿಂದ ಆರಂಭವಾಗಲಿದೆ’ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ರಾಜ್ಯದ ನೀರಾವರಿ ಯೋಜನೆಗಳು ಸಂಪೂರ್ಣವಾಗಿ ಜಾರಿಯಾಗಿಲ್ಲ. ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ 31 ಜಿಲ್ಲೆಗಳ 184 ವಿಧಾನಸಭಾ ಕ್ಷೇತ್ರಗಳಲ್ಲಿ ಜಲಧಾರೆ ರಥಯಾತ್ರೆ ಸಾಗಿ ಬರಲಿದೆ. ಶನಿವಾರ ಏಕಕಾಲಕ್ಕೆ 15 ಕಡೆಗಳಲ್ಲಿ ಯಾತ್ರೆಗೆ ಚಾಲನೆ ದೊರೆಯಲಿದೆ. ಆರು ದಿನಗಳ ಬಳಿಕ ಜಲಯಾತ್ರೆ ಬೆಂಗಳೂರು ತಲುಪಲಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಶ್ರೀರಾಮದೇವರ ಕಟ್ಟೆಯ ಹೇಮಾವತಿ ನದಿಯಿಂದ ಹೊರಡುವ ಯಾತ್ರೆ ಹೊಳೆನರಸೀಪುರ, ಅರಕಲಗೂಡು, ಗೊರೂರು ಅಣೆಕಟ್ಟೆ, ಆಲೂರು, ವಾಟೆಹೊಳೆ ಜಲಾಶಯ, ಬಿಕ್ಕೋಡು, ಬೇಲೂರು, ಯಗಚಿ ಡ್ಯಾಂ, ಹಳೇಬೀಡು, ಕಲ್ಕೆರೆ, ಹಾಸನ, ಚನ್ನರಾಯಪಟ್ಟಣ, ಹಿರೀಸಾವೆ, ಆದಿಚುಂಚನಗಿರಿ, ತುರುವೇಕೆರೆ, ತುಮಕೂರು ಗ್ರಾಮಾಂತರ, ಯಡಿಯೂರು, ಮಾರ್ಕೋನಹಳ್ಳಿ ಅಣೆಕಟ್ಟು, ಮಂಗಳ ಜಲಾಶಯದಿಂದ ಕುಣಿಗಲ್ ತಲುಪಲಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ರಾಜ್ಯದಲ್ಲಿ ನೀರಾವರಿ ಯೋಜನೆಗೆ ಎಚ್.ಡಿ. ದೇವೇಗೌಡ ಮುಖ್ಯಮಂತ್ರಿಯಾಗಿದ್ದಾಗ ಒತ್ತು ನೀಡಿದ್ದರು. ರಾಜ್ಯದ ಹದಿನೈದುಕಡೆಗಳಿಂದ ನಡೆಯಲಿರುವ ಜನತಾ ಜಲಧಾರೆ ಯಾತ್ರೆ ಅಂಗವಾಗಿ ಜಿಲ್ಲೆಯಒಂದೊಂದು ಜಲಾಶಯ ವ್ಯಾಪ್ತಿಯಲ್ಲಿ ಸಮಾವೇಶ ನಡೆಸಲಾಗುವುದು. ಏ.20ರಂದು ಹಾಸನದಲ್ಲಿ ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಈ ಯಾತ್ರೆ ಸಾಗಲಿದೆ’ ಎಂದು ಹೇಳಿದರು.‌

‘ಎಚ್‌.ಡಿ.ಕುಮಾರಸ್ವಾಮಿ ಜಲಧಾರೆ ಯಾತ್ರೆ ಘೋಷಣೆ ಮಾಡುತ್ತಿದ್ದಂತೆಯೇರಾಜ್ಯದಲ್ಲಿ ಬಿರುಗಾಳಿ ಮಳೆ ಶುರುವಾಯಿತು. ಅದೇ ರೀತಿ ಜೆಡಿಎಸ್ಬಿರುಗಾಳಿಯಂತೆ ಮೇಲೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆ.ಎಸ್.ಈಶ್ವರಪ್ಪ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಪಾಪ, ಈಶ್ವರಪ್ಪ ಅವರ ರಾಜೀನಾಮೆ ಬಗ್ಗೆ ನಾನು ಮಾತಾಡಲ್ಲ. ಅವರು ತಪ್ಪು ಮಾಡಿದ್ದಾರೋ, ಬಿಟ್ಟಿದ್ದಾರೋ ಗೊತ್ತಿಲ್ಲ. ತನಿಖೆ ಮುಗಿಯುವವರೆಗೆ ಏನನ್ನೂ ಹೇಳಲ್ಲ’ ಎಂದರು.

‘ಕೆಲ ಕಾಂಗ್ರೆಸ್ ಮುಖಂಡರ ಮೇಲೆ ಹತ್ತಿ ಕುಣಿಯುತ್ತಿದ್ದಾರೆ. ಅವರ ಕಾಲದಲ್ಲಿಏನೆಲ್ಲಾ ನಡೆದಾಗ ಸುಮ್ಮನಿದ್ದರು’ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದರು.

‘ಆತ್ಮಹತ್ಯೆ ಮಾಡಿಕೊಂಡು ಗುತ್ತಿಗೆದಾರ ಸಂತೋಷ್ ಪಾಟೀಲ ಕುಟುಂಬಕ್ಕೆ ಸರ್ಕಾರ ನೆರವು ನೀಡಬೇಕು. ಅವರು ಕಾಮಗಾರಿ ಮಾಡಿದ್ದರೆ ಅದರ ಬಿಲ್ ಪಾವತಿ ಮಾಡಬೇಕು’ ಎಂದು ಆಗ್ರಹಿಸಿದರು.

ಬೇಲೂರು ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ‘ರಣಘಟ್ಟ ಯೋಜನೆ ಕಾಮಗಾರಿ ಶುರುವಾಗಿದ್ದು, ಸುರಂಗ ಕೆಲಸ ನಡೆಯುತ್ತಿದೆ. ಒಂದೂವರೆ ವರ್ಷದಲ್ಲಿ ಕೆಲಸ ಪೂರ್ಣಗೊಳ್ಳಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.