ADVERTISEMENT

ಜೆಡಿಎಸ್‌ ವಿರುದ್ಧ ರಾಜ್ಯಪಾಲರಿಗೆ ದೂರು: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 16:08 IST
Last Updated 13 ಫೆಬ್ರುವರಿ 2019, 16:08 IST
ಗಾಯಾಳು ರಾಹುಲ್‌ ಆರೋಗ್ಯ ವಿಚಾರಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ.
ಗಾಯಾಳು ರಾಹುಲ್‌ ಆರೋಗ್ಯ ವಿಚಾರಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ.   

ಹಾಸನ: ಶಾಸಕ ಪ್ರೀತಂ ಜೆ.ಗೌಡ ಅವರ ನಿವಾಸದ ಮೇಲೆ ಜೆಡಿಎಸ್ ಕಾರ್ಯಕರ್ತರು ದಾಳಿ ನಡೆಸಿದನ್ನು ಖಂಡಿಸಿ ಗುರುವಾರ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಗುರುವಾರ ಬೆಳಿಗ್ಗೆ ಎಲ್ಲಾ ಶಾಸಕರೊಂದಿಗೆ ರಾಜ್ಯಪಾಲರನ್ನು ಭೇಟಿಯಾಗಿ, ‘ರಾಜ್ಯದಲ್ಲಿ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರಿಗೆ ರಕ್ಷಣೆ ಇಲ್ಲ’ ಎಂದು ದೂರು ನೀಡಲಾಗುವುದು. ಇದನ್ನು ಕೇಂದ್ರ ಗೃಹ ಸಚಿವ ರಾಜನಾಥಸಿಂಗ್ ಅವರಿಗೂ ಕಳುಹಿಸಲಾಗುವುದು ಎಂದರು.

15 ಹೆಚ್ಚು ಶಾಸಕರೊಂದಿಗೆ ಬುಧವಾರ ರಾತ್ರಿ ಶಾಸಕ ಪ್ರೀತಂ ಗೌಡ ಅವರ ನಿವಾಸಕ್ಕೆ ಭೇಟಿ ನೀಡಿ, ಶಾಸಕರ ತಂದೆ- ತಾಯಿಗೆ ಧೈರ್ಯ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 300 ಕ್ಕೂ ಹೆಚ್ಚು ಜನರು ಶಾಸಕರ ನಿವಾಸ ಬಳಿ ಬಂದು ದಾಳಿ ನಡೆಸಲು ಮುಂದಾದರೂ ಪೊಲೀಸರು ರಕ್ಷಣೆ ನೀಡಿಲ್ಲ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿಯೇ ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರ ಗೂಂಡಾಗಿರಿ ನಡೆಯುತ್ತಿದೆ. ಪ್ರೀತಂ ಗೌಡ ಶಾಸಕನಾಗಿರುವುದನ್ನು ಸಹಿಸದೆ ಬೆದರಿಸುವ ಕುತಂತ್ರ ನಡೆಯುತ್ತಿದೆ. ಇಂಥ ಬೆದರಿಕೆಗೆ ಜಗ್ಗುವುದಿಲ್ಲ. 37 ಶಾಸಕರಿರುವ ಪ್ರಾದೇಶಿಕ ಪಕ್ಷ ನಮ್ಮದಲ್ಲ. 104 ಶಾಸಕರಿರುವ ರಾಷ್ಟೀಯ ಪಕ್ಷ ನಮ್ಮದು’ ಎಂದು ತಿರುಗೇಟು ನೀಡಿದರು.

ADVERTISEMENT

‘ರಾಜಕೀಯದಲ್ಲಿ ಬೆಳೆಯುತ್ತಿರುವ ಪ್ರೀತಂಗೌಡ ಅವರನ್ನು ಈಗಲೇ ಚಿವುಟಿ ಹಾಕಬೇಕೆಂದು ಜೆಡಿಎಸ್ ನವರು ಗೂಂಡಾಗಿರಿ ಮಾಡಿ ಹೆದರಿಸುತ್ತಿದ್ದಾರೆ. ಇದಕ್ಕೆ ಪೊಲೀಸರ ಕುಮ್ಮಕ್ಕೂ ಇದೆ. ಇದೇನು ಪೊಲೀಸ್ ರಾಜ್ಯವೇ ? ಗೂಂಡಾ ರಾಜ್ಯವೇ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಆರ್.ಅಶೋಕ್ ಮಾತನಾಡಿ, ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ7 ತಿಂಗಳಲ್ಲೇ ಗೂಂಡಾಗಿರಿ ಆರಂಭಿಸಿರುವುದು ನಾಚಿಕೆಗೇಡು. ರಾಜ್ಯದ ಯಾವ ಮೂಲೆಯಲ್ಲಿ ಒಬ್ಬ ಬಿಜೆಪಿ ಕಾರ್ಯಕರ್ತನಿಗೆ ಬೆದರಿಕೆ, ಹಲ್ಲೆ ನಡೆಸಿದರೂ ಯಡಿಯೂರಪ್ಪ ನೇತೃತ್ವದಲ್ಲಿ ಸಿಂಹ ಘರ್ಜನೆ ಮೊಳಗಲಿದೆ. ರಾಜ್ಯದಲ್ಲಿ ಸರ್ಕಾರ ಬದುಕಿದೆಯಾ ಎಂದು ರಾಜ್ಯಪಾಲರನೇ ಕೇಳುತ್ತೇವೆ. ಪ್ರೀತಂಗೌಡ ತಪ್ಪು ಮಾಡಿದ್ದರೆ ವಿಧಾನಸಭೆಯಲ್ಲಿಯೇ ಜೆಡಿಎಸ್‌ನವರು ಮಾತನಾಡಬಹುದಿತ್ತು. ಅದನ್ನು ಬಿಟ್ಟು ಶಾಸಕ ನಿವಾಸ ಮೇಲೆ ದಾಳಿ ನಡೆಸುವುದು ಸರಿಯೇ ? ಈ ಬಗ್ಗೆ ಸ್ಪೀಕರ್‌ಗೆ ಮನವಿ ಸಲ್ಲಿಸಿ ಶಾಸಕರ ರಕ್ಷಣೆಗೆ ಬರಬೇಕೆಂದು ಮನವಿ ಮಾಡುತ್ತೇವೆ’ ಎಂದರು.

ಗೋವೀಂದಕಾರಜೋಳ, ಬೋಪಯ್ಯ ಮಾತನಾಡಿ, ಕರ್ನಾಟಕ ಗೂಂಡಾ ರಾಜ್ಯವಾಗುತ್ತಿದೆ. ಪೊಲೀಸರು ಕಾನೂನಿನಂತೆ ನಡೆದುಕೊಳ್ಳಬೇಕೇ ಹೊರತು, ಆಡಳಿತ ಪಕ್ಷದ ಕಾರ್ಯಕರ್ತರಂತೆ ನಡೆದುಕೊಳ್ಳಬಾರದು ಎಂದು ಹೇಳಿದರು.
ರೇಣುಕಾಚಾರ್ಯ, ಸಿ.ಟಿ.ರವಿ ಶಾಸಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.