ಸಾಂದರ್ಭಿಕ ಚಿತ್ರ
– ಐ ಸ್ಟಾಕ್ ಚಿತ್ರ
ಹಾಸನ: ಹೊಳೆನರಸೀಪುರ ತಾಲ್ಲೂಕಿನ ತಾತನಹಳ್ಳಿ ಗ್ರಾಮದಲ್ಲಿ ಮನೆಯ ಹೆಂಚುಗಳನ್ನು ತೆಗೆದು ಬೀರುವಿನಲ್ಲಿಟ್ಟಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಹಾಗೂ ನಗದು ಸೇರಿದಂತೆ ₹14 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ.
ಗ್ರಾಮದ ರೇಣುಕೇಶ ಅವರು ಹೊಳೇನರಸೀಪುರದಲ್ಲಿ ಹೊಸ ಮನೆಯನ್ನು ಕಟ್ಟುತ್ತಿದ್ದು, ಮಂಗಳವಾರ ಬೆಳಿಗ್ಗೆ ಗ್ರಾಮದ ಮನೆಯ ಬೀಗ ಹಾಕಿಕೊಂಡು ಹೋಗಿದ್ದರು. ಹೊಳೇನರಸೀಪುರದಲ್ಲಿ ಕೆಲಸ ಮುಗಿಸಿಕೊಡು ಸಂಜೆ ಮನೆಗೆ ಬಂದು ನೋಡಿದಾಗ, ಮನೆಯ ಹಿಂಬಾಗಿಲು ತೆರೆದಿತ್ತು. ಅಟ್ಟದ ಬಳಿ ನೋಡಿದಾಗ, ಮನೆಯ ಹೆಂಚುಗಳನ್ನು ತೆಗೆದು ಕಳ್ಳರು ಒಳ ನುಗ್ಗಿದ್ದರು. ಕಬ್ಬಿಣದ ಬೀರುವನ್ನು ಒಡೆದು, ಲಾಕರ್‌ನಲ್ಲಿ ಇಟ್ಟಿದ್ದ ₹12.18 ಲಕ್ಷ ಮೌಲ್ಯದ 203 ಗ್ರಾಂ ಚಿನ್ನಾಭರಣ, ₹1.40 ಲಕ್ಷ ಮೌಲ್ಯದ ಬೆಳ್ಳಿಯ ಆಭರಣ ಹಾಗೂ ₹80ಸಾವಿರ ನಗದು ಕಳವು ಮಾಡಲಾಗಿದೆ. ಹಳ್ಳಿಮೈಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾರ್‌ನಲ್ಲಿ ಹಣ, ಹೆಂಡ ಕಳವು
ಹಾಸನ: ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಗ್ರಾಮದ ಬಾರ್‌ಗೆ ನುಗ್ಗಿರುವ ಕಳ್ಳರು, ಹಣ ಮತ್ತು ಮದ್ಯದ ಬಾಟಲಿ ಕಳವು ಮಾಡಿದ್ದಾರೆ.
ಲೋಕೇಶ್ ಹಾರನಹಳ್ಳಿ ಗ್ರಾಮದ ಕ್ರಿಸ್ಟಲ್ ಬಾರ್ ಅಂಡ್ ರೆಸ್ಟೋರೆಂಟ್ ಕ್ಯಾಷಿಯರ್ ಆಗಿದ್ದು, ಜೂನ್ 9 ರಂದು ರಾತ್ರಿ ಬಾಗಿಲು ಹಾಕಿಕೊಂಡು ಮನೆಗೆ ತೆರಳಿದ್ದರು. ಜೂನ್ 10 ರಂದು ಬಂದು ನೋಡಿದಾಗ, ಕಳ್ಳರು ಬಾಗಿಲಿಗೆ ಹಾಕಿದ್ದ ಬೀಗ ಮುರಿದಿದ್ದರು. ಕ್ಯಾಷ್ ಕೌಂಟರ್‌ನಲ್ಲಿದ್ದ ₹67ಸಾವಿರ ನಗದು, ₹10ಸಾವಿರ ಮೌಲ್ಯದ ಎನ್‌ವಿಆರ್, ₹1,825 ಮೌಲ್ಯದ 750 ಎಂಎಲ್‌ನ ಒಂದು ಬಾಟಲಿಯನ್ನು ಕಳ್ಳತನ ಮಾಡಲಾಗಿದೆ. ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ ಕಳವಿಗೆ ಯತ್ನಿಸಿದವನಿಗೆ ಥಳಿತ
ಹಾಸನ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಂಗಳವಾರ ಸಂಜೆ ಮಹಿಳೆಯೊಬ್ಬರ ಸರ ಕಳವಿಗೆ ಯತ್ನಿಸಿದ ಆರೋಪಿಯನ್ನು ಸ್ಥಳೀಯರು ಥಳಿಸಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಹಿಳೆಯೊಬ್ಬರು ಮಗು ಹಿಡಿದುಕೊಂಡು ಬಸ್ ಹತ್ತುತ್ತಿದ್ದರು. ಈ ವೇಳೆ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರ ಕದಿಯಲು ಯತ್ನಿಸಿದ್ದಾನೆ. ಪಕ್ಕದಲ್ಲಿದ್ದ ಇನ್ನೊಬ್ಬ ಮಹಿಳೆ ಅದನ್ನು ತಪ್ಪಿಸಿ, ಕೂಗಿ ಕೊಂಡಿದ್ದಾರೆ. ಈ ವಿಷಯ ತಿಳಿದ ಸ್ಥಳೀಯರು ಆತನನ್ನು ಹಿಡಿದು ಥಳಿಸಿದ್ದಾರೆ. ನಂತರ ಆರೋಪಿಯನ್ನು ನಗರಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.