ADVERTISEMENT

ಹಾಸನ: ಜಿಲ್ಲೆಯಲ್ಲಿ ಸಂಭ್ರಮದ ಕ್ರಿಸ್‌ಮಸ್‌

ಭಕ್ತರಿಗೆ ಕೇಕ್‌ ವಿತರಣೆ, ಮೇಣದ ಬತ್ತಿ ಹಚ್ಚಿ ಕ್ರಿಸ್ತನಿಗೆ ನಮನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 17:19 IST
Last Updated 25 ಡಿಸೆಂಬರ್ 2018, 17:19 IST
ಮೇಣದ ಬತ್ತಿ ಹಚ್ಚಿ ಕ್ರಿಸ್ತನಿಗೆ ನಮನ.
ಮೇಣದ ಬತ್ತಿ ಹಚ್ಚಿ ಕ್ರಿಸ್ತನಿಗೆ ನಮನ.   

ಹಾಸನ: ಕ್ರಿಸ್ತನ ಜಯಂತಿಯನ್ನು ಜಿಲ್ಲೆಯಲ್ಲಿ ಕ್ರೈಸ್ತಬಾಂಧವರು ಸಂಭ್ರಮ, ಸಡಗರದಿಂದ ಆಚರಿಸಿದರು.

ನಗರ ಸೇರಿದಂತೆ ಆಲೂರು, ಅರಕಲಗೂಡು, ಅರಸೀಕೆರೆ, ಹೊಳೆನರಸೀಪುರ, ಚನ್ನರಾಯಪಟ್ಟಣ, ಬೇಲೂರು, ಸಕಲೇಶಪುರ ತಾಲ್ಲೂಕುಗಳಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಚರ್ಚ್ ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ನಗರದ ಆರ್ ಸಿ ರಸ್ತೆಯ ಸಿಎಸ್ಐ ವೆಸ್ಲಿ ಚರ್ಚ್, ಎನ್.ಆರ್.ವೃತ್ತದ ಸಂತ ಅಂತೋನಿ ದೇವಾಲಯದಲ್ಲಿ ಬೆಳಿಗ್ಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಹೊಸ ಉಡುಗೆ ಧರಿಸಿ ಗುಂಪು ಗುಂಪಾಗಿ ಬಂದು ಪ್ರಾರ್ಥನೆ ಸಲ್ಲಿಸಿ, ಮೇಣದ ಬತ್ತಿಗಳನ್ನು ಹಚ್ಚಿ ಕ್ರಿಸ್ತನಿಗೆ ನಮಿಸಿದರು.

ADVERTISEMENT

ಅಂತೋನಿ ದೇವಾಲಯದಲ್ಲಿ ಫಾ.ರೊನಾಲ್ಡ್‌ ಕರ್ಡೋಜಾ ಅವರು ಮಾತನಾಡಿ, ‘ದೇವರು ನಮ್ಮ ಹೃದಯದಲ್ಲಿ ನೆಲೆಸಿರುವಾಗ ಕಷ್ಟ, ನೋವಿಗೆ ಹೆದರದೆ, ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು. ಜಗತ್ತಿನಲ್ಲಿ ಸುಖ, ಶಾಂತಿ ನೆಲೆಸಬೇಕು. ಒಳ್ಳೆಯ ದಾರಿಯಲ್ಲಿ ಸಾಗಬೇಕು. ಪರರ ಕಷ್ಟಗಳಿಗೆ ಸ್ಪಂದಿಸುವ ಮನಸ್ಸು ದೇವರು ನೀಡಲಿ’ ಎಂದು ಪ್ರಾರ್ಥಿಸಿದರು.

ದೇವಾಲಯದಲ್ಲಿ ರಾತ್ರಿ ಕ್ರಿಸ್ತನ ಆರಾಧನೆ, ಬಲಿಪೂಜೆ, ವಿಶೇಷ ಪ್ರಾರ್ಥನೆ ನಡೆಯಿತು. ಕ್ರಿಸ್ತನ ಜನನ ಕುರಿತ ನೃತ್ಯರೂಪಕ ನೋಡುಗರ ಮನಸೂರೆಗೊಂಡಿತು. ಬಳಿಕ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಬಂದ ಭಕ್ತರಿಗೆಲ್ಲಾ ಕೇಕ್‌ ವಿತರಿಸಲಾಯಿತು. ಚರ್ಚ್‌ ಆವರಣದಲ್ಲಿನ ಗೋದಲಿ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದ ದೃಶ್ಯ ಕಂಡು ಬಂತು.

ಸಿಐಸ್‌ಐ ವೆಸ್ಲಿ ಚರ್ಚ್‌ನಲ್ಲೂ ಹಬ್ಬದ ವಾತಾವರಣ ಕಂಡು ಬಂತು. ಮಕ್ಕಳು, ವಯೋವೃದ್ಧರು ಸೇರಿದಂತೆ ಕುಟುಂಬದ ಸಮೇತ ವಿಶೇಷ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು. ಚರ್ಚ್‌ನ ಸಭಾಪಾಲಕ ವಿ.ದೇವಕುಮಾರ್‌ ಅವರು ಕ್ರಿಸ್ತನ ಸಂದೇಶ ತಿಳಿಸಿದರು. ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ನಗರದ ಎಸ್‌ಐಬಿ ಕಾಲೊನಿ, ರಕ್ಷಣಾಪುರಂ, ಕೆ.ಆರ್.ಪುರಂ, ಹನುಮಂತಪುರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕ್ರೈಸ್ತರು ಸಂಭ್ರಮದಿಂದ ಹಬ್ಬ ಆಚರಿಸಿದರು.

ಸ್ನೇಹಿತರು, ನೆರೆಹೊರೆಯವರು ಹಾಗೂ ನೆಂಟರ ಮನೆಗೆ ಮಕ್ಕಳು, ಹಿರಿಯರು ತೆರಳಿ ಫ್ರೂಟ್ಸ್‌ ಕೇಕ್‌ ಹಾಗೂ ಸಿಹಿತಿಂಡಿ ವಿತರಿಸಿ ಶುಭಾಶಯ ಕೋರಿದರು.

ಮನೆಯಲ್ಲಿ ಚಿಕನ್‌, ಮಟನ್‌ ಬಿರಿಯಾನಿ ಹಾಗೂ ವಿಶೇಷ ಖಾದ್ಯ ತಯಾರಿಸಿ, ಸ್ನೇಹಿತರು, ಬಂಧು ಮಿತ್ರನ್ನು ಆಹ್ವಾನಿಸಿ ಹಬ್ಬದೂಟ ನೀಡಿದರು.

ಚರ್ಚ್‌ಗಳು ಮತ್ತು ಮನೆಯಲ್ಲಿ ಬಾಲ ಏಸುವಿನ ಜನ್ಮ ಸಂದೇಶ ಸಾರುವ ಗೋದಲಿ ನಿರ್ಮಿಸಲಾಗಿತ್ತು. ಮೇರಿ, ಜೋಸೆಫ್‌, ಬಾಲ ಏಸು, ನಕ್ಷತ್ರ, ಕುರಿ, ಹಸು, ಕೊಟ್ಟಿಗೆ ಹೀಗೆ ಏಸು ಜನನದ ಚಿತ್ರಣ ಕಟ್ಟಿಕೊಂಡು ಗೊಂಬೆಗಳನ್ನು ಕೂರಿಸುವುದು ಸಂಪ್ರದಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.