ADVERTISEMENT

ಕಾನೂನಿನಲ್ಲಿ ಅಲ್ಪಾವಧಿ ಟೆಂಡರ್‌ಗೆ ಅವಕಾಶ

ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟ: ಸಚಿವ ರೇವಣ್ಣ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 19:03 IST
Last Updated 3 ಜನವರಿ 2019, 19:03 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ‘ಅಲ್ಪಾವಧಿ ಟೆಂಡರ್‌ ಕರೆಯಲು ಕಾನೂನಿನಲ್ಲಿ ಅವಕಾಶ ಇರುವುದರಿಂದ ಇ–ಪ್ರಕ್ಯೂರ್‌ಮೆಂಟ್‌ ಮೂಲಕ ಕರೆಯಲಾಗಿದೆ’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

‘ಲೋಕೋಪಯೋಗಿಯಲ್ಲಿ ‘ಅಲ್ಪಾವಧಿ ಟೆಂಡರ್‌’ ಸುಗ್ಗಿ ಕುರಿತ ‘ಪ್ರಜಾವಾಣಿ’ ವರದಿಗೆ ಪ್ರತಿಕ್ರಿಯಿಸಿದ ಅವರು, ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕ ಕಾಯ್ದೆ –2000ರ (ಕೆಟಿಪಿಪಿ ಕಾಯ್ದೆ) ನಿಯಮಾವಳಿಗಳನ್ನು ಉಲ್ಲಂಘಿಸಿಲ್ಲ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದಲ್ಲಿ ತುರ್ತು ರಸ್ತೆ ನಿರ್ವಹಣೆ ಕಾಮಗಾರಿಗೆ ₹ 2.78 ಕೋಟಿ ಹಾಗೂ ಲೋಕೋಪಯೋಗಿ ವಿಭಾಗದಲ್ಲಿ ₹ 12 .52 ಕೋಟಿಗೆ ಟೆಂಡರ್‌ಗಳನ್ನು ಕರೆಯಲಾಗಿದ್ದು, ವಿಶ್ವದ ಯಾವುದೇ ಭಾಗದಿಂದ ಟೆಂಡರ್‌ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಟೆಂಡರ್‌ಗಳನ್ನು ಆಹ್ವಾನಿಸುವ ಮತ್ತು ಒಪ್ಪಿಗೆ ನೀಡುವ ಮುನ್ನ ಟೆಂಡರ್‌ ಬುಲೆಟಿನ್‌ ಹೊರಡಿಸಲಾಗಿದೆ ಮತ್ತು ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳು ಇವೆ. ಟೆಂಡರ್‌ನಲ್ಲಿ ಯಾರು ಭಾಗವಹಿಸದಿದ್ದಾಗ ಮತ್ತೆ ಅವಕಾಶ ನೀಡಲಾಗುವುದು’ ಎಂದು ಹೇಳಿದರು.

ADVERTISEMENT

‘ಲೋಕಸಭಾ ಚುನಾವಣೆ ನೀತಿ ಸಂಹಿತೆಗೂ, ಅಭಿವೃದ್ಧಿ ಕಾಮಗಾರಿಗೂ ಸಂಬಂಧವಿಲ್ಲ. ಮಳೆಗಾಲ ಪ್ರಾರಂಭವಾಗುವ ಮುನ್ನ ಹಾಗೂ ಮಾರ್ಚ್‌ ಅಂತ್ಯದೊಳಗೆ ಅನುದಾನ ಬಳಸಬೇಕಾಗಿದೆ. ಹಾಗಾಗಿ ಕಾಮಗಾರಿ ಕೈಗೆತ್ತಿಗೊಳ್ಳಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 373ರ ವಾರ್ಷಿಕ ನಿರ್ವಹಣಾ ಕಾಮಗಾರಿಗೆ ಡಿ. 28ರಂದು ಟೆಂಡರ್‌ ಕರೆಯಲಾಗಿದ್ದು, ಜ.4ರಂದು ಟೆಂಡರ್ ಬಿಡ್‌ ತೆರೆಯಲಾಗುತ್ತದೆ. ನಿಯಮ ಪ್ರಕಾರ ಏಳು ದಿನ ಅವಕಾಶ ನೀಡಲಾಗಿದೆ. ಎಲ್ಲಿ ಕಾನೂನು ಉಲ್ಲಂಘನೆಯಾಗಿದೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.