
ಹಾಸನ: ‘ಕನ್ನಡ ಭಾಷೆಯು ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ ಹೊಂದಿದೆ. ಈಗಿನ ಯುವಜನರು ಕನ್ನಡಮಾತೆಯನ್ನು ಗೌರವಿಸುವಂತೆ, ಭಾಷೆಯನ್ನೂ ಕೂಡ ಗೌರವಿಸಿ ಉಳಿಸಬೇಕಾಗಿದೆ’ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೆ.ಫಾ.ಪ್ರಶಾಂತ ಮಾಡ್ತಾ ಹೇಳಿದರು.
ನಗರದ ಬಿ.ಕಾಟೀಹಳ್ಳಿಯ ಸಂತ ಜೋಸೆಫರ ಕಾಲೇಜಿನಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕರುನಾಡ ಹಬ್ಬವನ್ನು ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಗೂ ಕುಟುಂಬದ ಬಗ್ಗೆ ನಂಬಿಕೆ ಇರಬೇಕು. ಕೊನೆಯವರೆಗೂ ಸಮಾಜ ಸೇವೆಯ ನಿಯತ್ತು ಇರಬೇಕು. ಕುಟುಂಬಕ್ಕೆ ವ್ಯಕ್ತಿ ಆಧಾರವಾದಂತೆ, ಕನ್ನಡ ನಾಡು–ನುಡಿಗೂ ಆಧಾರ ಆಗಬೇಕು. ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿಯನ್ನು ಸಾಮರಸ್ಯದಿಂದ ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಮ್ಯಾಕ್ಸಿಂ ಡಯಾಸ್ ಮಾತನಾಡಿ, ವಿದ್ಯಾರ್ಥಿಗಳು ಸ್ವಂತಿಕೆ ಮತ್ತು ಸ್ವಾಭಿಮಾನದಿಂದ ಸುಂದರ ಬದುಕು ಕಟ್ಟಿಕೊಳ್ಳಲು ಪ್ರಯತ್ನ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಮುಖ್ಯಸ್ಥ ರೆ.ಫಾ.ಲಿಯೋ ಪಿರೇರಾ ಮಾತನಾಡಿ, ಕನ್ನಡ ಭಾಷೆ ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದು. ಹಲವು ಭಾಷೆಗಳ ಒಡನಾಟದಿಂದ ಇಂದು ಶಾಸ್ತ್ರೀಯ ಭಾಷೆಯ ಸ್ಥಾನಮಾನ ಗಳಿಸಿದೆ. ಕನ್ನಡ ನಾಡಿನ ಜನರು ಸರ್ವ ಜನಾಂಗದ ಶಾಂತಿಯ ತೋಟದಂತೆ ಬದುಕುತ್ತಿರುವುದು ವಿಶೇಷ ಎಂದು ತಿಳಿಸಿದರು.
ಕಾರ್ಯಕ್ರಮದ ಸಂಚಾಲಕ, ಕನ್ನಡ ವಿಭಾಗದ ಮುಖ್ಯಸ್ಥ ಡಿ.ಬಿ.ರಂಗೇಗೌಡ ಮಾತನಾಡಿದರು. ಕರುನಾಡ ಹಬ್ಬದಲ್ಲಿ ಕರ್ನಾಟಕ ಇತಿಹಾಸ, ಸಂಸ್ಕೃತಿ ಬಿಂಬಿಸುವ ಗಾಯನ, ಪ್ರಬಂಧ, ಚಿತ್ರಕಲೆ, ಕಿರು ವಿಡಿಯೋ ತಯಾರಿಕೆ ಮತ್ತು ನೃತ್ಯ ಸಂಗಮ ಸ್ಪರ್ಧೆ ಏರ್ಪಡಿಸಲಾಗಿತ್ತು.
ಕನ್ನಡ ಪದನಿಧಿ ರಚನೆಕಾರ, ನಿಘಂಟು ತಜ್ಞ ರೆ.ಫಾ. ಪ್ರಶಾಂತ್ ಮಾಡ್ತಾ ಅವರನ್ನು ಬಿ.ಕಾಟೀಹಳ್ಳಿ ಗ್ರಾಮದಿಂದ ಅರಸೀಕೆರೆ ಮುಖ್ಯರಸ್ತೆಯವರೆಗೆ ವೀರಗಾಸೆ, ಚಿಟ್ಟಿಮೇಳ, ವಾದ್ಯ, ಇನ್ನಿತರ ವಿವಿಧ ಕಲಾತಂಡಗಳು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ಮೆರವಣಿಗೆ ಮಾಡಲಾಯಿತು.
ಸಹ ಸಂಚಾಲಕ, ಉಪನ್ಯಾಸಕ ಮೋಹನ್ ಎ.ಪರಿಚಯಿಸಿದರು. ಕ್ಯಾಂಪಸ್ ಆನಿಮೇಟರ್ ರೆ.ಫಾ. ಓಲ್ವಿನ್ ವೇಗಸ್, ಹಣಕಾಸು ಅಧಿಕಾರಿ ರೆ.ಫಾ.ರಯಾನ್ ಪಿರೇರಾ, ಉಪ ಪ್ರಾಂಶುಪಾಲ ಪ್ರದೀಪ್ ಕುಮಾರ್, ಉಪನ್ಯಾಸಕಿ ಮೋನಿಕಾ, ಕನ್ನಡ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪಾಂಡಿತ್ಯ ಯೂರೋ ಶಾಲೆಯಲ್ಲಿ ರಾಜ್ಯೋತ್ಸವ
ಹಾಸನ: ನಗರದ ಬೇಲೂರು ರಸ್ತೆಯ ಬಸವೇಶ್ವರ ನಗರದ ಪಾಂಡಿತ್ಯ ಯೂರೋ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲ ಡಾ.ವಿಶ್ವನಾಥ್ ಬಿ.ಕೋಳಿವಾಡ ಮಾತನಾಡಿ ಕನ್ನಡ ನಾಡು ನುಡಿ ಜಲದ ಬಗ್ಗೆ ನಾವು ಯಾವ ರೀತಿಯಾಗಿ ದುಡಿಯಬೇಕು? ನಮ್ಮ ಮಾತೃಭಾಷೆ ಕನ್ನಡ ಯಾವತ್ತಿಗೂ ಅದು ತಾಯಿ. ಬೇರೆ ಭಾಷೆಗಳು ಕೇವಲ ಸಂಬಂಧಿಕರಷ್ಟೇ ಎನ್ನುವುದನ್ನು ತಿಳಿಸಿದರು. ಮಕ್ಕಳು ವಿವಿಧ ಮನರಂಜನೆ ಚಟುವಟಿಕೆ ನಡೆಸಿದರು. ಉಪ ಪ್ರಾಂಶುಪಾಲ ಡಾ. ಸೆಬಾಸ್ಟಿಯನ್ ಟಿ.ಡಿ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮಕ್ಕಳು ಹಾಗೂ ಪೋಷಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.