ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸೋಮವಾರ ಎರಡು ದಿನಗಳ ಹಾಸನ ಸಾಹಿತ್ಯೋತ್ಸವವನ್ನು ಡಾ.ಹಂಪ ನಾಗರಾಜಯ್ಯ ಉದ್ಘಾಟಿಸಿದರು.
ಹಾಸನ: ‘ನಮ್ಮ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಬಹುದೊಡ್ಡ ಕವಿಪರಂಪರೆ ಇದೆ’ ಎಂದು ಸಾಹಿತಿ ಡಾ.ಹಂಪ ನಾಗರಾಜಯ್ಯ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸೋಮವಾರ ಆರಂಭವಾದ ಎರಡು ದಿನಗಳ ಹಾಸನ ಸಾಹಿತ್ಯೋತ್ಸವ-2025ಅನ್ನು ಹೊಂಬಾಳೆ ತೆರೆದು ರಾಶಿಗೆ ಭತ್ತ ಸುರಿಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದಲ್ಲೇ ಯಾರೊಬ್ಬರೂ ಮುಟ್ಟಲೂ ಧೈರ್ಯ ಮಾಡದ ವ್ಯಾಸ ಭಾರತವನ್ನು ಪಂಪ ಮಹಾಕವಿ ಕನ್ನಡಕ್ಕೆ ವಿಕ್ರಮಾರ್ಜುನ ವಿಜಯವಾಗಿ ತಂದನು. ಇದು ರಚನೆಯಾಗಿದ್ದು ಕೇವಲ 6 ತಿಂಗಳ ಅಂತರದಲ್ಲಿ ಎಂಬುದು ಗಮನಾರ್ಹ. ರನ್ನ, ಕುಮಾರವ್ಯಾಸ ಅವರೂ ಶ್ರೇಷ್ಠ ಕೃತಿ ನೀಡಿದರು’ ಎಂದು ತಿಳಿಸಿದರು.
‘ಆಗಿನಿಂದಲೂ ಪ್ರಾಕೃತ-ಸಂಸ್ಕೃತವನ್ನು ತಾಯಿಯ ಎರಡು ಮೊಲೆ ಹಾಲಂತೆ ಓದಿ, ಜೀರ್ಣಿಸಿಕೊಂಡು, ಭಾಷಾಂತರ, ಅನುವಾದ, ಟ್ರಾನ್ಸ್ ಕ್ರಿಯೇಶನ್ ಮಾಡಿದವರು ನಮ್ಮ ಪುರಾತನ ಕವಿಗಳು. ಅನ್ಯಭಾಷೆಯ ಮೇರು ಕೃತಿಗಳು ಕನ್ನಡಕ್ಕೆ ಕೇವಲ ಭಾಷಾಂತರಗೊಳ್ಳಲಿಲ್ಲ, ಬದಲಾಗಿ ಹೊಸ ಬೆಳಕು, ಕಾಂತಿಯಾಗಿ ಬಂದವು. ಮೂಲದಲ್ಲಿ ಇಲ್ಲದೇ ಇರುವುದನ್ನು ನಮ್ಮ ಕವಿಗಳು ಅಸಾಧಾರಣವಾಗಿ ಮರು ಸೃಷ್ಟಿಸಿದ್ದಾರೆ. ಅಂತಹ ಕನ್ನಡ ಕವಿಗಳ ಸೃಜನಶೀಲತೆ, ಧಾರಣತ್ವ, ವಿಸ್ತಾರ, ಅನನ್ಯತೆಯ ವೈಭವನ್ನು ಮನಗಾಣಿಸುವ ವೇದಿಕೆ ಇದು’ ಎಂದು ಬಣ್ಣಿಸಿದರು.
‘ಶಾತವಾಹನ ರಾಜ ಹಾಲರಾಜ, ಬಾದಾಮಿ ಚಾಲುಕ್ಯ ಅರಸ ಪುಲಕೇಶಿ, ರಾಷ್ಟ್ರಕೂಟರ ಕಾಲದಲ್ಲಿ ಅರಿಕೇಸರಿ, ಕ್ರಿ.ಶ.1100 ರಲ್ಲಿ ಮೊಟ್ಟ ಮೊದಲ ಬಾರಿಗೆ ನಾಡೋಜ ಪ್ರಶಸ್ತಿಗೆ ಭಾಜನರಾದ ಪಂಪ ಮಹಾಕವಿ ಅವಧಿಯಿಂದಲೂ ಕನ್ನಡ ಸಾಹಿತ್ಯ ಸಂಭ್ರಮಕ್ಕೆ ಅವಿಚ್ಛಿನ್ನ, ಸುದೀರ್ಘ ಇತಿಹಾಸ ಇದೆ’ ಎಂದು ವಿವರಿಸಿದರು.
‘ಇಂಥ ಸಂಭ್ರಮ ಜಿಲ್ಲಾಮಟ್ಟದಲ್ಲೂ ಮೇಳೈಸಬೇಕು. ಅರ್ಥವಂತಿಕೆ ಸಿಗಬೇಕು ಎಂಬ ಕಾರಣಕ್ಕೆ ಹಾಸನದಲ್ಲಿ 2ನೇ ಬಾರಿಗೆ ಸಾಹಿತ್ಯದ ವಿವಿಧ ಪ್ರಾಕಾರಗಳನ್ನು ಸಂಭ್ರಮಿಸುವ ಕಾರ್ಯಕ್ರಮ ಆಯೋಜನೆ ಮಾಡಿರುವುದಕ್ಕೆ’ ಮೆಚ್ಚುಗೆ ವ್ಯಕ್ತಪಡಿಸಿದರು.
‘ಇಡೀ ದೇಶವೇ ಗುರುತಿಸಿರುವ ಡಾ.ಚಂದ್ರಶೇಖರ ಕಂಬಾರರನ್ನು ಈ ಉತ್ಸವಕ್ಕೆ ಅಧ್ಯಕ್ಷರನ್ನಾಗಿ ಮಾಡಿರುವುದು ಅರ್ಥಪೂರ್ಣ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಮಾತನಾಡಿ, ‘ಕನ್ನಡ ಸಾಹಿತ್ಯದಲ್ಲಿ ಸಂತೋಷ, ಲಕ್ಷ್ಮಣರಾವ್ ಅವರ ಕವನ ಓದಿದರೆ ಹೊಸ ಹುಮ್ಮಸ್ಸು ಬರಲಿದೆ. ಅನೇಕ ಪ್ರಕಾರಗಳಲ್ಲಿ ನಮ್ಮ ಕನ್ನಡ ಸಾಹಿತ್ಯ ಬೆಳೆದು ಬಂದಿದೆ. ನಾವು ಕನ್ನಡಿಗರು, ಮಾತೃಭಾಷೆ ಬಗ್ಗೆ ರಾಜಿ ಇಲ್ಲ. ಸಾಹಿತ್ಯದ ವಾತಾವರಣ ಹೆಚ್ಚು ಸೃಷ್ಟಿಯಾಗಲಿ’ ಎಂದು ಆಶಿಸಿದರು.
ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಕನ್ನಡ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇದು ಬದಲಾಗಬೇಕು. ಕನ್ನಡ ಓದುಗರು ಕಡಿಮೆಯಾದರೆ, ಕಷ್ಟದ ಕಾಲ ಎದುರಾಗಲಿದೆ’ ಎಂದು ಎಚ್ಚರಿಸಿದರು.
‘ಕನ್ನಡ ಓದಿದರೆ ಸಾಹಿತ್ಯವೂ ಬೆಳೆಯಲಿದೆ. ಅಂತಹ ಬದಲಾವಣೆ ತರುವ ಕೆಲಸ ಈ ಮೂಲಕ ಆಗಬೇಕು. ಹೆಚ್ಚು ಜನ ಕನ್ನಡ ಓದೋಣ. ಸಾಹಿತ್ಯ ಅಧ್ಯಯನ ಮಾಡೋಣ, ಆ ಅಭ್ಯಾಸ ಬೆಳೆಸಿಕೊಳ್ಳೋಣ’ ಎಂದು ಸಲಹೆ ನೀಡಿದರು.
ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ಕೇಂದ್ರ ಕಸಾಪ ಕೋಶಾಧ್ಯಕ್ಷ ಪಟೇಲ್‍ಪಾಂಡು, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಮಾತನಾಡಿದರು. ಸಾಹಿತ್ಯೋತ್ಸವದ ಅಧ್ಯಕ್ಷ ಎಚ್.ಬಿ.ಮದನಗೌಡ ಇದ್ದರು. ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನಕುಮಾರ್ ನಿರೂಪಿಸಿದರು. ಬಿ.ಆರ್.ಬೊಮ್ಮೇಗೌಡ ವಂದಿಸಿದರು.
ಕನ್ನಡದ ಕತೆಗಳು ಅದ್ಭುತ
‘ನನಗೆ ಕನ್ನಡದ ಬಗ್ಗೆ ಕನ್ನಡಿಗರ ಬಗ್ಗೆ ಬಹಳ ಹೆಮ್ಮೆ ಇದೆ. ಮುಂದೆಯೂ ಕರುನಾಡಲ್ಲೇ ಹುಟ್ಟಬೇಕು ಎಂಬುದು ನನ್ನ ಆಶಯ. ಕನ್ನಡ ಪವಿತ್ರ ಭಾಷೆ ಕರ್ನಾಟಕ ಹೆಮ್ಮೆಯ ಬೀಡು’ ಎಂದು ನಾಟಕಕಾರ ಡಾ.ಚಂದ್ರಶೇಖರ ಕಂಬಾರ ಹೇಳಿದರು.
ಸಾಹಿತ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಮತ್ತೊಂದು ಅತಿಶಯದ ಸಂಗತಿ ಎಂದರೆ ಕನ್ನಡಿಗರ ಹಾಗೆ ಕತೆ ಹೇಳುವವರು ಬೇರೆ ಯಾವುದೇ ಭಾಷೆಯಲ್ಲೂ ಇಲ್ಲ. ಕತೆ ನಮ್ಮಲ್ಲಿ ಬೇಗ ಹುಟ್ಟಲಿವೆ. ಕತೆಯ ಹುಟ್ಟು ಸೃಷ್ಟಿಸುವಲ್ಲಿ ನಾವು ಮೊದಲಿಗರು. 85 ಸಾವಿರ ಜಾನಪದ ಕತೆಗಳು ನಮ್ಮಲ್ಲಿವೆ. ಈ ಬಗ್ಗೆ ಅತೀವ ಹೆಮ್ಮೆ ಇದೆ. ಕತೆ ಹೇಳುವವರು ಕೇಳುವವರು ಹಾಗೂ ಸೃಷ್ಟಿಸುವವರು ಎಲ್ಲೂ ಇಲ್ಲ. ಇಂಥ ಸೃಜನಶೀಲತೆ ಪ್ರಪಂಚದ ಯಾವುದೇ ಭಾಷೆಗಿಲ್ಲ. ಕನ್ನಡ ಕತೆಗಳು ಅದ್ಭುತ ಎನಿಸಿಕೊಂಡಿವೆ. ಇದು ನಮ್ಮ ಹಿರಿಮೆ’ ಎಂದರು.
‘ಕನ್ನಡ ಉಳಿಸುವ ಕೆಲಸ ಎಲ್ಲರಿಂದಲೂ ಆಗಬೇಕು. ಬೇರೆ ಭಾಷೆ ಸಂಪರ್ಕ ಬಂದಾಗ ಅದನ್ನು ಕಲಿತರೂ ನಮ್ಮ ಭಾಷೆ ಮರೆಯಬಾರದು. ನಮ್ಮ ಭಾಷೆ ಉಳಿಸಿಕೊಂಡು ಬೇರೆ ಭಾಷೆ ಕಲಿಯಬೇಕು. ಆ ಭಾಷಿಗರೇ ಆಗಬಾರದು’ ಎಂದು ಎಚ್ಚರಿಸಿದರು.
‘ವಚನ ಸಾಹಿತ್ಯವನ್ನು ಬೇರೆಲ್ಲೂ ಕಾಣಲು ಸಾಧ್ಯವೇ ಇಲ್ಲ. ಸುಮಾರು ಹಲವು ದೇಶಗಳಲ್ಲಿ ಪಠ್ಯ ಆಗಿದೆ. ಇಂಥ ಸೌಭಾಗ್ಯ ಯಾವ ಭಾಷೆಗೂ ಇಲ್ಲ. ನನ್ನ ಭಾಷೆಗೆ ದೇಶದಲ್ಲೇ ವಿಶೇಷ ಸ್ಥಾನಮಾನ ಇರುವುದು ಹೆಮ್ಮೆಯ ವಿಷಯ’ ಎಂದರು.
ಸಾಹಿತ್ಯ ರಸದೌತಣ ಮುಂದುವರಿಕೆ
‘ಧಾರವಾಡ ಸಾಹಿತ್ಯ ಸಂಭ್ರಮದ ಪ್ರೇರಣೆಯಿಂದ ಎರಡನೇ ಬಾರಿಗೆ ಹಾಸನದಲ್ಲಿ ಸಾಹಿತ್ಯೋತ್ಸವ ಮಾಡುತ್ತಿದ್ದೇವೆ. ಗಿರಡ್ಡಿ ಗೋವಿಂದರಾಜು ರಾಘವೇಂದ್ರ ಪಾಟೀಲ ಮೊದಲಾದವರು ಉಣ ಬಡಿಸಿದ ಸಾಹಿತ್ಯದ ರಸದೌತಣವನ್ನು ಮುಂದುವರಿಸುವ ಪುಟ್ಟ ಹೆಜ್ಜೆ ನಮ್ಮದು’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಹೇಳಿದರು.
ಆಶಯ ನುಡಿಗಳನ್ನಾಡಿದ ಜೋಗಿ ‘ಕ್ರೌರ್ಯ ಕಾರುಣ್ಯದ ಕಣ್ಣು ಬದಲಿಸುವ ಶಕ್ತಿ ಇರುವುದು ಸಾಹಿತ್ಯಕ್ಕೆ. ತಾಪ ತಪ ಮಾಡುವ ಎಲ್ಲರ ನೋವು ನಮ್ಮ ನೋವು ಎಂದು ಸ್ಪಂದಿಸಿ ಸಮಾಧಾನ ಮಾಡುವುದು ಸಾಹಿತ್ಯ. ಈ ಸಾಹಿತ್ಯದ ಸೌರಭ ಎಲ್ಲರಿಗೂ ಮುಟ್ಟಬೇಕು ಎಂಬುದು ಈ ಕಾರ್ಯಕ್ರಮದ ಆಶಯ’ ಎಂದರು. ಗೋಷ್ಠಿಗಳಲ್ಲಿ ನ್ಯಾಯ ‘2022 ರ ಅಕ್ಟೋಬರ್‌ನಲ್ಲಿ ಧಾರವಾಡದ ಸಾಹಿತ್ಯ ಸಂಭ್ರಮ ಮಾದರಿ ಹೊಯ್ಸಳ ಸಾಹಿತ್ಯೋತ್ಸವ ನಡೆದು ಯಶಸ್ಸು ಕಂಡಿತು. ಇದೀಗ 2ನೇ ಆವೃತ್ತಿ ನಡೆಯುತ್ತಿದೆ’ ಎಂದು ಸಂಚಾಲಕ ಬಿ.ಆರ್.ಲಕ್ಷ್ಮಣರಾವ್ ತಿಳಿಸಿದರು.
‘ಸಾಹಿತ್ಯ ವಿಚಾರಗೋಷ್ಠಿ ಆಯೋಜನೆಯಲ್ಲಿ ಸಾಹಿತ್ಯಿಕ ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯ ಒದಗಿಸಲಾಗಿದೆ. ರಂಗಭೂಮಿ ಪರಿಸರ ಗೀತೆ ಸಂಗೀತ ಕೃತಕ ಬುದ್ಧಿಮತ್ತೆ ಮಹಿಳಾ ಸಾಹಿತ್ಯದ ಮೇಲೆ ಚರ್ಚೆ ನಡೆಯಲಿದೆ. ಹಿರಿಯ ಸಾಹಿತಿಗಳ ಜೊತೆಗೆ ಯುವ ಸಾಹಿತಿಗಳೂ ಭಾಗಿಯಾಗುವರು. ಇದು ಎಲ್ಲರಿಗೂ ಪ್ರಿಯ ಆಗಲಿದೆ’ ಎಂದು ಆಶಯ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.