ಶ್ರವಣಬೆಳಗೊಳ: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಾ.ಸಿದ್ಧಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ಗುರುವಾರ ಇಲ್ಲಿನ ಜೈನ ಮಠದ ಚಾವುಂಡರಾಯ ಸಭಾ ಮಂಟಪದಲ್ಲಿ ಗಾಯಕ ಎಚ್.ಜನಾರ್ದನ್, ಸಾಹಿತಿ ಶೂದ್ರ ಶ್ರೀನಿವಾಸ ಅವರಿಗೆ ಪ್ರದಾನ ಮಾಡಲಾಯಿತು.
ಸಮಾರಂಭದ ಉದ್ಘಾಟಿಸಿ ಮಾತನಾಡಿದ ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ‘ಸಿದ್ಧಲಿಂಗಯ್ಯ ಅವರು ಸಾಹಿತ್ಯವನ್ನು ಸಂಪೂರ್ಣವಾಗಿ ಬಲ್ಲವರಾಗಿದ್ದರು. ಗಾಯಕ ಎಚ್.ಜನಾರ್ದನ್ ಮತ್ತು ಸಾಹಿತಿ ಶೂದ್ರ ಶ್ರೀನಿವಾಸ ಅವರು ಕನ್ನಡದ ಅಸ್ತಿತ್ವಕ್ಕಾಗಿ ಸೈನಿಕರಂತೆ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಪ್ರಶಸ್ತಿಗೆ ಲಭಿಸಿರುವುದು ಅರ್ಥಪೂರ್ಣ’ ಎಂದು ಹೇಳಿದರು.
‘ಸಾಮಾಜಿಕ ನ್ಯಾಯ, ಸಮಾನತೆಗಾಗಿ ಹೋರಾಡಿದ ಸಿದ್ಧಲಿಂಗಯ್ಯ ಅವರ ಕ್ರಾಂತಿ ಗೀತೆಗಳನ್ನು ಜನಾರ್ದನ್ ಬೆಳಕಿಗೆ ತಂದಿದ್ದು, ಶೂದ್ರ ಶ್ರೀನಿವಾಸ್ ಅವರು, ಸಿದ್ದಲಿಂಗಯ್ಯ ಅವರ ಸಾಹಿತ್ಯವನ್ನು ತಮ್ಮ ಪತ್ರಿಕೆಯಲ್ಲಿ ಮುದ್ರಿಸಿ ಜನ ಸಾಮಾನ್ಯರಿಗೆ ಮುಟ್ಟುವಂತೆ ಮಾಡಿದರು’ ಎಂದು ಪ್ರಶಂಸಿಸಿದರು.
ಕನ್ನಡ ನಾಡು, ನುಡಿಗೆ ಎಲ್ಲರೂ ಶ್ರಮಿಸೋಣ. ಕರ್ಮಯೋಗಿ ಚಾರುಕೀರ್ತಿ ಶ್ರೀಗಳು ಕ್ಷೇತ್ರದಲ್ಲಿ ಅದ್ದೂರಿಯಾಗಿ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದಂತೆ ಅವಕಾಶ ಕಲ್ಪಿಸಿದರೆ ಅದೇ ರೀತಿ ನಡೆಸುವುದಾಗಿ ಆಶಯ ವ್ಯಕ್ತಪಡಿಸಿದರು.
ಪ್ರಶಸ್ತಿ ಪುರಸ್ಕೃತ ಎಚ್. ಜನಾರ್ದನ್ ಮಾತನಾಡಿ, ‘ಮನೆಯನ್ನು ತೊರೆದು ಸಿದ್ಧಲಿಂಗಯ್ಯ ನೇತೃತ್ವದಲ್ಲಿ ದಲಿತ ಚಳವಳಿಯ ಮೂಲಕ ಬೀದಿಗೆ ಬಂದು ಹೋರಾಡಿದ್ದೇವೆ. ನಾವು ಜಾತಿ ಹೆಸರಿನಲ್ಲಿ ತುಳಿತಕ್ಕೆ ಒಳಗಾಗಿ, ಸಾಕಷ್ಟು ಅವಮಾನ ಸಹಿಸಿಕೊಂಡವರು’ ಎಂದರು.
‘ಸಿದ್ಧಲಿಂಗಯ್ಯ ಅವರ ಕವಿತೆಗಳನ್ನು ಜನಮಾನಸಕ್ಕೆ ತಲುಪಿಸುವಲ್ಲಿ ದುಡಿದಿದ್ದೇವೆ. ಅವರ ಸಾಹಿತ್ಯದಿಂದ ಅಮೂಲಾಗ್ರ ಸಾಮಾಜಿಕ ಬದಲಾವಣೆಯನ್ನು ಜನತೆಯಲ್ಲಿ ಕಂಡೆವು’ ಎಂದು ಹೇಳಿದ ಅವರು, ಗೀತೆ ಹೇಳಿ ಸಭಿಕರ ಗಮನ ಸೆಳೆದರು.
ಶೂದ್ರ ಶ್ರೀನಿವಾಸ್ ಮಾತನಾಡಿ, ‘ಕುವೆಂಪು ಅವರ ಒಡನಾಡಿಯಾಗಿದ್ದಾಗ, ಸಾಹಿತ್ಯ ರಚನೆಯಲ್ಲಿ ಬ್ರಾಹ್ಮಣರನ್ನು ಎಂದೂ ತೆಗಳಬೇಡ. ಅವರನ್ನು ಮೀರಿ ನೀನು ಬೆಳೆಯಬೇಕು ಎಂದು ನನ್ನನ್ನು ಹುರಿದುಂಬಿಸಿದ್ದರು’ ಎಂದು ಸ್ಮರಿಸಿದರು.
ಮಾನಸ ಸಿದ್ಧಲಿಂಗಯ್ಯ ಮಾತನಾಡಿದರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹೇಶ್ ಜೋಷಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎನ್. ಮಲ್ಲೇಶಗೌಡ ಅಭಿನಂದನಾ ನುಡಿಗಳನ್ನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎನ್.ಲೋಕೇಶ್ ಸ್ವಾಗತಿಸಿದರು. ಶಾಸಕ ಸಿ.ಎನ್. ಬಾಲಕೃಷ್ಣ ಪ್ರಶಸ್ತಿ ಪ್ರದಾನ ಮಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಅಫ್ತಾಬ್ ಪಾಷಾ, ಗೌರವ ಕಾರ್ಯದರ್ಶಿಗಳಾದ ಬಿ.ಎಂ.ಪಟೇಲ್ ಪಾಂಡು, ಎಚ್.ಬಿ.ಮದನ್ ಗೌಡ, ಸಿದ್ಧಲಿಂಗಯ್ಯರ ಪತ್ನಿ ರಮಾಕುಮಾರಿ ಸಿದ್ಧಲಿಂಗಯ್ಯ, ಬಿ.ಆರ್.ಯುವರಾಜ್, ವಿಜಯಕುಮಾರ್, ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿಗಳಾದ ಜಾವಗಲ್ ಪ್ರಸನ್ನಕುಮಾರ್, ಬಿ.ಆರ್. ಬೊಮ್ಮೇಗೌಡ ಇದ್ದರು. ಕವಿತಾ ರಾಜೇಶ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.